ಬೆಂಗಳೂರು(ಜು.15): ಕೊರೋನಾ ಸೋಂಕು ದೃಢಪಟ್ಟು 48 ಗಂಟೆಗಳಾಗಿದ್ದರೂ ತನಗೆ ಹಾಗೂ ತನ್ನ ತಾಯಿಗೆ ಚಿಕಿತ್ಸೆ ಪಡೆಯಲು ಬಿಬಿಎಂಪಿ ಅಧಿಕಾರಿಗಳಿಗೆ ಅಂಗಲಾಚಿದರೂ ಸ್ಪಂದಿಸಿಲ್ಲ ಎಂದು ಮಗಳು ಅಳುತ್ತಾ ನೋವು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನಗರದ ಭದ್ರಪ್ಪ ಬಡಾವಣೆಯಲ್ಲಿ ನೆಲೆಸಿರುವ ಯುವತಿ, ಮನೆಯಲ್ಲಿ ನಾನು ಮತ್ತು ನಮ್ಮ ತಾಯಿ ಮಾತ್ರ ಇದ್ದೇವೆ. ಇಬ್ಬರಿಗೂ ಕೊರೋನಾ ಸೋಂಕು ದೃಢ ಪಟ್ಟಿದೆ. ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ತಾಯಿಗೆ ಇದೀಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಅವರ ಜೀವ ಉಳಿಸಿಕೊಡಿ, ಆಸ್ಪತ್ರೆಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ, ಖಾಸಗಿ ಆಸ್ಪತ್ರೆಗೆ ಸೇರಿಸಲು ನಮ್ಮ ಬಳಿ ಹಣ ಇಲ್ಲ ಎಂದು ಆಕೆ ಗೋಳಾಡಿದ್ದಾರೆ.

ನಮ್ಮ ಮೆಟ್ರೋ ಕಾಮಗಾರಿ ಮಾಡಿದ 80 ಗುತ್ತಿಗೆ ಕಾರ್ಮಿಕರಿಗೆ ಕೊರೋನಾ

ನಮ್ಮ ತಂದೆ ಮೃತಪಟ್ಟಿದ್ದು, ಚಿಕ್ಕಪ್ಪನ ಆಶ್ರಯದಲ್ಲಿ ಬದುಕುತ್ತಿದ್ದೆವು. ಅವರಿಗೆ ಜ್ವರ ಬಂದು ಎರಡು ವಾರಗಳ ಹಿಂದೆ ತೀರಿಕೊಂಡಿದ್ದಾರೆ. ಆಸ್ಪತ್ರೆಗೆ ಹೋಗಲು ಹಣ ಇಲ್ಲ. ಬಿಪಿಎಲ್‌ ಕಾರ್ಡ್‌ ಇದ್ದರೂ ಯಾರೂ ನೆರವಿಗೆ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾಳೆ.

ಜಿಕೆವಿಕೆಯಲ್ಲಿನ ಆರೈಕೆ ಕೇಂದ್ರಕ್ಕೆ ಕಳುಹಿಸುವಂತೆ ಕೇಳಿಕೊಂಡರೆ ಪಾಲಿಕೆ ಸಿಬ್ಬಂದಿ, ಅಲ್ಲಿಯ ವೈದ್ಯರ ಮೊಬೈಲ್‌ ಸಂಖ್ಯೆ ಕೊಡಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ವೈದ್ಯರ ಮೊಬೈಲ್‌ ಸಂಖ್ಯೆ ನಮ್ಮ ಬಳಿ ಇಲ್ಲ. ಇಷ್ಟೆಲ್ಲಾ ಕಷ್ಟಪಡುವ ಬದಲು ರೈಲಿಗೆ ತಲೆಕೊಟ್ಟು ಜೀವ ಬಿಡುವುದೇ ಉತ್ತಮ ಎಂದು ತಾಯಿ ಹೇಳುತ್ತಿದ್ದಾರೆ. ಏನು ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಹಾಸಿಗೆ ನೀಡದ ಅಪೊಲೋ, ವಿಕ್ರಂ ಆಸ್ಪತ್ರೆ ಒಪಿಡಿ ಬಂದ್‌

ರಾತ್ರಿ ದಾಖಲು: ಮಾಧ್ಯಮಗಳಲ್ಲಿ ಯುವತಿಯ ವಿಡಿಯೋ ಸುದ್ದಿ ಪ್ರಕಟವಾಗುತ್ತಿದ್ದಂತೆ ರಾತ್ರಿಯ ಹೊತ್ತಿಗೆ ಬಿಬಿಎಂಪಿ ಅಧಿಕಾರಿಗಳು ತಾಯಿ ಹಾಗೂ ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.