ಕಲಬುರಗಿ(ಅ.30): ಈ ಬಾರಿಯ ರಾಜ್ಯೋತ್ಸವ ಪುರಸ್ಕಾರ ಆಯ್ಕೆಯಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 6 ಜಿಲ್ಲೆಗಳತ್ತ  ರಾಜ್ಯ ಸರ್ಕಾರದ ಕಡೆಗಣ್ಣ ನೋಟ ಇಲ್ಲಿನ ಸಾರಸ್ವತ- ಸಾಂಸ್ಕೃತ ಲೋಕದಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಈ ಬಾರಿ 65 ಸಾಧಕರನ್ನು ಆಯ್ಕೆ ಮಾಡಿದರೂ ಈ ಪೈಕಿ ಕಲ್ಯಾಣ ನಾಡಿನ 6 ಜಿಲ್ಲೆಗಳಿಂದ ಕೇವಲ 6 ಮಂದಿಗೆ ಮಾತ್ರ ಮನ್ನಣೆ, ಉಳಿದವರಿಗೆ ಕ್ಯಾರೆ ಎಂದಿಲ್ಲ ಎಂದು ರಾಜ್ಯ ಸರ್ಕಾರದ ಮಲತಾಯಿ ಧೋರಣೆಗೆ ಸಾಹಿತಿಗಳು, ಕವಿ, ಕಲಾವಿದರು, ಹೋರಾಟಗಾರರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಕಲಬುರಗಿಯಂತೂ ಕಲ್ಯಾಣದ ಹೆಬ್ಬಾಗಿಲು, ಕಲೆ, ಸಾಹಿತ್ಯ, ಸಂಸ್ಕೃತಿ, ಸೇವೆ, ವೈದ್ಯಕೀಯ, ಪತ್ರಿಕೋದ್ಯಮ ಹೀಗೆ ಹತ್ತಾರು ರಂಗದಲ್ಲಿ ಇಲ್ಲಿನವರು ಯಾರಿಗೇನು ಕಮ್ಮಿ ಇಲ್ಲದಂತೆ ಸಾಧನೆ ಮಾಡುತ್ತಿದ್ದರೂ ಸರ್ಕಾರಕ್ಕೆ ಯಾಕೆ ಇಂತಹ ಸಾಧಕರು ಕಾಣುತ್ತಿಲ್ಲವೋ? ಎಂಬ ಪ್ರಶ್ನೆ ಈ ಪುರಸ್ಕಾರದ ಪಟ್ಟಿ ಬೆನ್ನಲ್ಲೇ ಹೊರಬಿದ್ದಿದೆ.

ಕಲ್ಯಾಣ ನಾಡಿನ 6 ಜಿಲ್ಲೆಗಳಿಗೆ ತಲಾ ಒಂದರಂತೆ ಪುರಸ್ಕಾರ ಹಂಚಿಕೆಯಾದರೆ ಅನ್ಯ ಜಿಲ್ಲೆಗಳಲ್ಲಿ ಈ ಪ್ರಮಾಣ 3ರಿಂದ 4, 6ರ ವರೆಗೂ ತಲುಪಿದೆ. ಯಾಕೆ ಹೀಗೆ? ನಮ್ಮ ನಾಡು ಬಂದಾಕ್ಷಣ ಈ ನಿಯಂತ್ರಣ ಯಾಕೆ ಎಂಬ ಕೂಗು ಎದ್ದಿದೆ. ಸಾಹಿತ್ಯ, ಸಾಂಸ್ಕೃತಿಕ, ಸಾರಸ್ವತ ಲೋಕದಲ್ಲಿ ಕಲ್ಯಾಣದ ಜಿಲ್ಲೆಗಳ ಕೊಡುಗೆ ಸದಾಕಾಲ ಹಿರಿದಾಗಿದ್ದರೂ ಪುರಸ್ಕಾರ ಕೊಡುವಾಗ, ಸಾಧಕರಿಗೆ ಅನುಕೂಲ ಕಲ್ಪಿಸುವಾಗ ಮಾತ್ರ ಇಲ್ಲಿನವರು ಸರ್ಕಾರದಲ್ಲಿದ್ದವರಿಗೆ ಕಾಣೋದೇ ಇಲ್ಲ, ಬೇಕೆಂದೇ ತಾತ್ಸಾರ ಬಾವನೆ ತೊರಲಾಗುತ್ತದೆ. ಇಂತಹ ಬಾವನೆ ಆಳುವವರು ತೋರಿದರೆ ಹೇಗೆ ಎಂಬ ಪ್ರಶ್ನೆಗಳನ್ನೂ ಇಲ್ಲಿನವರು ಕೇಳುತ್ತಿದ್ದಾರೆ.

ಕೊರೋನಾ ಕಾಟ: ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯ್ತಿ

ಸಾಧಕರು ಆಳುವ ಪಕ್ಷದ ಬೆಂಬಲಿಗರಾಗಿರಬೇಕೆ?:

ಕಳೆದೆರಡು ವರ್ಷಗಳ ಪುರಸ್ಕಾರ ಆಯ್ಕೆ ಮಾನದಂಡ ಸೂಕ್ಷ್ಮವಾಗಿ ಗಮನಿಸದವರು ಪುರಸ್ಕಾರ ದೊರಕಲು ಅವರು ಆಳುವ ಪಕ್ಷದವರ ಬೆಂಬಲಿಗರು ಆಗಿರಲೇಬೇಕೆ ಎಂದು ಆಡಿಕೊಳ್ಳುವಂತಾಗಿದೆ. ಕಳೆದ ಬಾರಿಯೂ ಪುರಸ್ಕೃತರಲ್ಲಿ ಬಿಜೆಪಿ ಬೆಂಬಲಿಗರಿದ್ದರು. ಈ ಬಾರಿಯೂ ಪುರಸ್ಕೃತರಲ್ಲಿ ಬಿಜೆಪಿ ಬೆಂಬಲಿಗರೇ ಬಹುತೇಕರು ಇದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಆಳುವ ಪಕ್ಷದ ಬೆಂಬಲಿಗರು, ಹಿಂಬಾಲಕರಿಗೆ ಅವಕಾಶ ನೀಡುತ್ತ ಹೋದಲ್ಲಿ ತೆರೆಮರೆಯಲ್ಲಿ ಹಾಗೂ ನಿಜವಾಗಿಯೂ ಸಾಧನೆ ಮಾಡಿದವರ ಪಾಡೇನು? ಅವರ ಸಾಧನೆಗೆ ಮನ್ನಣೆ ಹಾಕುವವರು ಯಾರು? ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

ರಾಜಕೀಯ ಇಚ್ಛಾಶಕ್ತಿ ಬರ:

ಕಲಬುರಗಿಗೆ ಈ ಬಾರಿ ರಾಜಕೀಯವಾಗಿ ಬಲ- ಬೆಂಬಲ ನೀಡುವ ಧ್ವನಿಗಳೇ ಇಲ್ಲದಂತಾಗಿದೆ. ಕೇವಲ ಸಾಂಸ್ಕೃತಕ ಲೋಕದಲ್ಲಷ್ಟೇ ಅಲ್ಲ, ಯಾವ ಹಂತದಲ್ಲೂ ಈ ಬಾಗದ ಜನರ ನೋವು- ಯಾತನೆ ಆಳುವವರಿಗೆ ತಲುಪಿಸುವ ಇಚ್ಛಾಶಕ್ತಿ ಈಗಿಲ್ಲದಂತಾಗಿದೆ. ಈ ಜಿಲ್ಲೆ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ನಾಲ್ಕಾರು ತಿಂಗಳಾದರೂ ಇತ್ತ ಇಣುಕಿ ನೋಡೋದು ಇಲ್ಲ. ಹೀಗಿರುವಾಗ ಈ ಭಾಗದ ಜನರ ನೋವು- ಯಾತನೆ, ಗೋಳು ಆಳುವವರಿಗೆ ತಲುಪಿಸೋರು ಯಾರು? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಸಾರಸ್ವತ ಲೋಕವಾಗಲಿ, ಸಾಂಸ್ಕೃತಿಕ ಲೋಕದಲ್ಲಾಗಲಿ ಈ ರಾಜಕೀಯ ಇಚ್ಛಾಶಕ್ತಿ ಬರ ತೀವ್ರ ಬಿರುಗಾಳಿ ಎಬ್ಬಿಸಿದೆ ಎಂದೇ ಹೇಳಬೇಕು.

ಕಲಬುರಗಿ ಭಾಗದಿಂದ ಸಾಧಕರೇ ಇಲ್ಲವೆ? ಎಂಬ ಪ್ರಶ್ನೆ ಮೂಡಿದೆ. ಸರ್ಕಾರದ ಕ್ರಮದಿಂದ ಇಂತಹ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕಲ್ಯಾಣ ನಾಡು ಎಂದು ಹೆಸರಿಟ್ಟರಷ್ಟೇ ಸಾಲದು, ಇಲ್ಲಿನ ಸಾಧಕರಿಗೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನ್ಯಾಯಸಮ್ಮತವಾಗಿ ನಡೆಯಬೇಕು. ಅದೇ ಕೆಲಸ ನಡೆಯದೇ ಹೋದಲ್ಲಿ ಸಹಜವಾಗಿಯೇ ಈ ಭಾಗದಲ್ಲಿ ಅಸಮಾಧಾನ ಮಡುಗಟ್ಟುತ್ತದೆ. ಅದು ಮುಂದೆ ಬೇರೆ ಸ್ವರೂಪ ಪಡೆದುಕೊಳ್ಳು್ಳವ ಅಪಾಯಗಳೇ ಅಧಿಕ. ಪ್ರಾದೇಶಿಕ ಅಸಮಾನತೆ ಸರಿಪಡಿಸುವ ಕೆಲಸವಾಗಿಲ್ಲ, ಸಾಮಾಜಿಕ ನ್ಯಾಯವೂ ಕಾಪಾಡಲಾಗಿಲ್ಲ. ಹೀಗಾಗಿ ರಾಜ್ಯೋತ್ಸವ ಪುರಸ್ಕಾರ ಭ್ರಮ ನಿರಸನ ಉಂಟು ಮಾಡಿದೆ ಎಂದು ಕಲಬುರಗಿ ಸಾಹಿತಿ ಡಾ. ಎಚ್‌.ಟಿ. ಪೋತೆ ಅವರು ತಿಳಿಸಿದ್ದಾರೆ. 

ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ 6 ಜಿಲ್ಲೆಗಳ ಜನಸಂಖ್ಯೆ ರಾಜ್ಯದ ಜನಸಂಖ್ಯೆಗೆ ಹೋಲಿಸಿದಲ್ಲಿ ಶೇ.20 ರಷ್ಟಿದೆ. ನಮಗೆ ಯಾವುದೇ ರಂಗದಲ್ಲೂ ಶೇ.10ರಷ್ಟುಪಾಲು ಸಿಗಲೇಬೇಕು. ಆದರೆ, ಪುರಸ್ಕಾರದಲ್ಲಂತೂ ಈ ಪ್ರಮಾಣ ನಮಗೆ ಸಿಗುತ್ತಿಲ್ಲ. ಇದು ಖಂಡನೀಯವಾಗಿದೆ. ಕಲ್ಯಾಣ ನಾಡಿನ ದುರ್ದೈವ, ಪುರಸ್ಕಾರದಲ್ಲೂ ನಮಗೆ ಅನ್ಯಾಯವಾಗುತ್ತಿದೆ. ಇದು ಕಲಂ 371 (ಜೆ) ನಿಯಮಗಳು, ಆಶಯಗಳ ಉಲ್ಲಂಘನೆಯಾಗಿದೆ ಎಂದು ಹೋರಾಟಗಾರ ಉಮಾಕಾಂತ ನಿಗ್ಗುಡಗಿ ತಿಳಿಸಿದ್ದಾರೆ.