ರಾಜ್ಯ ಜನ ನೀಡಿದ್ದ ಬಹುಮತವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಯಾವ ಜನ ಕುರ್ಚಿ ಕೊಟ್ಟಿದ್ದರೋ ಅದೇ ಜನ ಆ ಕುರ್ಚಿಯಿಂದ ಇಳಿಸುತ್ತಾರೆ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಬೆಂಗಳೂರು (ಮೇ.27): ರಾಜ್ಯ ಜನ ನೀಡಿದ್ದ ಬಹುಮತವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಯಾವ ಜನ ಕುರ್ಚಿ ಕೊಟ್ಟಿದ್ದರೋ ಅದೇ ಜನ ಆ ಕುರ್ಚಿಯಿಂದ ಇಳಿಸುತ್ತಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆಯೇ ನಿಷ್ಕ್ರಿಯವಾಗಿದ್ದ ಈ ಕಾಂಗ್ರೆಸ್‌ ಸರ್ಕಾರದ ಆಡಳಿತ ಯಂತ್ರ ಈಗ ದೆಹಲಿಗೆ ಸ್ಥಳಾಂತರಗೊಂಡಿದೆ.

ಈ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕೆಎಸ್ಆರ್‌ಟಿಸಿ ನೌಕರರು ಚಳವಳಿ ದಾರಿ ಹಿಡಿಯುತ್ತಿರಲಿಲ್ಲ. ಈ ಸರ್ಕಾರಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸು ಇದ್ದಿದ್ದರೆ, ರೈತ ಆತ್ಮ*ಹ*ತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಜನ 136 ಸ್ಥಾನ ಗೆಲ್ಲಿಸಿ ಅಧಿಕಾರ ಕೊಟ್ಟರು. ಕುರ್ಚಿ ಕಿತ್ತಾಟ, ಭ್ರಷ್ಟಾಚಾರ, ಬೆಲೆ ಏರಿಕೆ ಮಾಡಿ ಎಂದು ಅಧಿಕಾರ ಕೊಡಲಿಲ್ಲ. ಆದರೆ, ಈ ಸರ್ಕಾರ ಆ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಸಿಎಂ ಕುರ್ಚಿ ಜಗಳ ನಡೆಯುತ್ತಿದೆ. ಧಾರವಾಹಿ ರೀತಿ ಈ ಕಿತ್ತಾಟ ಎಳೆಯಲಾಗುತ್ತಿದೆ ಎಂದು ಕಿಡಿಕಾರಿದರು.

ಹಣೆಯಲ್ಲಿ ಬರೆದಿಲ್ಲ

ಕೆಲವರು ಸಿದ್ದರಾಮಯ್ಯ ಅವರೇ ಸಾಯುವವರೆಗೂ ಸಿಎಂ ಎಂದರೆ, ಮತ್ತೆ ಕೆಲವರು ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ ಎನ್ನುತ್ತಾರೆ. ಇನ್ನ ಕೆಲವರು ಸಿಎಂ ಆಗುವುದು ಡಿ.ಕೆ.ಶಿವಕುಮಾರ್‌ ಹಣೆಯಲ್ಲಿ ಬರೆದಿಲ್ಲ ಎನ್ನುತ್ತಿದ್ದಾರೆ. ಮತ್ತಷ್ಟು ಮಂದಿ ಸತೀಶ್‌ ಜಾರಕಿಹೊಳಿ ಸಿಎಂ ಆಗಲಿ ಎನ್ನುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಸೇರಿ ನನ್ನ ಹೆಸರು ಏಕೆ ಹೇಳುತಿಲ್ಲ ಎನ್ನುತ್ತಿದ್ದಾರೆ. ಈ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಜನ ಸೊರಗುತ್ತಿದ್ದಾರೆ. ಈ ಸರ್ಕಾರ ಬಹುಮತ ಇದ್ದರೂ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ರವಿ ವಾಗ್ದಾಳಿ ನಡೆಸಿದರು.