ಥರ್ಡ್‌ಪಾರ್ಟಿ ಗೋಲ್‌ಮಾಲ್: ತಾನೇ ಮಾಡಿದ ಆದೇಶ ಉಲ್ಲಂಘಿಸಿದ ಗದಗ ಜಿಲ್ಲಾಡಳಿತ
* 2014-15 ರಲ್ಲಿ ತಾನೇ ಮಾಡಿದ ಆದೇಶವನ್ನು 2021ರಲ್ಲಿ ಉಲ್ಲಂಘಿಸಿದ ಜಿಲ್ಲಾಡಳಿತ
* ಪ್ರತಿ ಲಕ್ಷಕ್ಕೆ ಶೇ. 0.01 ನಿಗದಿ ಮಾಡಿ ಹಾಕಿರುವ ಗುತ್ತಿಗೆ ಕಂಪನಿಗೆ ಟೆಂಡರ್ ನೀಡಿದ ಜಿಲ್ಲಾಡಳಿತ
* ಇಷ್ಟೊಂದು ಕಡಿಮೆಗೆ ಟೆಂಡರ್ ಹಾಕಿದ ಕಂಪನಿಯಿಂದ ಅಕ್ರಮ ನಡೆಯುವ ಸಾಧ್ಯತೆ
ಶಿವಕುಮಾರ ಕುಷ್ಟಗಿ
ಗದಗ(ನ.06): ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಶಾಸಕರ, ಸಂಸದರ, ವಿಪ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಮಂಜೂರಾದ ಕಾಮಗಾರಿಗಳಿಗೆ ಪರಿಶೀಲನೆ ನಡೆಸಲು ನೇಮಕವಾಗುವ ಥರ್ಡ್‌ಪಾರ್ಟಿ ನೇಮಕಾತಿ ಪ್ರಕ್ರಿಯೆಯಲ್ಲಿಯೇ ಗದಗ(Gadag) ಜಿಲ್ಲಾಡಳಿತ ನಡೆ ಹಲವು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.
2014-15ನೇ ಸಾಲಿನಲ್ಲಿ ಇದೇ ಮಾದರಿಯಲ್ಲಿಯೇ ಟೆಂಡರ್(Tender) ಪ್ರಕ್ರಿಯೆ ನಡೆಸಿದ್ದ ಜಿಲ್ಲಾಡಳಿತ ಅಂದು ಶೇ. 0.12 ದರಕ್ಕೆ (Percent) ಆರ್.ಕೆ. ರಘು ಎನ್ನುವ ಕಂಪನಿ ಟೆಂಡರ್ ನೀಡಿತ್ತು. ಆದರೆ, ಅಂದು ಇಷ್ಟೊಂದು ಕಡಿಮೆ ಹಣಕ್ಕೆ ಟೆಂಡರ್ ನೀಡಿದಲ್ಲಿ ಗುತ್ತಿಗೆ(Contract) ಪಡೆದ ಕಂಪೆನಿ ಅಕ್ರಮ ನಡೆಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಈ ಕಂಪೆನಿಗೆ ಗುತ್ತಿಗೆ ನೀಡಬೇಡಿ ಎಂದು ರಿಜೆಕ್ಟ್ ಮಾಡಿತ್ತು. ಆದರೆ, 2021ರಲ್ಲಿ ಶೇ. 0.01 (ಪ್ರತಿ ಲಕ್ಷಕ್ಕೆ ಸೇವಾ ಶುಲ್ಕ) ನಿಗದಿ ಮಾಡಿ ಟೆಂಡರ್ ಹಾಕಿರುವ ಹೊಸಪೇಟೆ ಮೂಲದ ಕಂಪೆನಿಗೆ ಗುತ್ತಿಗೆ ನೀಡಿದ್ದು, ಈ ಹಿಂದೆ ತಾನೇ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಮಾಡಿದ ದಿಟ್ಟ ನಿರ್ಧಾರವನ್ನು ಮರಳಿ ತಾನೇ ಮುರಿದಿದ್ದು ಕೂಡಾ ಸಂಶಯಕ್ಕೆ ಕಾರಣವಾಗಿದೆ.
ಗದಗ ಪೊಲೀಸರ ಭರ್ಜರಿ ಬೇಟೆ: 89 ಆರೋಪಿಗಳ ಬಂಧನ
ಸರ್ಕಾರದ ನಿಯಮ ಏನು?:
ಥರ್ಡ್‌ಪಾರ್ಟಿ ನೇಮಕ ಮಾಡುವಲ್ಲಿ ಜಿಲ್ಲಾಡಳಿತಗಳು(District Administration0 ಅನುಸರಿಸಬೇಕಾದ ನಿಯಮಗಳ ಬಗ್ಗೆ ಸರ್ಕಾರ(Government of Karnataka) ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿದ್ದು ಪ್ರತಿ ಲಕ್ಷಕ್ಕೆ ಶೇ. 0.45ಕ್ಕಿಂತಲೂ ಕಡಿಮೆ ದರಕ್ಕೆ ಯಾರೇ ಟೆಂಡರ್ ಸಲ್ಲಿಸಿದರೂ ಅದಕ್ಕೆ ಅವಕಾಶ ನೀಡಬಾರದು. ಇದರಿಂದ ಥರ್ಡ್ ಪಾರ್ಟಿ ಹಾಗೂ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಹಣ ಹೊಡೆಯುತ್ತಾರೆ ಎಂದು ಸ್ಪಷ್ಟವಾಗಿ ನಮೂದಿಸಿದ್ದಾರೆ. ಇದನ್ನು ಉಲ್ಲಂಘಿಸಿರುವ ಜಿಲ್ಲಾಡಳಿತ ಶೇ. 0.01 ನಮೂದಿಸಿದ ಕಂಪೆನಿಗೆ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ.
ಮತಾಂತರ ಕ್ರೌರ್ಯಕ್ಕಿಂತ ಹೀನ ಕೃತ್ಯ: ಪ್ರಮೋದ್ ಮುತಾಲಿಕ್
ಇದು ಸಾಧ್ಯವಿಲ್ಲ:
ಜಿಲ್ಲೆಯಲ್ಲಿ ಸಧ್ಯ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಲು ಅವರು ನೂರು ರು.ಗೆ ಒಂದು ಪೈಸೆ ಪಡೆದರೆ ಒಂದು ಕೋಟಿಯ ಕಾಮಗಾರಿ ಪರಿಶೀಲನೆ ನಡೆಸಿ ವರದಿಕೊಟ್ಟರೆ ಆ ಕಂಪೆನಿಗೆ ಒಂದು ಸಾವಿರ ರುಪಾಯಿ ಸಿಗುತ್ತದೆ. ಇಷ್ಟೊಂದು ಕಡಿಮೆ ಹಣದಲ್ಲಿ ಆ ಕಂಪನಿಯವರು 10ಕ್ಕೂ ಹೆಚ್ಚು ಅಭಿಯಂತರರು(Engineers), ಅವರಿಗೆ ವಾಹನ ವ್ಯವಸ್ಥೆ, ಕಾಮಗಾರಿ ಪರಿಶೀಲನೆಗೆ ಬೇಕಾಗುವ ಅತ್ಯಾಧುನಿಕ ಸಾಮಗ್ರಿ ನೀಡಲು ಸಾಧ್ಯವಿಲ್ಲ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಸಾಕಷ್ಟುಅಕ್ರಮ ನಡೆದಿದ್ದು ಇಷ್ಟೊಂದು ಕಡಿಮೆ ಹಣದಲ್ಲಿ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎನ್ನುವುದು ಈಗಾಗಲೇ ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಗಳಿಂದ ಪರಿಶೀಲನೆ ವೇಳೆ ಕಿರಿಕಿರಿ ಅನುಭವಿಸುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಅಭಿಪ್ರಾಯ.
ಬ್ಲಾಕ್ ಲಿಸ್ಟ್‌ಗೆ ಕ್ರಮ:
ಈ ಕುರಿತು ತಾಂತ್ರಿಕ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸರ್ಕಾರದ ನಿಯಮಗಳ ಪ್ರಕಾರ ಯಾರು ಅತ್ಯಂತ ಕಡಿಮೆ ಬೆಲೆ ನಿಗದಿ ಮಾಡಿದವರಿಗೆ ಟೆಂಡರ್ ಕೊಡಲಾಗಿದೆ. ಅಷ್ಟೊಂದು ಕಡಿಮೆ ಹಣಕ್ಕೆ ಟೆಂಡರ್ ಹಾಕಿದ್ದು ಅವನ ತಪ್ಪು. ಅವನು ಅಷ್ಟೇ ಹಣಕ್ಕೆ ಕೆಲಸ ಮಾಡಬೇಕು, ಮಾಡದೇ ಹಣ ಪಡೆಯುವ ಪ್ರಕರಣಗಳು ಕಂಡು ಬಂದಲ್ಲಿ ಅವರನ್ನು ಬ್ಲಾಕ್ ಲಿಸ್ಟ್‌ಗೆ ಹಾಕಲಾಗುವುದು ಎನ್ನುವ ಉತ್ತರ ಬಂತು. ಒಟ್ಟಿನಲ್ಲಿ ಗದಗ ಜಿಲ್ಲಾಡಳಿತದ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.