ಬೆಂಗಳೂರಿನಲ್ಲಿ ಹಾಡಹಗಲೇ, ಜನರೆಲ್ಲಾ ನೋಡುತ್ತಿದ್ದಂತೆ ಟ್ರಾಫಿಕ್ ಪೊಲೀಸ್ ಒಬ್ಬರು ಆಟೋ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಬೆಂಗಳೂರು (ಮೇ.27): ಬೆಂಗಳೂರಿನಲ್ಲಿ ಪಾರ್ಕ್ ಮಾಡಿದ್ದ ಬೈಕ್‌ಗೆ ಆಟೋ ತಾಗಿದ್ದಕ್ಕೆ ಟ್ರಾಫಿಕ್ ಪೊಲೀಸ್ ಒಬ್ಬರು ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಡ್ರೈವರ್ ಕೈ ಮುಗಿದು ಕ್ಷಮೆ ಕೇಳಿದರೂ, ಪೊಲೀಸ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಹಾಡಹಗಲೇ, ಜನರೆಲ್ಲಾ ನೋಡುತ್ತಿದ್ದಂತೆ ಟ್ರಾಫಿಕ್ ಪೊಲೀಸ್ ಒಬ್ಬರು ಆಟೋ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಮೇ 26 ರಂದು ಬೆಂಗಳೂರಿನ ಸುಧಾಮ ನಗರದ ಬಳಿ ನಡೆದಿದೆ. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಪೊಲೀಸ್ ಪಾರ್ಕ್ ಮಾಡಿದ್ದ ಬೈಕ್‌ಗೆ ಆಟೋ ಚಾಲಕನ ಆಟೋ ಲಘುವಾಗಿ ತಾಗಿದೆ. ಇದೇ ಕಾರಣಕ್ಕೆ ಪೊಲೀಸ್‌ಗೆ ಸಿಟ್ಟು ಬಂದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ತಕ್ಷಣವೇ ಆಟೋ ಚಾಲಕ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಆದರೂ, ಪೊಲೀಸ್ ಆತನ ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ, ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.
ವಿಡಿಯೋ ಹಂಚಿಕೊಂಡ ವ್ಯಕ್ತಿ ಹೀಗೆ ಬರೆದಿದ್ದಾರೆ
'ಒಬ್ಬ ಟ್ರಾಫಿಕ್ ಪೊಲೀಸ್ ಆಟೋ ಡ್ರೈವರ್‌ಗೆ ಹೊಡೆಯುವುದನ್ನು ನೋಡಿ ನಾನು ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದೆ. ಪೊಲೀಸ್ ಬೈಕ್ ಪಾರ್ಕ್ ಮಾಡುತ್ತಿದ್ದರು. ಆಗ ಪ್ರಯಾಣಿಕರಿದ್ದ ಆಟೋ ಆಕಸ್ಮಿಕವಾಗಿ ಬೈಕ್‌ಗೆ ತಾಗಿದೆ. ಇದರಿಂದ ಕೋಪಗೊಂಡ ಪೊಲೀಸ್, ಆಟೋ ನಿಲ್ಲಿಸಿ ಡ್ರೈವರ್‌ನನ್ನು ಕೆಳಗೆ ಇಳಿಯಲು ಹೇಳಿದರು. ಡ್ರೈವರ್ ಕೈ ಮುಗಿದು, ತಪ್ಪಾಗಿದೆ, ನೋಡಲಿಲ್ಲ ಎಂದು ಕ್ಷಮೆ ಕೇಳಿದ. ಆದರೂ, ಪೊಲೀಸ್‌ಗೆ ತನ್ನ ಕೋಪ ನಿಯಂತ್ರಿಸಲು ಆಗಲಿಲ್ಲ. ವಿಡಿಯೋದಲ್ಲಿ ಕಾಣುವಂತೆ ಆಟೋ ಡ್ರೈವರ್‌ಗೆ ಹೊಡೆದಿದ್ದಾರೆ'.
'ನಾನು ರೆಕಾರ್ಡ್ ಮಾಡುವುದನ್ನು ನೋಡಿದ ಪೊಲೀಸ್, ಆಟೋ ಬೈಕ್‌ಗೆ ಗುದ್ದಿದಾಗ ಯಾಕೆ ರೆಕಾರ್ಡ್ ಮಾಡಲಿಲ್ಲ ಎಂದು ನನ್ನನ್ನೇ ಪ್ರಶ್ನಿಸಿದರು. ಸಾರ್ವಜನಿಕವಾಗಿ ಒಬ್ಬ ವ್ಯಕ್ತಿಗೆ ಹೀಗೆ ಹೇಗೆ ಹೊಡೆಯಲು ಸಾಧ್ಯ ಎಂದು ನಾನು ಅವರನ್ನು ಕೇಳಬೇಕಾಯಿತು. ಅಧಿಕಾರದಲ್ಲಿರುವವರ ಇಂತಹ ಗೂಂಡಾ ವರ್ತನೆಯನ್ನು ನಾವು ನೋಡುತ್ತಿದ್ದೇವೆ. ಅಧಿಕಾರವಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ಎಲ್ಲೂ ಹೇಳಿಲ್ಲ' ಎಂದೂ ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ, ನೆಟ್ಟಿಗರು ಪೊಲೀಸ್ ಅಧಿಕಾರಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.


