ಚಿಕ್ಕಬಳ್ಳಾಪುರ(ನ.29): ಅಕಾಲಿಕವಾಗಿ ಎದುರಾಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಮೂರೂ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಘಟಾನುಘಟಿ ನಾಯಕರು, ಸಿನಿ ತಾರೆಯರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದು, ಅಂತಿಮವಾಗಿ ವಿಜಯಮಾಲೆ ಯಾರಿಗೆ ಎಂಬ ಕುತೂಹಲ ಇಡೀ ಜಿಲ್ಲೆಯ ಜನತೆಯನ್ನು ಕಾಡುತ್ತಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿಗೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಡಾ.ಕೆ. ಸುಧಾಕರ್‌ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಪರಿಣಾಮ ಎದುರಾಗಿರುವ ಉಪ ಚುನಾವಣೆ ಬಿಜೆಪಿಗೆ ಮಾತ್ರವಲ್ಲದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಲಿಗೂ ಮಹತ್ವ ಪಡೆದುಕೊಂಡಿದ್ದು, ಶತಾಯ ಗತಾಯ ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ ಪರಿಣಾಮ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಸ್ವಾಭಿಮಾನ ವರ್ಸಸ್‌ ಪ್ರತಿಷ್ಠೆ!

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸ್ವಾಭಿಮಾನ ಮತ್ತು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸುಧಾಕರ್‌ ಅವರು ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ ಸೇರಿದರು ಎಂಬ ಕಾರಣಕ್ಕೆ ಶತಾಗತಾಯ ಸುಧಾಕರ್‌ ಅವರನ್ನು ಸೋಲಿಸಲೇಬೇಕು ಎಂಬದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಒಂದು ಸಾಲಿನ ಅಜೆಂಡಾ ಆಗಿದೆ. ಇದಕ್ಕೆ ಪೂರಕವಾಗಿ ಮುಖಂಡರಾದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್‌ ಬಹಿರಂಗವಾಗಿಯೇ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಹೊಸಕೋಟೆ : ಪಕ್ಷೇತರ ಅಭ್ಯರ್ಥಿ ಶರತ್ ಗೆ ಸಿಕ್ತು ಇವರ ಬೆಂಬಲ

ನಾಮಪತ್ರ ಸಲ್ಲಿಕೆ ವೇಳೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸುಧಾಕರ್‌ ಸೋಲು ಗುರಿಯಾಗಿಸಿಕೊಂಡು ಕಾರ್ಯಕರ್ತರು ಶ್ರಮಿಸುವಂತೆ ಕರೆ ನೀಡಿದ್ದರು. ಅಲ್ಲದೆ ಪ್ರಸ್ತುತ ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿಯೂ ಅನರ್ಹ ಶಾಸಕರನ್ನು ಸೋಲಿಸುವುದೇ ಪ್ರಮುಖ ಗುರಿ ಎಂದು ಘೋಷಿಸಿದ್ದಾರೆ.

ಇನ್ನು ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌, ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಸುಧಾಕರ್‌ ಅವರನ್ನು ರಾಜಕೀಯದಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸುಧಾಕರ್‌, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಲ ಒಪ್ಪಂದದ ಮೂಲಕ ತಮ್ಮನ್ನು ಸೋಲಿಸುವುದೇ ಅಜೆಂಡಾ ಮಾಡಿಕೊಂಡು ಉಭಯ ಪಕ್ಷಗಳು ಶ್ರಮಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಹಿಂದೆ ಸರಿಯಲಿದ್ದಾರೆಯೇ ಅಭ್ಯರ್ಥಿ?

ಪ್ರಸ್ತುತ ಉಪ ಚುನಾವಣಯೆಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಹಿಂದೆ ಸರಿಯಲಿದ್ದಾರೆ ಎಂಬುದು ಬಿಜೆಪಿ ಆರೋಪವಾಗಿದೆ. ಕೊನೇ ಕ್ಷಣದಲ್ಲಿ ಉಭಯ ಪಕ್ಷಗಳಿಂದ ಒಬ್ಬ ಅಭ್ಯರ್ಥಿ ಮಾತ್ರ ಉಳಿದು ಮತ್ತೊಬ್ಬ ಅಭ್ಯರ್ಥಿ ಬೆಂಬಲ ನೀಡುವುದು ಒಳ ಒಪ್ಪಂದವಾಗಿದೆ ಎಂಬ ಶಂಕೆ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಆದರೆ ಯಾವ ಅಭ್ಯರ್ಥಿ ಹಿಂದೆ ಸರಿಯಲಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಕೇವಲ ರಾಜಕೀಯ ಆರೋಪವೇ ಅಥವಾ ನಿಜವಾಗಿಯೂ ಉಭಯ ಪಕ್ಷಗಳ ಒಳ ಒಪ್ಪಂದವೇ ಎಂಬ ಅನುಮಾನ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿಯೂ ಇದ್ದು, ಇದನ್ನು ಪರಿಹರಿಸಬೇಕಿದ್ದ ನಾಯಕರು, ಮತ್ತಷ್ಟುಗೊಂದಲದ ಹೇಳಿಕೆಗಳನ್ನು ನೀಡುತ್ತಿರುವುದು ವಿಶೇಷ.

ನಾಯಕರ ದಂಡೇ ಪ್ರಚಾರಕ್ಕೆ!

ಉಪ ಚುನಾವಣೆ ಪ್ರಚಾರಕ್ಕಾಗಿ ನಾನಾ ಪಕ್ಷಗಳ ನಾಯಕರ ದಂಡೇ ಜಿಲ್ಲಾಕೇಂದ್ರಕ್ಕೆ ಆಗಮಿಸುತ್ತಿರುವುದು ವಿಶೇಷ. ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಕಾರಣ ಕಾಂಗ್ರೆಸ್‌ ಪರ ಪ್ರಚಾರಕ್ಕಾಗಿ ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್‌, ಉಮಾಶ್ರೀ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಾಜಿಸಂಸದ ವೀರಪ್ಪಮೊಯ್ಲಿ ಸೇರಿದಂತೆ ಇತರರು ಈಗಾಗಲೇ ಪ್ರಚಾರ ನಡೆಸಿದ್ದು, ಡಿ.2ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ.

'ಅಳುವಂತಹದ್ದು ಏನೂ ಆಗಿಲ್ಲ' ಎಚ್‌ಡಿಕೆಗೆ ಚಲುವರಾಯಸ್ವಾಮಿ ಟಾಂಗ್

ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಕೆ ದಿನವೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಗಮಿಸಿದ್ದು, ನಂತರ ಒಂದು ದಿನ ಈಗಾಗಲೇ ಪ್ರಚಾರ ಪೂರೈಸಿದ್ದಾರೆ. ಅಲ್ಲದೆ ನ.30ರಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಆಗಮಿಸಿ ಪಕ್ಷದ ಅಭ್ಯರ್ಥಿಪರ ಮತ ಯಾಚಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿಗೆ ನಾಯಕರ ದಂಡು!

ಇನ್ನು ಬಿಜೆಪಿ ಪರವಾಗಿ ನಾಯಕರ ದಂಡೇ ಪ್ರಚಾರಕ್ಕೆ ಆಗಮಿಸಿದ್ದು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು, ಮುಖ್ಯಂತ್ರಿ ಯಡಿಯೂರಪ್ಪ ಅವರು ಮತ್ತೊಂದು ಸುತ್ತಿನ ಪ್ರಚಾರ ನಡೆಸಲಿದ್ದಾರೆನ್ನಲಾಗಿದೆ. ಪ್ರವಾಸೋದ್ಯಮ ಸಚಿವ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಕಾರಣ ಜಿಲ್ಲೆಯಲ್ಲಿಯೇ ಠೀಕಾಣಿ ಹೂಡಿದ್ದಾರೆ.

ಸಂಸದ ಪಿ.ಸಿ. ಮೋಹನ್‌, ಅಬಕಾರಿ ಸಚಿವ ನಾಗೇಶ್‌ ಜೊತೆಗೆ ಸ್ಯಾಂಡಲ್‌ವುಡ್‌ ತಾರೆಯರಾದ ಹರ್ಷಿಕಾ ಪೂಣಚ್ಚ, ಭುವನ್‌, ದಿಂಗತ್‌, ಹರಿಪ್ರಿಯಾ ಸೇರಿದಂತೆ ಇತರೆ ತಾರೆಯರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಉಪ ಚುನಾವಣಾ ಕಣ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಡಿ.5ರಂದು ಮತದಾರರ ಮನ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್‌ ಅವರನ್ನು ಸೋಲಿಸಬೇಕು. ಜೆಡಿಎಸ್‌ನ ಮಹಿಳೆಯೊಬ್ಬರು ಹಾರ ಹಾಕಿ ಸ್ವಾಗತಿಸಿರುವುದು ಸಂತಸ ತಂದಿದ್ದು, ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬಿಎಸ್‌ವೈ ಅಧಿಕಾರ ರೋಗದಿಂದ ಚುನಾವಣೆ ಬಂದಿದೆ: ಎಚ್‌ಡಿಕೆ

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಸುಧಾಕರ್‌ ಸೋಲಿಸುವ ಏಕೈಕ ಅಜೆಂಡಾದೊಂದಿಗೆ ಪ್ರಚಾರ ನಡೆಸುತ್ತಿವೆ. ಜೆಡಿಎಸ್‌ ಅಭ್ಯರ್ಥಿ ಡಮ್ಮಿಯಾಗಿ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವ ಗುಮಾನಿ ಇದೆ. ಹಾಗಾಗಿ ಚಿಕ್ಕಬಳ್ಳಾಪುರದ ಸ್ವಾಭಿಮಾನ ಕಾಪಾಡಲು ಮತದಾರರು ಬಿಜೆಪಿ ಬೆಂಬಲಿಸಬೇಕು ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

-ಅಶ್ವತ್ಥನಾರಾಯಣ. ಎಲ್