ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು ಉತ್ತರಾಖಂಡದಲ್ಲಿ 15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಎನ್‌ಸಿಸಿ ಕೆಡೆಟ್ ಆಗಿರುವ ಅವರು, ಶಿಖರದ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ತಮ್ಮ ಗ್ರಾಮ, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಗದಗ: ಉತ್ತರಾಖಂಡದ ಉತ್ತರ ಕಾಶಿಯಲ್ಲಿರುವ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್(ಎನ್‌ಐಎಂ) ವತಿಯಿಂದ ಆಯೋಜಿಸಿದ್ದ ಪ್ರತಿಷ್ಠಿತ ಪರ್ವತಾರೋಹಣ ಶಿಬಿರದಲ್ಲಿ ಭಾಗವಹಿಸಿದ್ದ ಸಮೀಪದ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ ಸೃಷ್ಟಿ ಉಮೇಶ್ ಮೇಟಿ ಅವರು 15500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ಸಾಹಸ, ಸಾಧನೆ ಮೆರೆದಿದ್ದಾರೆ.
ಎನ್‌ಸಿಸಿ ಘಟಕದ ಕೆಡೆಟ್ ಸೃಷ್ಟಿ
ಗದುಗಿನ ಜೆಟಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹಾಗೂ 38 ಕೆಎಆರ್ ಬಿಎನ್ ಎನ್‌ಸಿಸಿ ಘಟಕದ ಕೆಡೆಟ್ ಆಗಿರುವ ಸೃಷ್ಟಿ ಅವರು ಶಿಖರದ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ದೇಶಭಕ್ತಿ, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಅನಾವರಣಗೊಳಿಸಿದ್ದಾರೆ. ಸಾಧನೆಯ ಮೂಲಕ ಅವರು ತಮ್ಮ ಕಾಲೇಜು, ಕೆಎಲ್ಇ ಸಂಸ್ಥೆ, ಗದಗ ಜಿಲ್ಲೆ ಹಾಗೂ ಜಕ್ಕಲಿ ಗ್ರಾಮಕ್ಕೆ ವಿಶೇಷ ಕೀರ್ತಿ ತಂದಿದ್ದಾರೆ.
ಸೃಷ್ಟಿ ಅವರ ಈ ಅಪೂರ್ವ ಸಾಧನೆಗೆ ಜೆಟಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಸಿಸಿ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಶಿಖರಗಳನ್ನು ಏರಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.


