ಕೊರೋನಾ ಕಾಟ: ನರ್ಸಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯ್ತಿ
ನರ್ಸಿಂಗ್ ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ನಿರ್ಧಾರ|ನರ್ಸಿಂಗ್ ಮೊದಲ, 2 ನೇಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳನ್ನಾಧರಿಸಿ ಮುಂದಿನ ತರಗತಿಗೆ ಅವಕಾಶ|
ಕಲಬುರಗಿ(ಅ.29): ಭಾರತೀಯ ಶುಶ್ರೂಷ ಪರಿಷತ್ತಿನ ಸುತ್ತೊಲೆಯಂತೆ 2019-20 ನೆ ಸಾಲಿನ ಜೆ ಎನ್ ಎಂ (ಜನರಲ್ ನರ್ಸಿಂದ್ ಮಿಡ್‌ವೈಫ್) ನರ್ಸಿಂಗ್ ವಿದ್ಯಾರ್ಥಿಗಳಿಗೆ ಮೊದಲನೆ ಮತ್ತು ಎರಡನೆ ವರ್ಷದ ಪರೀಕ್ಷೆಯನ್ನು ನಡೆಸದೆ ಮುಂದಿನ ವರ್ಗಕ್ಕೆ (ಹಂತಕ್ಕೆ) ತೇರ್ಗಡೆ ಮಾಡಲು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತು ಬೆಂಗಳೂರು ಅವರು ಆದೇಶ ಹೊರಡಿಸಿದ್ದಾರೆ.
ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಟ್ರೇನರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಇವರ ಪತ್ರ, ಭಾರತೀಯ ಶುಶ್ರೂಷಾ ಪರಿಷತ್ತಿನ ಮಾರ್ಗಸೂಚಿಗಳಂತೆ ಗುಜರಾತ್, ತಮೀಳುನಾಡು ನರ್ಸಿಂಗ್ ಕೌನ್ಸಿಲ್ ಕೋವಿಡ್ - 19 ಹಿನ್ನೆಲೆಯಲ್ಲಿ 2019- 20 ನೇ ನರ್ಸಿಂಗ್ ಮೊದಲ, 2 ನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಂದ ವಿನಾಯ್ತಿ ನೀಡಿ, ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಿಗದಿಪಡಿಸಿದೆ.
ವಿದ್ಯಾರ್ಥಿಗಳಿಗೆ ಸಿಗಲಿದೆ 5 ಕೋಟಿ ರು. ಸ್ಕಾಲರ್ ಶಿಪ್
ಇದೇ ಕ್ರಮ ಕರ್ನಾಟಕದಲ್ಲೂ ಅನ್ವಯಿಸುವಂತೆ ಮನವಿಗಳು ಬಂದ ಹಿನ್ನೆಲೆಯಲ್ಲಿ ಭಾರತೀಯ ಶುಶ್ರೂಷಾ ಪರಿಷತ್ತಿನ ಸುತ್ತೋಲೆಯಂತೆ ರಾಜ್ಯದಲ್ಲಿಯೂ ನರ್ಸಿಂಗ್ ಮೊದಲ, 2 ನೇಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಆಂತರಿಕ ಅಂಕಗಳನ್ನಾಧರಿಸಿ ಮುಂದಿನ ತರಗತಿಗೆ ಅವಕಾಶ ನೀಡಲಾಗುತ್ತಿದೆ. 3 ನೇ ವರ್ಷದ ಜೆಎನ್‌ಎಂ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸುವಂತೆ ಕರ್ನಾಟಕ ರಾಜ್ಯ ಸುಶ್ರೂಷಾ ಪರಿಷತ್ತಿನ ನಿರ್ದೇಶಕರು ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿಯ ಕಾರ್ಯದರ್ಶಿಗಳಿಗೆ ಆದೇಶಿಸಿದ್ದಾರೆ.