ಗೃಹಲಕ್ಷ್ಮಿ ಯೋಜನೆಯ ದುರ್ಬಳಕೆ ತಡೆಯಲು ಮತ್ತು ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕಲು ಸರ್ಕಾರವು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದೆ. ಫಲಾನುಭವಿಗಳು ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ತಮ್ಮ ಖಾತೆಯನ್ನು ಮರು-ನೋಂದಣಿ ಮಾಡಿಕೊಳ್ಳದಿದ್ದರೆ, ಮಾಸಿಕ 2000 ರೂ. ಹಣ ಸ್ಥಗಿತಗೊಳ್ಳಲಿದೆ.

ಒಂದೆಡೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತವಾಗುತ್ತಿರುವ ನಡುವೆಯೇ, ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಫಲಾನುಭವಿಗಳಿಗೆ ಎರಡು ದಿನಗಳ ಹಿಂದೆಯೇ ಸರ್ಕಾರ ಶಾಕ್​ ಕೊಟ್ಟಿದೆ. ಹಲವು ಅನರ್ಹರು ಇದರ ಪ್ರಯೋಜನ ಪಡೆಯುತ್ತಿರುವ ಬಗ್ಗೆ ಫಲಾನುಭವಿಗಳ ಪಟ್ಟಿ ಪರಿಷ್ಕರಿಸುವಂತೆ ಕಳೆದ ಭಾನುವಾರದ ಶಾಸಕರ ಸಭೆಯಲ್ಲಿ ಸಲಹೆಗಳು ಬಂದಿದ್ದವು. ಗ್ಯಾರೆಂಟಿ ಯೋಜನೆ ಜಾರಿಗೊಳಿಸುವ ಭರದಲ್ಲಿ ಸರ್ಕಾರ ಅರ್ಹರು, ಅನರ್ಹರನ್ನು ಅಷ್ಟು ಗಮನಿಸಿರಲಿಲ್ಲ. ಆದ್ದರಿಂದ ಶ್ರೀಮಂತರು, ಒಂದೇ ಕುಟುಂಬದ ಇಬ್ಬರು, ಆದಾಯ ತೆರಿಗೆ ಸಲ್ಲಿಸುವವರು, ಮೃತರು ಹೀಗೆ ಹಲವು ಅನರ್ಹರು ಈ ಯೋಜನೆ ಲಾಭ ಪಡೆಯುತ್ತಿರುವುದು ತಿಳಿದಿದೆ. ಈ ದುರ್ಬಳಕೆಯಿಂದಾಗಿ ಸರ್ಕಾರಕ್ಕೆ ಮಾಸಿಕ 100 ಕೋಟಿ ರೂಪಾಯಿಗೂ ಹೆಚ್ಚಿನ ಹೊರೆ ಸರ್ಕಾರದ ಮೇಲೆ ಬೀಳುತ್ತಿದೆ.

ಇದೇ ಕಾರಣಕ್ಕೆ ಇದೀಗ ಸರ್ಕಾರವು ಬಯೋಮೆಟ್ರಿಕ್​ ವ್ಯವಸ್ಥೆಯನ್ನು ಕಡ್ಡಾಯ ಮಾಡಿದೆ. ಫಲಾನುಭವಿಗಳು ಮರುನೋಂದಣಿ ಮಾಡಿಕೊಳ್ಳುವುದು ಇನ್ನುಮುಂದೆ ಕಡ್ಡಾಯ. ಅದನ್ನು ಅಪ್​ಡೇಟ್​ ಮಾಡದೇ ಹೋದರೆ, ಬಯೋಮೆಟ್ರಿಕ್​ ವ್ಯವಸ್ಥೆಯ ಅಡಿ ನೋಂದಣಿ ಮಾಡದೇ ಹೋದರೆ ಗೃಹಲಕ್ಷ್ಮಿ ಇನ್ಮುಂದೆ ಸಿಗಲ್ಲ. ಇದಾಗಲೇ ಕೆಲವು ತಿಂಗಳ ಹಣ ಬಂದಿಲ್ಲ ಎಂದು ಮಹಿಳೆಯರು ಹೈಕೋರ್ಟ್​ ಮೊರೆ ಹೋಗಿರುವ ಬೆನ್ನಲ್ಲೇ ಸುಮಾರು ಮೂರು ವರ್ಷ ಈ ಯೋಜನೆಯ ಫಲ ಪಡೆದ ಅನರ್ಹರಿಗೆ ಈಗ ಸರ್ಕಾರ ಶಾಕ್​ ಕೊಟ್ಟಿದೆ. ಎರಡು ಲಕ್ಷ ಮಂದಿ ಮೃತಪಟ್ಟಿದ್ದರೂ ಫಲಾನುಭವಿಗಳಾಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕೆಲವರ ಮೊಬೈಲ್‌ ಸಂಖ್ಯೆ ಕೂಡ ಬದಲಾಗಿದೆ. ಹೀಗಾಗಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ಸಿಗಲಿ ಎಂಬ ಉದ್ದೇಶ ಎಂದು ಸರ್ಕಾರ ಹೇಳಿದೆ.

ಬಯೋಮೆಟ್ರಿಕ್​ ವ್ಯವಸ್ಥೆ

ಇದು ಒಂದು ಸಲದ ಬಯೋಮೆಟ್ರಿಕ್​ ವ್ಯವಸ್ಥೆ (One Time Biometric). ಇದು ಕಡ್ಡಾಯವಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಏನೆಂದರೆ, ಬೆಂಗಳೂರಿಗರು ಬೆಂಗಳೂರು ಒನ್​ನಲ್ಲಿ ಇಲ್ಲವೇ ಬೇರೆ ಪ್ರದೇಶದವರು ಕರ್ನಾಟಕ ಒನ್ ಕೇಂದ್ರಗಳಲ್ಲಿ ಮೊಬೈಲ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ನೀಡಿ ಖಾತೆ ಅಪ್​ಡೇಟ್​ ಮಾಡಬೇಕು. ನೀವು ಅರ್ಹರೇ ಆಗಿದ್ದರೂ ಈ ಅಪ್​ಡೇಟ್​ ಮಾಡದೇ ಹೋದರೆ ನಿಮಗೆ ಇನ್ಮುಂದೆ 2 ಸಾವಿರ ರೂಪಾಯಿ ಬರಲ್ಲ. ಈ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಆದೇಶವೂ ಬರಲಿದೆ.

ಅಪ್​ಡೇಟ್​ ಮಾಡುವುದು ಹೇಗೆ?

ಮೊದಲೇ ಹೇಳಿದಂತೆ ಫಲಾನುಭವಿಗಳು ತಮ್ಮ ಹತ್ತಿರದ ಬೆಂಗಳೂರು ಒನ್‌ ಅಥವಾ ಕರ್ನಾಟಕ ಒನ್‌ ಕೇಂದ್ರಗಳಿಗೆ ಭೇಟಿ ನೀಡಿ, ಚಾಲ್ತಿಯಲ್ಲಿರುವ ಮೊಬೈಲ್‌ ಸಂಖ್ಯೆ ಹಾಗೂ ಬಯೋಮೆಟ್ರಿಕ್‌ ನೀಡುವ ಮೂಲಕ ತಮ್ಮ ಖಾತೆಯನ್ನು ಮರು-ನೋಂದಣಿ ಮಾಡಿಸಿಕೊಳ್ಳಬಹುದು. ಫಲಾನುಭವಿಗಳು ಎಪಿಎಲ್‌ ಕಾರ್ಡ್‌ ಅಥವಾ ಬಿಪಿಎಲ್‌ ಕಾರ್ಡ್‌ ಹೊಂದಿರಬಹುದು. ಆದರೆ, ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಲಾಖೆ ಈಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಿದೆ. ಇವರಲ್ಲಿ ಬಹುತೇಕರು ಆದಾಯ ತೆರಿಗೆ ಪಾವತಿಸುತ್ತಿದ್ದುದರಿಂದ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇವರಿಗೆ ಗೃಹಲಕ್ಷ್ಮಿ ಯೋಜನೆ ರದ್ದಾಗಲಿದೆ.

ಸಚಿವೆ ಹೇಳಿದ್ದೇನು?

ಸರ್ಕಾರ ಫಲಾನುಭವಿಯ ಹೆಸರನ್ನು ನೇರವಾಗಿ ಪಟ್ಟಿನಲ್ಲಿ ತೆಗೆಯುತ್ತಿಲ್ಲ. ಮಹಿಳೆಯರು ಕೇವಲ ಒಂದು ಬಾರಿ ಬಯೋಮೆಟ್ರಿಕ್‌ ನೀಡಿದರೆ ಸಾಕು, ಹಣ ಎಂದಿನಂತೆ ಖಾತೆಗೆ ಜಮೆಯಾಗುತ್ತದೆ. ನವೀಕರಣ ಮಾಡದ ಖಾತೆಗಳು ಮಾತ್ರ ಸ್ವಯಂಚಾಲಿತವಾಗಿ ರದ್ದಾಗುತ್ತವೆ ಎಂದು ಇದಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.