17 ಲಕ್ಷ ಸಾಲ ಪಡೆದ ರೈತನಿಗೆ ವಂಚಿಸಿ ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಬಡ್ಡಿ ದಂಧೆಕೋರರು ಕಬಳಿಸಿದ್ದಾರೆ. ಅಡಮಾನ ಪತ್ರದ ಬದಲು ಖರೀದಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ಮೋಸ ಎಸಗಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಗದಗ: 17 ಲಕ್ಷ ಸಾಲ ಪಡೆದ ರೈತನ 5 ಎಕರೆ ಜಮೀನನ್ನೇ ಕಬಳಿಸಿದ ಘಟನೆಯೊಂದು ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹೊಸ ಮುಖ ಇದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಹೋಡ ಗ್ರಾಮದ ರೈತ ಮಹ್ಮದ್ ರಫೀಕ್ ದೊಡ್ಡಮನಿ ಹಾಗೂ ಅವರ ಸಹೋದರರು ಆರ್ಥಿಕ ಸಂಕಷ್ಟದ ಹಿನ್ನೆಲೆ ಖಾಸಗಿ ಬಡ್ಡಿ ದಂಧೆಕೋರರಲ್ಲಿ ₹17 ಲಕ್ಷ ಸಾಲ ಕೇಳಿದ್ದರು. ಅದಕ್ಕೆ ಒಪ್ಪಿದ ಅವರು ಮುಂಗಡವಾಗಿಯೇ ₹5 ಲಕ್ಷ ಬಡ್ಡಿ ಕಡಿತ ಮಾಡಿಕೊಂಡು ಕೇವಲ ₹12 ಲಕ್ಷ ಮಾತ್ರ ನೀಡಿದ್ದಾರೆ.

ಸಾಲದ ಭದ್ರತೆಯಾಗಿ ರೈತನ 5 ಎಕರೆ ಜಮೀನಿನ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಡಮಾನ ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿ, ಅಡಮಾನ ಪತ್ರದ ಬದಲಿಗೆ ಖರೀದಿ ಪತ್ರ ಸಿದ್ಧಪಡಿಸಿ, ಶೇಷಗಿರಿಸಾ ಬಾಕಳೆ ಹೆಸರಿಗೆ ಜಮೀನಿನ ಖರೀದಿ ಪತ್ರ ಮಾಡಿಸಲಾಗಿದೆ. ಈ ಬಡ್ಡಿ ದಂದೆಕೋರರು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪರ್ಕಿಸಿ ದೂರು ಸಲ್ಲಿಸಿದೆ. ಪ್ರಕರಣದ ಗಂಭೀರತೆಯನ್ನು ಅರಿತ ಎಸ್‌ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿಶೀಟರ್ ಬಂಧನ

ಈ ವಂಚನೆಯ ಹಿಂದೆ ಬೆಟಗೇರಿ ಮೂಲದ ರೌಡಿಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ರೌಡಿಶೀಟರ್ ಯುವರಾಜ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಬಂಧಿಸಿದ್ದಾರೆ. ಇನ್ನುಳಿದ ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡ ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹೆಚ್ಚುತ್ತಿದೆ ಅಕ್ರಮ ಬಡ್ಡಿ ದಂಧೆ

ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆ ಹಾಗೂ ಜಮೀನು ಕಬಳಿಕೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಾರದ ಹಿಂದಷ್ಟೇ ಬಡ್ಡಿ ಹಣಕ್ಕಾಗಿ ಮನೆಯ ಕಾಂಪೌಂಡ್ ಧ್ವಂಸಗೊಳಿಸಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೈತನ ಜಮೀನನ್ನೇ ಕಬಳಿಸಿರುವ ಆರೋಪ ಬೆಳಕಿಗೆ ಬಂದಿರುವುದು ಬಡ್ಡಿ ದಂಧೆಕೋರರ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತೋರಿಸುತ್ತದೆ.

ಅಪರಾಧ ಹಿನ್ನೆಲೆ

ಈ ಪ್ರಕರಣದಲ್ಲಿ ತೊಂದರೆಗೊಳಗಾದ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ತಮ್ಮ ಅಳಲನ್ನು ತೋಡಿಕೊಂಡು, ಆರೋಪಿತರು ನಮಗೆ ನಂಬಿಸಿ ಮೋಸ ಮಾಡಿ ಜಮೀನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ನಂತರ ಪರಿಶೀಲನೆ ಮಾಡಿದಾಗ ಆ ವ್ಯಕ್ತಿ ಅಪರಾಧ ಹಿನ್ನೆಲೆ ತಿಳಿದು ಬಂದಿದೆ. ಅದಕ್ಕಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.

ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 1600 ಕಾನ್ಸ್‌ಟಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಅರ್ಹತೆ, ವಯೋಮಿತಿ ಎಷ್ಟಿರಬೇಕು?

ನ್ಯಾಯ ಬೇಕು

ನಮಗೆ ಅಡಚಣೆ ಇತ್ತು. ಅದಕ್ಕಾಗಿ ಹಣವನ್ನು ಪಡೆದಿರುತ್ತೇವೆ. ಆದರೆ ನಂಬಿಸಿ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಅತ್ಯಂತ ಬೆಲೆಬಾಳುವ ಜಮೀನು ಕಿತ್ತುಕೊಂಡು ನಮ್ಮನ್ನು ಬೀದಿಪಾಲು ಮಾಡಿದ್ದಾರೆ ಎಂದು ಮಹ್ಮದ್ ರಫೀಕ್ ದೊಡ್ಡಮನಿ ತಿಳಿಸಿದರು.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗೂ ‘ಸರ್ಜರಿ’: 14 ಲಕ್ಷ ಅನರ್ಹರ ಬಿಪಿಎಲ್ ಕಾರ್ಡ್ ರದ್ದು? ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟನೆ