ಮಂಗಳೂರು(ಜು.12): ತಂಡವೊಂದು ಹಲ್ಲೆ ನಡೆಸಿದ ಪರಿಣಾಮ ಅಡ್ಯಾರ್‌ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಅಡ್ಯಾರ್‌ ಪದವು ನಿವಾಸಿ ಯಾಕೂಬ್‌ (46) ಮೃತರು. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಸುಮಾರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ತಡರಾತ್ರಿ ಆಂಬುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ ಚಾಲಕ..!

ಅಡ್ಯಾರ್‌ ನಿವಾಸಿ ಯಾಕೂಬ್‌ ಮತ್ತು ಶಾಕೀರ್‌ಗೆ ವೈಯಕ್ತಿಕ ಮನಸ್ತಾಪವಿದ್ದು, ಇದೇ ವಿಷಯದಲ್ಲಿ ಆಗಾಗ ವಾಗ್ವಾದ ನಡೆಯುತ್ತಿತ್ತು. ಯಾಕೂಬ್‌ ಶುಕ್ರವಾರ ರಾತ್ರಿ ಶಾಕೀರ್‌ಗೆ ಮೊಬೈಲ್‌ ಕರೆ ಮಾಡಿ ಅಡ್ಯಾರ್‌ ಪದವು ಪ್ರದೇಶಕ್ಕೆ ಬರಲು ಹೇಳಿದ್ದಾನೆ. ಅದರಂತೆ ಶಾಕೀರ್‌ ತನ್ನ ಇಬ್ಬರು ಗೆಳೆಯರೊಂದಿಗೆ ಬಂದಿದ್ದು, ಈ ವೇಳೆ ಮತ್ತೆ ವಾಗ್ವಾದ ನಡೆದಿದೆ. ಕೋಪಗೊಂಡ ಶಾಕೀರ್‌ ಮತ್ತು ತಂಡ ಯಾಕೂಬ್‌ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದು, ಯಾಕೂಬ್‌ ಕುಸಿದು ಬಿದ್ದಿದ್ದಾರೆ. ಹಲ್ಲೆ ನಡೆಸಿದ ತಂಡ ಅಲ್ಲಿಂದ ಪರಾರಿಯಾಗಿದೆ.

ಬಳಿಕ ಸುಧಾರಿಸಿಕೊಂಡ ಯಾಕೂಬ್‌ ಮನೆಗೆ ಬಂದು, ಪರಿಚಯಸ್ಥರೊಬ್ಬರ ಆಟೋ ರಿಕ್ಷಾದಲ್ಲಿ ಪುತ್ರನೊಂದಿಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಯಾಕೂಬ್‌ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯಾಕೂಬ್‌ ಅವರಿಗೆ ಎರಡು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಸಕ್ರಿಯ ಕೇಸು ಹೆಚ್ಚಳದಲ್ಲಿ ದೇಶದಲ್ಲಿ ಕರ್ನಾಟಕವೇ ನಂ.1!

ಮಂಗಳೂರು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾಕೂಬ್‌ ಅಡ್ಯಾರ್‌ ಪಂಚಾಯ್ತಿಯ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.