ಬರದ ಬೇಗೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡದ ಸರ್ಕಾರ
ಮಳೆ ಬಾರದ ಸಂದರ್ಭದಲ್ಲಿ ಕೃಷ್ಣಾ ಭಾಗ್ಯಜಲ ನಿಗಮದ ನಾರಾಯಣಪುರ ಎಡದಂಡೆ ಕಾಲುವೆ ಮುಖಾಂತರ ಜೇವರ್ಗಿ ತಾಲೂಕಿನ ಜೇವರ್ಗಿ ಶಾಖಾ ಕಾಲುವೆ, ಮುಡಬೂಳ ಶಾಖಾ ಕಾಲುವೆ ಹಾಗೂ ಶಹಾಪುರ ಶಾಖಾ ಕಾಲುವೆಗಳಿಗೆ ನೀರು ಬೀಡದ ಕಾರಣ ಬೆಳೆಗಳು ಒಣಗಿ ಹೋಗಿವೆ ಎಂದು ರೈತರು ಅಳಲು ತೋಡಿಕೊಂಡರು.
ರವೀಂದ್ರ ವಕೀಲ
ಜೇವರ್ಗಿ(ಡಿ.16): ತಾಲೂಕಿನಾದ್ಯಂತ ಬಿತ್ತನೆ ಮಾಡಿದ ತೊಗರಿ, ಹತ್ತಿ ಬೆಳೆಗಳಿಗೆ ಸಮರ್ಪಕವಾಗಿ ಮಳೆ ಬಾರದ ಕಾರಣ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, 14,200 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಬಿತ್ತನೆ ಮಾಡಲಾಗಿತ್ತು. 250 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಹೈಬ್ರೀಡ್ ಹತ್ತಿ ಖುಷ್ಕಿ ಜಮೀನಿನಲ್ಲಿ 8,997 ಹೆಕ್ಟೇರ್ ನೀರಾವರಿ ಕ್ಷೇತ್ರದಲ್ಲಿ 3,850 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಮಾಡಲಾಗಿತ್ತು. ಸಮರ್ಪಕವಾಗಿ ಮಳೆ ಬಾರದೆ ಮುಂಗಾರು ಬೆಳೆಗಳು ಹಾನಿಗೀಡಾಗಿವೆ. ಆದರೆ ರಾಜ್ಯ ಸರಕಾರ ಇಂದಿನವರೆಗೆ ಬೆಳೆಹಾನಿಗೀಡಾದ ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಲುವೆಗೆ ಹರಿಯದ ನೀರು:
ಮಳೆ ಬಾರದ ಸಂದರ್ಭದಲ್ಲಿ ಕೃಷ್ಣಾ ಭಾಗ್ಯಜಲ ನಿಗಮದ ನಾರಾಯಣಪುರ ಎಡದಂಡೆ ಕಾಲುವೆ ಮುಖಾಂತರ ಜೇವರ್ಗಿ ತಾಲೂಕಿನ ಜೇವರ್ಗಿ ಶಾಖಾ ಕಾಲುವೆ, ಮುಡಬೂಳ ಶಾಖಾ ಕಾಲುವೆ ಹಾಗೂ ಶಹಾಪುರ ಶಾಖಾ ಕಾಲುವೆಗಳಿಗೆ ನೀರು ಬೀಡದ ಕಾರಣ ಬೆಳೆಗಳು ಒಣಗಿ ಹೋಗಿವೆ ಎಂದು ರೈತರು ಅಳಲು ತೋಡಿಕೊಂಡರು.
ಕಲಬುರಗಿ: ಜೀವ ಬೆದರಿಕೆ ಹಾಕಿ ತಾಳಿಸರ ಸುಲಿಗೆ
ಮುಂಗಾರು ತಡವಾಗಿದ್ದರಿಂದ ಬಿತ್ತನೆಯನ್ನು ತಡ ಮಾಡಲಾಗಿತ್ತು. ಮಳೆ ನಿರೀಕ್ಷೆಯಿಂದ ರೈತರು ಹೆಸರು, ಉದ್ದು, ತೊಗರಿ ಬಿತ್ತನೆ ಮಾಡಿದ್ದರು. ಮಳೆ ಕೈಕೊಟ್ಟಿಂದರಿಂದ ಬೆಳೆಗಳು ಕುಂಠಿತಗೊಂಡವು. ಇದರಿಂದ ಇಳುವರಿಯ ಪ್ರಮಾಣ ಕುಸಿತವಾಗಿದ್ದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜಾನುವಾರುಗಳಿಗೂ ಬರದ ತೀವ್ರತೆ ತಟ್ಟುತ್ತಿದೆ. ರೈತರು ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಕೈಗೆ ಬರುವ ಸಾಧ್ಯತೆಗಳಿಲ್ಲ. ಜಲಮೂಲಗಳು ಬತ್ತುತ್ತಿವೆ. ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದ್ದರು ಇಲ್ಲಿಯವರೆಗೆ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ನೀಡಿಲ್ಲ. ಬರೀ ಬೆಳೆ ಹಾನಿಯಾದ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಬರ ಪರಿಹಾರ ಕ್ರಮಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಕೈಗೊಳ್ಳದೇ ಇರುವುದರಿಂದ ನೂರಾರು ಜನ ಕೃಷಿ ಕೂಲಿಕಾರ್ಮಿಕರು ಗುಳೆ ಹೋಗುತ್ತಿದ್ದಾರೆ.
ಕಲಬುರಗಿ: ಪ್ರಾರ್ಥನೆ ವೇಳೆ ಕುಸಿದು ಬಿದ್ದ ಬಾಲಕಿಯರು
ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ 73,795 ಹೆಕ್ಟೇರ್ ತೊಗರಿ, 65,955 ಹೆಕ್ಟೇರ್ ಹತ್ತಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಹತ್ತಿ ಮತ್ತು ತೊಗರಿ ಬೆಳೆಗಳು ಬಹುತೇಕ ಪ್ರದೇಶದಲ್ಲಿ ಹಾನಿಗೀಡಾಗಿವೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ಪವನಕುಮಾರ ಕಟ್ಟಿಮನಿ ತಿಳಿಸಿದ್ದಾರೆ.
ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾದ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಬೆಳೆ ಹಾನೀಗೀಡಾದ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಬಿಡುಗಡೆ ಮಾಡಿದ ನಂತರ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಹೇಳಿದ್ದಾರೆ.