ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಆಗಲಿದೆ ಎಂಬ ವದಂತಿಗಳಿಗೆ ಅಧ್ಯಕ್ಷ ಕೊತ್ತೂರು ಮಂಜುನಾಥ್ ತೆರೆ ಎಳೆದಿದ್ದಾರೆ. ಸುಸ್ತಿ ಸಾಲವನ್ನು ಕಡ್ಡಾಯವಾಗಿ ಪಾವತಿಸುವಂತೆ ಸೊಸೈಟಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಸಾಲ ಮರುಪಾವತಿ ಮಾಡಿದರೆ ಮಾತ್ರ ಹೊಸ ಶೂನ್ಯ ಬಡ್ಡಿ ಸಾಲ ಸಿಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಚಿಂತಾಮಣಿ: ಡಿಸಿಸಿ ಬ್ಯಾಂಕ್ಗೂ ರೈತರಿಗೂ ನೇರ ವ್ಯವಹಾರದ ಸಂಬಂಧ ಇಲ್ಲ, ಸೊಸೈಟಿಗಳಿಗೂ ರೈತರ ಹಣಕಾಸಿನ ವ್ಯವಹಾರಕ್ಕೆ ಸಂಬಂಧ ಇರುವುದರಿಂದ ಸೊಸೈಟಿಗಳು ಬಾಕಿ ಉಳಿಸಿಕೊಂಡಿರುವ ಸುಸ್ತಿ ಸಾಲವನ್ನು ಕಡ್ಡಾಯವಾಗಿ ಬ್ಯಾಂಕ್ಗೆ ಪಾವತಿಸಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಸೊಸೈಟಿ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಸುಸ್ತಿ ಸಾಲ ಪಾವತಿ ಮಾಡಿ ಮರುಸಾಲ ಪಡೆಯಿರಿ
ನಗರದ ಚಿಮೂಲ್ ಶಿಬಿರ ಕಛೇರಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಸೊಸೈಟಿ ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಸಭೆಯನ್ನು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿರುವ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ಸೊಸೈಟಿಗಳ ಸುಸ್ತಿ ಸಾಲದ ಬಗ್ಗೆ ಕಾರ್ಯದರ್ಶಿಗಳಿಗೆ ಇಂದಿನ ಸಭೆಯಲ್ಲಿ ಮಾಹಿತಿ ಕೊಟ್ಟು ಸುಸ್ತಿ ಸಾಲ ಪಾವತಿಸುವಂತೆ ಸೂಚನೆ ನೀಡಿದ್ದೇವೆ. ಆದರೆ ಚಿಂತಾಮಣಿಯಲ್ಲಿನ ಸೊಸೈಟಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡದಿರುವುದು ಬೇಸರ ತಂದಿದೆಯೆಂದು ತಿಳಿಸಿದರು.
ಇಂದು ಡಿಸಿಸಿ ಬ್ಯಾಂಕಿನ ಸಭೆಯನ್ನು ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಚಿಂತಾಮಣಿಯಲ್ಲಿ ಮುಗಿಸಿದ್ದು ಡಿಸಿಸಿ ಎಲ್ಲಾ ಮಹಿಳಾ ಸಂಘಗಳಿಗೆ ಮತ್ತು ರೈತರಿಗೆ ಕೆಸಿಸಿ ಸಾಲ ನೀಡುವ ಉದ್ದೇಶ ನಮ್ಮ ಎಲ್ಲಾ ನಿರ್ದೇಶಕರದ್ದಾಗಿದ್ದು ಮತ್ತು ಒತ್ತಡವು ಆಗಿದೆ. ರೈತರಿಗೆ ಸಾಲ ನೀಡಬೇಕು, ಮಾರ್ಗದರ್ಶನ ಸುಸ್ತಿ ಸಾಲಗಳಿದ್ದರೆ ಅದನ್ನು ಕಟ್ಟಿಸುವಂತಹ ಕೆಲಸ ನಿರ್ವಹಿಸೋಣ, ಬ್ಯಾಂಕ್ನ್ನು ಉಳಿಸಿಕೊಳ್ಳುವ ಮಾರ್ಗದರ್ಶನ ನೀಡಿದ್ದು ಇದರ ಸಲುವಾಗಿ ಈಗಾಗಲೇ ಪಡೆದಿರುವ ಸಾಲಗಳನ್ನು ಮರುಪಾವತಿ ಮಾಡುವಂತೆ ರೈತರನ್ನು, ಮಹಿಳಾ ಸ್ವಸಹಾಯ ಸಂಘಗಳಿಗೆ ಮನವೊಲಿಸಬೇಕು. ಇದರಿಂದ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳು ದೊರಕುವುದರಿಂದ ಹೊಸ ಸಾಲಗಳನ್ನು ನೀಡುವುದಕ್ಕೆ ಸೂಕ್ತ ಅರ್ಜಿಗಳು ಮತ್ತು ಅರ್ಹ ಅರ್ಜಿಗಳನ್ನು ಒದಗಿಸುವಂತೆ ತಿಳಿಸಿರುವುದಾಗಿ ನುಡಿದರು.
ಸಾಲಮನ್ನಾವಾಗುವ ವಿಚಾರ ಸುಳ್ಳಾಗಿದ್ದು, ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಾಲಮನ್ನಾ ಮಾಡುವುದಾಗಿ ತಿಳಿಸಿಲ್ಲ. ಬಡ್ಡಿಮನ್ನಾ ಆಗುತ್ತದೆಯೆಂದು ಹೇಳಿಲ್ಲ, ಆ ಮಾಹಿತಿ ಯಾರಿಗಾದರೂ ಇದ್ದಲ್ಲಿ ಅದು ಸುಳ್ಳು ಸುದ್ದಿಯಾಗಿದೆ ಎಂದು ನುಡಿದರು. ಸಾಲಮನ್ನಾವಾಗಲೀ, ಬಡ್ಡಿಮನ್ನಾವಾಗಲೀ ಆಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಮೋಹನ್ರೆಡ್ಡಿ, ಹನುಮೇಗೌಡ, ವೆಂಕಟರಾಮಿರೆಡ್ಡಿ, ನಾಗರಾಜ್, ಖಾಜಿಕಲ್ಲಹಳ್ಳಿ ಮುನಿರಾಜು, ಕೆ.ವಿ. ಭಾಸ್ಕರರೆಡ್ಡಿ, ಚಿಮೂಲ್ ನಿರ್ದೇಶಕ ಊಲವಾಡಿ ಅಶ್ವತ್ಥ ನಾರಾಯಣಬಾಬು, ಸ್ಕೂಲ್ ಸುಬ್ಬಾರೆಡ್ಡಿ, ಮಾಜಿ ನಿರ್ದೇಶಕರಾದ ನಾಗಿರೆಡ್ಡಿ, ಶಿವಕುಮಾರ್ ಮತ್ತಿತರರು ಇದ್ದರು.












