ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತುಮಕೂರು ದಸರಾ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಲಾಪ್ರದರ್ಶನಗಳು ಜರುಗಿದವು. ಇದೇ ವೇಳೆ ತಾವು ಸಿಎಂ ಆಗಬೇಕೆಂಬ ಸ್ವಾಮೀಜಿಯೊಬ್ಬರ ಆಶಯಕ್ಕೆ ಪ್ರತಿಕ್ರಿಯಿಸಿದ ಅವರು, ಭವಿಷ್ಯದ ಗರ್ಭದಲ್ಲಿ ಏನಿದೆ ಎಂದು ಯಾರಿಗೂ ತಿಳಿದಿಲ್ಲ ಎಂಬ ಕುತೂಹಲಕಾರಿ ಹೇಳಿಕೆ ನೀಡಿದರು.

ತುಮಕೂರು: ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿರುವ ಅದ್ಧೂರಿ ತುಮಕೂರು ದಸರಾ ಉತ್ಸವಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದರು. ನಗರದ ಶ್ರೀ ಶಿವಕುಮಾರ ಸ್ವಾಮೀಜಿ ಧಾರ್ಮಿಕ ಮಂಟಪದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಧ್ವಜಾರೋಹಣ ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಹೋಮದಲ್ಲಿ ಭಾಗಿಯಾದ ಪರಮೇಶ್ವರ್ ದಂಪತಿ

ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಬಳಿಕ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಅವರು ನವದುರ್ಗೆಯರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ದುರ್ಗೆಯರಿಗೆ ಪೂಜೆ ನೆರವೇರಿಸಿದರು. ಬೆಳ್ಳಾವಿ ಮಠದ ಕಾರದ ವೀರಬಸವ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ನಡೆದ ಹೋಮದಲ್ಲಿ ಭಾಗಿಯಾದ ಡಿಸಿಎಂ ಪರಮೇಶ್ವರ್ ಅವರು ಪೂರ್ಣಾಹುತಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಜ್ಯೋತಿ ಗಣೇಶ್ ಹಾಗೂ ಡಿ.ಟಿ. ಶ್ರೀನಿವಾಸ್ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶುಭ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನದ ಮೂಲಕ ಗಮನ ಸೆಳೆದವು. ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ತುಮಕೂರು ದಸರಾ ಉತ್ಸವಕ್ಕೆ ಚಾಲನೆ ದೊರೆಯಿತು. ಇನ್ನು 11 ಗಂಟೆಗೆ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಇರುವ ಫಲಪುಷ್ಪ‌ ಹಾಗೂ ವಸ್ತು ಪ್ರದರ್ಶನಕ್ಕೆ ಹೆಕ್ಯಾಪ್ಟರ್ ರೇಡ್, ರಂಗ ದಸರಾಗೆ ಚಾಲನೆ ನೀಡಲಾಗಿದೆ.

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಡಿಸಿಎಂ ಜಿ. ಪರಮೇಶ್ವರ್, ಈ ಬಾರಿಯೂ ಕೂಡ ದಸರಾವನ್ನ ಮಾಡುತ್ತಿದ್ದೇವೆ. ದಸರಾ ನಾಡ ಹಬ್ಬ ತಾಯಿ ಚಾಮುಂಡೇಶ್ವರಿಯನ್ನು ಪೂಜೆ ಮಾಡಿ ಆರಾಧನೆ ಮಾಡಿ, ಅವರ ಆಶೀರ್ವಾದವನ್ನು ಕೇಳಿ. ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿ ನೆಮ್ಮದಿ ಸಿಗಬೇಕು ಅಂತ ಪ್ರತಿ ಬಾರಿ ಪ್ರಾರ್ಥನೆ ಮಾಡ್ತೀವಿ. ನಮ್ಮ ರಾಜ್ಯದಲ್ಲಿ ಇದೊಂದು ಅತಿ ದೊಡ್ಡ ಪರಂಪರೆ. ಐತಿಹಾಸಿಕವಾದಂತಹ ಈ ಪರಂಪರೆಯನ್ನು ಮಹಾರಾಜರು ನಡೆಸಿದ್ದರು, ಮಹಾರಾಜರು ಹೋದ ಮೇಲೆ ಸರ್ಕಾರ ಇದನ್ನ ನಡೆಸಿಕೊಂಡು ಬಂದಿದೆ. ಎಂದಿನಂತೆ ಇಂದು ಮೈಸೂರಿನಲ್ಲಿ ಚಾಮುಂಡೇಶ್ವರಿಯನ್ನ ಪೂಜೆ ಮಾಡಿ ಆರಾಧನೆ ಮಾಡಿ ದಸರಾ ಪ್ರಾರಂಭ ಮಾಡಿದ್ದಾರೆ. ಸಾಂಸ್ಕೃತಿಕವಾಗಿ ಈ ನಾಡನ್ನ ಕಾಪಾಡಬೇಕು ಅಂತ ಎಚ್ಚರಿಕೆ ಕೊಡುವಂತದ್ದು. ಮುಂದಿನ ಪೀಳಿಗೆಗೂ ಕೂಡ ಅದು ಮುಂದುವರೆಯಬೇಕು ಅನ್ನೋ ಸಂದೇಶವನ್ನು ಆ ಕೆಲಸವನ್ನು ಮೈಸೂರಿನಲ್ಲಿ ಮಾಡ್ತಾರೆ. ತುಮಕೂರಿಂದ ಮೈಸೂರ್ಗೆ ಹೋಗೋದಿಕ್ಕೆ ಬಹಳಷ್ಟು ಜನರಿಗೆ ಕಷ್ಟ ಆಗುತ್ತೆ ಅದಕ್ಕಾಗಿ ಎರಡು ವರ್ಷದಿಂದ ನಾವು ಕೂಡ ದಸರಾ ಆಚರಿಸುತ್ತಿದ್ದೇವೆ. ನಮಗೂ ಕೂಡ ಒಂದಷ್ಟು ಯಶಸ್ಸು ಕಾಣಿಸಿತು. ಈ ವರ್ಷವೂ ಕೂಡ ಎಂದಿನಂತೆ ಪ್ರಾರಂಭ ಮಾಡಿದ್ದೇವೆ ಇವತ್ತು ಉದ್ಘಾಟನೆ ಮಾಡಿದ್ದೇವೆ. ಇಡೀ ತುಮಕೂರಿನ ಜನ ಈ ಅವಕಾಶವನ್ನು ಉಪಯೋಗ ಮಾಡ್ಕೋಬೇಕು. ನಮ್ಮ ಸಂಸ್ಕೃತಿಯನ್ನು ಪರಂಪರೆಯನ್ನ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಉದ್ದೇಶ. ಎಲ್ಲರಿಗೂ ಹಬ್ಬವಾಗಿ ಪರಿಣಮಿಸುವ ನಾಡಹಬ್ಬ ಇದು. ನಮ್ಮ ಪರಂಪುಜ್ಯ ಸ್ವಾಮೀಜಿಗಳು ಹೆಲಿ ರೇಡನ್ನ ಉದ್ಘಾಟನೆ ಮಾಡಿದ್ದಾರೆ. ಅವರು ಕೂಡ ರೇಡ್ ಮಾಡಿದ್ದಾರೆ. ಬೆಳಗಿಂದ ಹೋಮ ಹವನ ಧಾರ್ಮಿಕ ಕಾರ್ಯಕ್ರಮಗಳು ಮಾಡುವ ಹಬ್ಬ. ಬಹಳ ಯಶಸ್ವಿಯಾಗಿ ಪೂಜೆ ನಡೆದಿದೆ. ಬರಗಾಲ ಹೋಗಿ ಸುಭಿಕ್ಷೆ ಬರಲಿ ಅಂತ ತಾಯಿಯನ್ನು ಪ್ರಾರ್ಥನೆ ಮಾಡ್ತೀನಿ. ನನಗೆ ವಿಶ್ವಾಸವಿದೆ ನಮಗೆ ಆಶೀರ್ವಾದ ಮಾಡ್ತಾರೆ ಅಂತ ಎಂದು ಹೇಳಿದರು.

ಭಾಷಣದಲ್ಲಿ ಬೆಳ್ಳಾವಿ ಮಠದ ಸ್ವಾಮೀಜಿ ಪರಮೇಶ್ವರ್ ಸಿಎಂ ಆಗಲಿ ಎಂದು ಭಾಷಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಜನರ ಹಾಗೂ ಸ್ವಾಮೀಜಿಗಳು ಆಶೀರ್ವಾದ ಮಾಡ್ತಾರೆ. ಆದರೆ ರಾಜಕೀಯದಲ್ಲಿ ಪದ್ಧತಿಗಳಿವೆ, ರಾಜಕೀಯ ಪಕ್ಷಗಳಿವೆ, ಅದರಂತೆ ನಡೆಯಬೇಕು. ಅದು ನಡೆದು ಹೋಗಿದೆ, ಈಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿಗಳಿದ್ದಾರೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದಾಗ ನಾವು ಪ್ರಯತ್ನ ಮಾಡಬಹುದು, ಮಾಡೋಣ. ಈಗ ಆ ಪ್ರಶ್ನೆ ಬರಲ್ಲ, ಈಗ ಮುಖ್ಯಮಂತ್ರಿಗಳಿದ್ದಾರೆ. ಅವರ ಜೊತೆಗೆ ಉಪಮುಖ್ಯಮಂತ್ರಿಯಾಗಿ ನಾನಿದ್ದೇನೆ. ಭವಿಷ್ಯದ ಗಜ ಗರ್ಭದಲ್ಲಿ ಏನು ಅಡಗಿದೆ ಅಂತ ಯಾರಿಗೆ ಗೊತ್ತಿದೆ ಎಂದರು.