Public praises talikote police: ತರಕಾರಿ ಮಾರುಕಟ್ಟೆಗೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಸಾವಿರಾರು ರೂಪಾಯಿ ಹಣವನ್ನು ಮತ್ತೆ ವಾರಸುದಾರರಿಗೆ ಮರಳಿಸಿದ ಘಟನೆ ತಾಳಿಕೋಟೆ ಪಟ್ಟಣದಲ್ಲಿ ನಡೆದಿದ್ದು, ಪೊಲೀಸರ ಕರ್ತವ್ಯನಿಷ್ಠೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಳಿಕೋಟೆ (ನ.19): ತರಕಾರಿ ಮಾರುಕಟ್ಟೆಗೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬರು ಕಳೆದುಕೊಂಡಿದ್ದ ಸಾವಿರಾರು ರೂಪಾಯಿ ಹಣವನ್ನು ಮತ್ತೆ ವಾರಸುದಾರರಿಗೆ ಮರಳಿಸಿದ ಘಟನೆ ತಾಳಿಕೋಟೆ ಪಟ್ಟಣದಲ್ಲಿ ನಡೆದಿದ್ದು, ಪೊಲೀಸರ ಕರ್ತವ್ಯನಿಷ್ಠೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಗೆ ಬಂದಿದ್ದಾಗ ಕಳೆದುಹೋದ ₹75 ಸಾವಿರ ಹಣ!
ತಾಳಿಕೋಟೆ ತಾಲೂಕಿನ ಭಂಟನೂರು ಗ್ರಾಮದ ಲಕ್ಷ್ಮಣ ಚಲವಾದಿ(58) ಎಂಬುವರು ನ.12ರಂದು ಕಾಯಿಪಲ್ಲೆ ಮಾರುಕಟ್ಟೆಗೆ ಬಂದಿದ್ದ ಸಂದರ್ಭದಲ್ಲಿ ಜೇಬಿನಲ್ಲಿಟ್ಟುಕೊಂಡಿದ್ದ ₹75 ಸಾವಿರ ನಗದು ಹಣ ಕಳೆದುಕೊಂಡಿದ್ದರು. ಹಣ ಕಳೆದುಕೊಂಡಿರುವುದು ಗಮನಕ್ಕೆ ಬರುತ್ತಿದ್ದಂತೆ ಆತಂಕಕ್ಕೊಳಗಾಗಿ ಮಾರುಕಟ್ಟೆ ಆವರಣದಲ್ಲಿ ಎಲ್ಲೆಲ್ಲಿ ಓಡಾಡಿದ್ದರು ಅದೆಲ್ಲವನ್ನು ಹುಡುಕಾಡಲು ಆರಂಭಿಸಿದರು. ಎಷ್ಟೇ ಹುಡುಕಿದರು ಕಳೆದುಕೊಂಡ ಪತ್ತೆಯಾಗಲಿಲ್ಲ. ಹತ್ತು ರೂಪಾಯಿ ಸಿಕ್ಕರೂ ಗಪ್ಪನೇ ಜೇಬಲ್ಲಿ ಇಟ್ಟುಕೂಳ್ಳುವ ಜನರಿರುವಾಗ ಬರೋಬ್ಬರಿ 75 ಸಾವಿರ ರೂಪಾಯಿ ಹಣ ಸಿಕ್ಕರೆ ಕೊಡುವುದಂಟೆ? ಅಂತ ಪ್ರಮಾಣಿಕ ಜನರು ಎಲ್ಲ ಕಡೆಯೂ ಇರಬೇಕಲ್ಲ? ಕಳೆದುಕೊಂಡ ಹಣ ಹುಡುಕಿ ಹುಡುಕಿ ಸುಸ್ತಾದ ಲಕ್ಷ್ಮಣ ಚಲವಾದಿ ತುಂಬಾ ದುಃಖದಿಂದ ಕೊನೆ ಪ್ರಯತ್ನವೆಂದು ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ದೂರು ದಾಖಲಿಸಿಕೊಂಡ ತಾಳಿಕೋಟೆ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಎಸ್.ಎಂ.ಪಡಶೆಟ್ಟಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ತಂಡದೊಂದಿಗೆ ಹಣ ಪತ್ತೆಗಾಗಿ ಕಾರ್ಯಾಚರಣೆಗಿಳಿದು ಕಳೆದುಹೋಗಿದ್ದ ಹಣ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಸಿಕ್ಕ ಬಳಿಕ ವಾರಸುದಾರರನ್ನ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಮಂಗಳವಾರ ಪಿಎಸ್ಐ ಎಸ್.ಎಂ.ಪಡಶೆಟ್ಟಿ ಅವರು ಲಕ್ಷ್ಮಣ ಚಲವಾದಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಠಾಣೆಗೆ ಕರೆಸಿಕೊಂಡು ಹಣವನ್ನು ಮರಳಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇತ್ತೀಚೆಗೆ ಕೆಲವು ಪೊಲೀಸರು, ಅಧಿಕಾರಿಗು ಹಣಕ್ಕಾಗಿ ಭ್ರಷ್ಟರೊಂದಿಗೆ, ಅಪರಾಧಿಗಳೊಂದಿಗೆ ಸೇರಿ ಪೊಲೀಸ್ ಇಲಾಖೆ ತಲೆತಗ್ಗಿಸುವಂತಹ ಕೆಲಸ ಮಾಡುತ್ತಿರುವ ಪ್ರಕರಣಗಳಿಂದಾಗಿ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರು ಭರವಸೆ ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ ತಾಳಿಕೋಟೆ ಪೊಲೀಸರು ಮಾನವೀಯಗುಣ, ಕರ್ತವ್ಯನಿಷ್ಠೆಯಿಂದ ಸಾರ್ವಜನಿಕ ವಲಯದಿಂದ ಮೆಚ್ಚುಗೆ ಪಡೆದು ಪೊಲೀಸ್ ಇಲಾಖೆ ಬಗ್ಗೆ ಇನ್ನಷ್ಟು ಗೌರವ, ಭರವಸೆ ಮೂಡುವಂತಹ ಕಾರ್ಯದಲ್ಲಿ ನಿರತರಾಗಿದ್ದಾರೆ.











