ಗುಂಡ್ಲುಪೇಟೆ ಹಿರೀಕಾಟಿ ಗ್ರಾಮದ ನಾಲ್ಕು ಕಲ್ಲು ಗಣಿ ಗುತ್ತಿಗೆಗಳಲ್ಲಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ₹12.95 ಕೋಟಿ ದಂಡ ವಿಧಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಅವಧಿಯೊಳಗೆ ಕಟ್ಟದಿದ್ದರೆ 5 ಪಟ್ಟು ದಂಡ ಕಟ್ಟಬೇಕು. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಚ್ಚರಿಕೆ

ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಗ್ರಾಮದ ಸ.ನಂ.108ರಲ್ಲಿ ಹರಿಜನ ಗಿರಿಜನ ಮತ್ತು ಹರಬಂಟೆ ಕೆಲಸಗಾರ ಸಹಕಾರ ಸಂಘ ಹೊಂದಿರುವ 4 ಕಲ್ಲು ಗಣಿ ಗುತ್ತಿಗೆಗಳಲ್ಲಿ ನಿಯಮ ಉಲ್ಲಂಘಿಸಿ ಅಧಿಕ ಹಾಗೂ ಒತ್ತುವರಿ ಗಣಿಗಾರಿಕೆ ನಡೆಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಒಂದು ಬಾರಿಯ ತೀರುವಳಿ (ಒಟಿಎಸ್) ಯೋಜನೆಯಡಿ ಒಟ್ಟು 12,95,17,290 ಕೋಟಿ ದಂಡ ಪಾವತಿಸುವಂತೆ ನೋಟಿಸ್ ನೀಡಿದೆ.

ನಿಗದಿತ ಸಮಯದೊಳಗೆ ದಂಡ ಪಾವತಿಸಲು ವಿಫಲವಾದರೆ, ಒಟಿಎಸ್ ರಿಯಾಯಿತಿ ತಕ್ಷಣ ಹಿಂಪಡೆಯಲಾಗುತ್ತದೆ. ಅದರ ನಂತರ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು-2026 ರ ನಿಯಮ-44(4) ರಂತೆ, ರಾಜಧನ ಪಾವತಿಸದೇ ಸಾಗಾಣಿಕೆ ಮಾಡಿರುವ ಪ್ರಮಾಣಕ್ಕೆ ರಾಜಧನದ 5 ಪಟ್ಟು ದಂಡ ಮತ್ತು ಕೃತ್ಯವು ಮರುಕಳಿಸಿದ ಪ್ರಕರಣಗಳಲ್ಲಿ 15 ಪಟ್ಟು ದಂಡವನ್ನು ವಿಧಿಸಿ ವಸೂಲಿ ಮಾಡಲು ನಿಯಮಾನುಸಾರ ಕ್ರಮವಹಿಸಲಾಗುತ್ತದೆ ಎಂದು ನೋಟಿಸ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಅಂದರೆ, ಈಗ ಒಟಿಎಸ್‌ನಲ್ಲಿ ಲೀಸ್ ನೀಡಿದ ಜಾಗದಲ್ಲಿ ಹೆಚ್ಚುವರಿ ಕಲ್ಲು ತೆಗೆದಿದ್ದಕ್ಕೆ ಟನ್‌ಗೆ 70 ರು. ಮತ್ತು ಲೀಸ್ ಜಾಗಕ್ಕಿಂತ ಒತ್ತುವರಿ ಮಾಡಿ ಕಲ್ಲು ತೆಗೆದು ಸಾಗಾಣಿಕೆ ಮಾಡಿದ್ದಕ್ಕೆ ಟನ್‌ಗೆ 140 ರು.ನಂತೆ ನಿಗದಿ ಮಾಡಿರುವ ದಂಡವನ್ನು ವಿಧಿಸಲಾಗಿದೆ.

ಎಷ್ಟು ದಂಡ?

ಗುತ್ತಿಗೆ ಸಂಖ್ಯೆ-160 ರ 4-00 ಎಕರೆಗೆ ರು.4,34,86,310, ಗುತ್ತಿಗೆ ಸಂಖ್ಯೆ-161 ರ 0-30 ಎಕರೆಗೆ ರು.52,20,670, ಗುತ್ತಿಗೆ ಸಂಖ್ಯೆ-753 ರ 6-24 ಎಕರೆಗೆ ರು.7,82,45,510, ಗುತ್ತಿಗೆ ಸಂಖ್ಯೆ-275 ರ 2-16 ಎಕರೆಗೆ ರು..25,64,800 ದಂಡ ಹಾಕಲಾಗಿದೆ.

ಆಕ್ಷೇಪಣೆ ತಿರಸ್ಕಾರ

ಸಂಘವು ಸಲ್ಲಿಸಿರುವ ಉತ್ತರಗಳನ್ನು ಪರಿಶೀಲಿಸಲಾಗಿ ನಿಯಮಾನುಸಾರ ರಾಜಧನ ಪಾವತಿಯಾಗಿರುವ ಕುರಿತು ಯಾವುದೇ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಉತ್ತರಗಳು ಸಮಂಜಸವಾಗಿರುವುದಿಲ್ಲ. ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಮನವಿಯನ್ನು ನಿಯಮಾನುಸಾರ ಪರಿಗಣಿಸಿರುವುದಿಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರೋಪ

ಚಿತ್ರದುರ್ಗ:ತಾಲೂಕಿನ ಮಾಡದಕೆರೆ ಹೋಬಳಿ ವ್ಯಾಪ್ತಿಯ ಲಕ್ಕಿಹಳ್ಳಿ ಗ್ರಾಮದ ಸರ್ವೇ ನಂ.88ರ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಣಿಗಾರಿಕೆ ನಡೆಸುತ್ತಿರುವ ಕಂಪನಿಯವರು ಇದು ತಮ್ಮ ಹಳೆಯ ಗಣಿ ಗುತ್ತಿಗೆ ಪ್ರದೇಶವಾಗಿದ್ದು, ಕಾನೂನು ಬದ್ಧವಾಗಿ ಪರವಾನಗಿ ನವೀಕರಿಸಿಕೊಂಡಿದ್ದೇವೆ. ಕಂದಾಯ ಇಲಾಖೆಯ ಉಲ್ಲು ಬನ್ನಿ ಖರಾಬ್‌ಗೆ ಸೇರಿದ ಸುಮಾರು 70 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅನುಮತಿ ಪಡೆದಿರುವ ಕಂದಾಯ ಭೂಮಿಯಲ್ಲಿ ಗಣಿಗಾರಿಕೆ ನಡೆಸದೆ, ಮೀಸಲು ಅರಣ್ಯ ಪ್ರದೇಶದ ಸರ್ವೆ ನಂ.88ರಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವಿದೆ ಎಂದು ತಿಳಿಸಿದ್ದಾರೆ.

ಗಣಿ ಗುತ್ತಿಗೆಗೆ ಸಂಬಂಧಿಸಿದ ಮೂಲ ದಾಖಲೆಗಳು, ಹಳೆಯ ಮತ್ತು ಪ್ರಸ್ತುತ ನಕ್ಷೆಗಳು, ಕಂದಾಯ ಹಾಗೂ ಅರಣ್ಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಬೇಕು. ನಕ್ಷೆಗಳಲ್ಲಿ ಬದಲಾವಣೆ ಮಾಡಿರುವ ಸಾಧ್ಯತೆಯ ಬಗ್ಗೆಯೂ ಅನುಮಾನವಿದ್ದು, ಅಧಿಕೃತ ಸರ್ವೇಯರ್‌ಗಳ ಮೂಲಕ ಜಂಟಿ ಸರ್ವೇ ನಡೆಸಿ ನೈಜ ಗಡಿ ಗುರುತಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಹೊಸದುರ್ಗ ನಗರದ ಗೊರವಿನಕಲ್ಲು ಸರ್ವೇ ನಂ.86, 87 ಮತ್ತು 88ರ ಡೀಮ್ಡ್ ಫಾರೆಸ್ಟ್ ವಿಚಾರ ಹಾಗೂ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಜಂತಕಲ್ ಮೈನ್ಸ್ ಪ್ರಕರಣಗಳನ್ನು ಉಲ್ಲೇಖಿಸಿರುವ ಅವರು, ಗಣಿ ಗುತ್ತಿಗೆ ಪ್ರದೇಶದ ನಕ್ಷೆ ಮತ್ತು ಸ್ಥಳದ ವಿಚಾರದಲ್ಲಿ ಗೊಂದಲಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿರುವುದು ದೃಢಪಟ್ಟರೆ ತಕ್ಷಣ ಗಣಿಗಾರಿಕೆ ಸ್ಥಗಿತಗೊಳಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ವಿವಾದಿತ ಸ್ಥಳದಲ್ಲಿ ಗಣಿಗಾರಿಕೆ ಮುಂದುವರಿಯದಂತೆ ಕಾನೂನುಬದ್ಧ ಮಧ್ಯಂತರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

----