ಮುಂಡರಗಿ ತಾಲೂಕಿನಲ್ಲಿ, ಹೊರರಾಜ್ಯದ ಉದ್ಯಮಿಗಳು ರೈತರಿಗೆ ಅಧಿಕ ಹಣದಾಸೆ ತೋರಿಸಿ ದಾಳಿಂಬೆ ಬೆಳೆಯಲು ಸಾವಿರಾರು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆಯುತ್ತಿದ್ದಾರೆ. ಈ ಬೆಳವಣಿಗೆಯು ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ನಾಶ, ಜಲ ಮಾಲಿನ್ಯ ಮತ್ತು ಪರಿಸರ ಹಾನಿಯಂತಹ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತಿದೆ.
ರಿಯಾಜಅಹ್ಮದ ಎಂ. ದೊಡ್ಡಮನಿ
ಗದಗ: ಬಡತನವನ್ನೇ ಬಂಡವಾಳ ಮಾಡಿಕೊಂಡಿರುವ ಹೊರರಾಜ್ಯದ ಉದ್ಯಮಿಗಳು ರೈತರಿಗೆ ಹಣದಾಸೆ ತೋರಿಸಿ ಭೂಮಿಯ ಫಲವತ್ತತೆಯನ್ನು ನುಂಗುವ ದಾಳಿಂಬೆಯನ್ನು ಮುಂಡರಗಿ ತಾಲೂಕಿನಾದ್ಯಂತ ಸುಮಾರು 2500 ಎಕರೆಯಲ್ಲಿ ಬೆಳೆಯಲು ಮುಂದಾಗಿದ್ದಾರೆ. ಇದರ ಅರಿವಿಲ್ಲದ ರೈತರು ದಾಳಿಂಬೆ ಬೆಳೆ ಬೆಳೆಯುವುದಕ್ಕೆ ಭೂಮಿಯನ್ನು ಗುತ್ತಿಗೆ ಕೊಡಲಾರಂಭಿಸಿದ್ದಾರೆ.
ಡಂಬಳ ಹೋಬಳಿಯ ಗ್ರಾಮಗಳು ಮಳೆಯಾಶ್ರಿತ ಮತ್ತು ಸಣ್ಣನೀರಾವರಿ ಆಶ್ರಿತ ಪ್ರದೇಶವಾಗಿರುವುದರ ಜತೆಗೆ ಫಲವತ್ತತೆಯ ಕೆಂಪು, ಕಪ್ಪುಮಣ್ಣಿನಿಂದ ಕೂಡಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಈ ಪ್ರದೇಶದಲ್ಲಿ ಉತ್ತಮ ವಾತಾವರಣವಿದೆ. ಕೊಳವೆ ಬಾವಿ ನೀರಿನಿಂದ ಹಲವಾರು ರೈತರು ಡ್ರ್ಯಾಗನ್ ಫ್ರುಟ್, ಮಾವು, ಅಡಕೆ, ಬಾಳೆ, ಟೊಮೇಟೊ, ಬದನೆಕಾಯಿ ಸೇರಿ ಹಲವು ಮಾದರಿಯ ಬೆಳೆ ಬೆಳೆದು ಜೀವನ ಕಟ್ಟಿಕೊಂಡಿದ್ದಾರೆ.
ಬೇರೆ ರಾಜ್ಯದವರ ಕೈಯಲ್ಲಿ ಭೂಮಿ
ಶ್ರಮ ಪಡದೆ ಇರುವವರು ಮತ್ತು ಆಳು ಸಿಗದೆ ಇರುವುದರಿಂದ, ನೀರು, ಹಣದ ಅಭಾವ ಹಾಗೂ ಬೆಳೆ ಬೆಳೆಯಲು ಸಾಧ್ಯವಾಗದ ರೈತರ ಅಸಹಾಯಕತೆಯನ್ನು ಮನಗಂಡಿರುವ ಬೇರೆ ರಾಜ್ಯದ ಉದ್ಯಮಿಗಳು ಡಂಬಳ ಹೋಬಳಿಯ ನೂರಾರು ರೈತರ ಮನವೊಲಿಸಿ ದಾಳಿಂಬೆ ಬೆಳೆಯುವುದಕ್ಕೆ ಭೂಮಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಹಣದ ಆಮಿಷ
ಸ್ಥಳಿಯ ರೈತರು ಎಕರೆಗೆ ₹5 ಸಾವಿರದಿಂದ ₹10 ಸಾವಿರದವರೆಗೆ ವಾರ್ಷಿಕ ಗುತ್ತಿಗೆ ಕೊಡುತ್ತಿದ್ದರು. ಆದರೆ ಬೇರೆ ರಾಜ್ಯದವರು ರೈತರ ಜಮೀನಿನಲ್ಲಿ ಅವರೇ ಕೊಳವೆಬಾವಿ ಕೊರೆಸಿ ಎಕರೆಗೆ ₹25 ಸಾವಿರ ₹30ಸಾವಿರದ ವರೆಗೆ ಹಣ ನೀಡುವ ಆಮಿಷಕ್ಕೆ ಒಳಪಡಿಸಿ ದಾಳಿಂಬೆ ಬೆಳೆಯಲು ಭೂಮಿ ನೀಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಒಪ್ಪಿ ರೈತರು ಜಮೀನಿನಲ್ಲಿ ದಾಳಿಂಬೆ ಬೆಳೆಯಲು ಭೂಮಿ ಬಿಟ್ಟು ಕೊಡುತ್ತಿದ್ದಾರೆ. ಈಗಾಗಲೇ ಮುಂಡರಗಿ ತಾಲೂಕಿನಾದ್ಯಂತ ನೂರಾರು ಹೆಕ್ಟೇರ್ ಜಮೀನಿನಲ್ಲಿ ದಾಳಿಂಬೆ ಬೆಳೆಯಲಾಗಿದೆ.
ಪೂರ್ವಜರಿಂದ ಹಿಡಿದು ತಮ್ಮ ಕುಟುಂಬಕ್ಕೆ ವಿವಿಧ ಧಾನ್ಯ, ಕಾಳುಕಡಿ, ದನಕರುಗಳಿಗೆ ಮೇವು ಬೆಳೆದು ಜೀವನಕ್ಕೆ ಆಶ್ರಯವಾಗಿದ್ದ ಫಲವತ್ತಾದ ಭೂಮಿಯನ್ನು ಬೇರೆ ರಾಜ್ಯದವರಿಗೆ ದಾಳಿಂಬೆ ಬೆಳೆಯಲು ಹಣದಾಸೆಗೆ 10 ವರ್ಷ, 20 ವರ್ಷ, 30 ವರ್ಷಗಳ ಗುತ್ತಿಗೆ ನೀಡುತ್ತಿದ್ದಾರೆ. ಕೆಲವೆಡೆ ಜಮೀನನ್ನೆ ಮಾರುತ್ತಿರುವುದು ವಿಪರ್ಯಾಸದ ಸಂಗತಿ.
ಬೇರೆ ರಾಜ್ಯದ ಕೂಲಿ ಆಳು
ದಾಳಿಂಬೆ ಬೆಳೆ ಬೆಳೆಯಲು ರೈತರು ಭೂಮಿ ಬಿಟ್ಟು ಕೊಟ್ಟರಷ್ಟೇ ಸಾಕು. ಹೊರ ರಾಜ್ಯಗಳಿಂದ ಕೂಲಿಯಾಳುಗಳನ್ನು ಕರೆತಂದು ಇಲ್ಲಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಸ್ಥಳೀಯ ರೈತರಿಗೆ ದಾಳಿಂಬೆ ಬೆಳೆ ಬೆಳೆಯುವ ಜ್ಞಾನವಿಲ್ಲ. ಬೆಳೆಗಳಿಗೆ ಬರುವ ರೋಗದ ಬಗ್ಗೆ ಎಚ್ಚರ ವಹಿಸುವುದಿಲ್ಲ. ಕೀಟನಾಶಕಗಳನ್ನು ಸಿಂಪರಣೆ ಮಾಡುವ ಅರಿವಿರುವುದಿಲ್ಲವೆಂಬ ಕಾರಣಕ್ಕೆ ಹೊರರಾಜ್ಯದಿಂದಲೇ ಕೂಲಿಯಾಳುಗಳನ್ನು ಇಲ್ಲಿಗೆ ಕರೆತಂದು ಕೆಲಸ ಮಾಡಿಸುವುದಕ್ಕೆ ಆಸಕ್ತಿ ವಹಿಸಿದ್ದಾರೆ.
ಅಡ್ಡ ಪರಿಣಾಮ
ದಾಳಿಂಬೆ ಬೆಳೆಗಳಲ್ಲಿ ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ವ್ಯಾಪಕವಾಗಿ ರಾಸಾಯನಿಕ ಔಷಧಗಳನ್ನು ಸಿಂಪಡಿಸಲಾಗುತ್ತಿದೆ. ಆದರೆ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುವುದು, ಭೂಗರ್ಭ ಜಲ ಮಾಲಿನ್ಯಗೊಳ್ಳುವುದು ಹಾಗೂ ಬೆಳೆಗಳ ಪರಾಗಸ್ಪರ್ಶ ಮಾಡುವ ಜೇನುನೊಣಗಳಂತಹ ಉಪಯುಕ್ತ ಕೀಟಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಔಷಧ ಬಳಕೆಯನ್ನು ನಿಯಂತ್ರಿತವಾಗಿ ನಡೆಸಬೇಕು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.
ರೈತರ ಹೇಳಿಕೆ
ಡಂಬಳ ಹೋಬಳಿಯಾದ್ಯಂತ ಹಲವು ಕೆರೆಗಳಿವೆ. ಕೆಲವೆಡೆ ಬೋರವೆಲ್‌ಗಳೂ ಇದ್ದು, ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿದ್ದು, ಇದರಿಂದ ನೀರಿನ ಕೊರತೆ ಇಲ್ಲ. ಹಣದ ಆಸೆಗೆ ರೈತರು ಬೇರೆ ರಾಜ್ಯದಿಂದ ಬಂದು ದಾಳಿಂಬೆ ಬೆಳೆಯುವ ಉದ್ಯಮಿಗಳಿಗೆ ಫಲವತ್ತಾದ ಭೂಮಿ ಕೊಡುತ್ತಿರುವುದು ಖೇದಕರ.
ಮಂಜುನಾಥ ಬಿಸನಳ್ಳಿ, ರಾಜಪ್ಪ ಯಪ್ಪೇರಿ, ವೆಂಕಟೇಶ ತಳವಾರ, ಡಂಬಳ ಗ್ರಾಮದ ರೈತರು


