ಗದಗ ಪೊಲೀಸರ ಭರ್ಜರಿ ಬೇಟೆ: 89 ಆರೋಪಿಗಳ ಬಂಧನ
ಗದಗ(ನ.02): ಗದಗ(Gadag) ಜಿಲ್ಲಾ ಪೊಲೀಸರು ಕಳ್ಳತನ(Theft) ಪ್ರಕರಣಗಳನ್ನು ಬೇಧಿಸುವಲ್ಲಿ ಭರ್ಜರಿ ಬೇಟೆಯನ್ನೇ ನಡೆಸಿದ್ದು, ಪ್ರಸಕ್ತ ವರ್ಷದಲ್ಲಿ ನಡೆದ ಕಳವು, ವಂಚನೆ ಪ್ರಕರಣಗಳ(Cases) ಪೈಕಿ 77 ಪ್ರಕರಣಗಳನ್ನು ಭೇದಿಸಿ, 89 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 64.55 ಲಕ್ಷ ಮೊತ್ತದ ಸೊತ್ತನ್ನು ಮರಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ(Shivaprakash Devaraj) ಹೇಳಿದರು.
ನಗರದ ಪೊಲೀಸ್(Police) ಕಲ್ಯಾಣ ಭವನದಲ್ಲಿ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಚಿನ್ನ, ಬೆಳ್ಳಿ, ಬೈಕ್ ಹಾಗೂ ನಗದು ಸೇರಿದಂತೆ ವಿವಿಧ ವಸ್ತುಗಳನ್ನು ಮೂಲ ವಾರಸುದಾರರಿಗೆ ಹಸ್ತಾಂತರ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಜಿಲ್ಲೆಯ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ, ದೇವಸ್ಥಾನ ಸೇರಿದಂತೆ ಸೊತ್ತುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ 74 ಪ್ರಕರಣಗಳನ್ನು ಭೇದಿಸಿ, 80 ಆರೋಪಿಗಳನ್ನು(Accused) ಬಂಧಿಸಲಾಗಿದೆ(Arrest).
33,65,685 ಮೊತ್ತದ 1 ಕೆಜಿ 38 ಗ್ರಾಂ ತೂಕದ ಬಂಗಾರದ(Gold) ಆಭರಣಗಳು ಕಳ್ಳತನವಾಗಿದ್ದು, ಅದರಲ್ಲಿ 29,78,795 ಮೌಲ್ಯದ 887 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು, ಮರಳಿ ಮೂಲ ಮಾಲೀಕರಿಗೆ ನೀಡಲಾಗಿದೆ ಎಂದು ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ
5 ಕೆಜಿ 274 ಗ್ರಾಂ ಬೆಳ್ಳಿ ಆಭರಣಗಳ ಪೈಕಿ 5 ಕೆಜಿ 253 ಗ್ರಾಂ ಬೆಳ್ಳಿ ಆಭರಣ, 35 ವಿವಿಧ ವಾಹನಗಳ ಪೈಕಿ 30 ವಾಹನಗಳನ್ನು ಜಪ್ತಿ ಮಾಡಲಾಗಿದೆ. 5.49 ಲಕ್ಷ ಮೌಲ್ಯದ ತಾಮ್ರದ ತಂತಿ, ಬ್ಯಾಟರಿ, ಸಿಲಿಂಡರ್, ವೆಲ್ಡಿಂಗ್ ಇತ್ಯಾದಿ ವಸ್ತುಗಳು ಕಳುವಾಗಿದ್ದು, ಅದರಲ್ಲಿ 3.89 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕಳವುಗೈಯಲ್ಪಟ್ಟ 8.79 ಲಕ್ಷ ನಗದು ಪೈಕಿ 2.27 ಲಕ್ಷ ಪತ್ತೆ ಮಾಡಲಾಗಿದೆ. 12.51 ಲಕ್ಷ ಮೊತ್ತದ ಮೂರು ವಂಚನೆ ಪ್ರಕರಣಗಳು ದಾಖಲಾಗಿದ್ದು, ಅದಕ್ಕೆ ಸಂಬಂಧಿಸಿ ಒಂಬತ್ತು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 9.79 ಲಕ್ಷ ಮರಳಿ ವಸೂಲಿ ಮಾಡಲಾಗಿದೆ ಎಂದು ಎಲ್ಲ ಠಾಣೆವಾರು ವಿವರವನ್ನು ಪೊಲೀಸ್ ವರಿಷ್ಠಾಧಿಕಾರಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಗದಗ ಡಿಎಸ್ಪಿ ಶಿವಾನಂದ ಪವಾಡಶೆಟ್ಟರ, ನರಗುಂದ ಡಿಎಸ್ಪಿ ಶಂಕರ್ ರಾಗಿ, ಡಿಸಿಆರ್‌ಡಿ ಎಸ್ಪಿ ವಿಜಯ ಬಿರಾದರ, ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ, ರೋಣ ಸಿಪಿಐ ಸುಧೀರ ಬೆಂಕಿ, ಮುಂಡರಗಿ ಸಿಪಿಐ ಸುನೀಲ ಸವದಿ, ಗದಗ ಶಹರ ಸಿಪಿಐ ಪಿ.ಸಿ.ಸಾಲಿಮಠ, ವಿ.ಎಸ್. ಸುಬ್ಬಾಪೂರಮಠ ಮತ್ತಿತರರು ಉಪಸ್ಥಿತರಿದ್ದರು.
ಮನೆಗೆ ಕೀಲಿ ಹಾಕಿ ಪರ ಊರುಗಳಿಗೆ ಹೋಗುವ ಮುನ್ನ ಸಮೀಪದ ಪೊಲೀಸ್ ಠಾಣೆಗೆ(Police Station) ಮಾಹಿತಿ ನೀಡಬೇಕು. ಇದರಿಂದ ಮನೆಗಳ್ಳತನ ಪ್ರಕರಣ ನಡೆಯದಂತೆ ಎಚ್ಚರವಹಿಸಲು ಸಾಧ್ಯ. ಜತೆಗೆ ಯಾವುದೇ ರೀತಿಯ ಅಪರಾಧ ಮತ್ತು ಆರೋಪಿಗಳ ಬಗ್ಗೆ ಸುಳುವು ಸಿಕ್ಕಲ್ಲಿ ತಕ್ಷಣ ಸಹಾಯವಾಣಿ(Helpline) 112ಗೆ ಕರೆ ಮಾಡಿ, ಮಾಹಿತಿ ನೀಡಬೇಕು. ಇದರಿಂದ ಹಲವು ರೀತಿಯ ಪ್ರಕರಣಗಳು ಶೀಘ್ರ ಪತ್ತೆ ಹಚ್ಚಲು ಸಹಾಯಕವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ ತಿಳಿಸಿದ್ದಾರೆ.