ಮಂಗಳೂರಿಗೆ ಫರ್ನೀಚರ್ ಕ್ಲಸ್ಟರ್, ಕಾರ್ಕಳಕ್ಕೆ ಶಿಲ್ಪಕಲೆ ಕ್ಲಸ್ಟರ್: ಬೊಮ್ಮಾಯಿ ಘೋಷಣೆ
* ಎಣ್ಣೆಹೊಳೆ ಏತ ನೀರಾವರಿ ಯೋಜನೆ ಉದ್ಘಾಟನೆ
* ಯಾವ ಸರ್ಕಾರವೂ ಮಾಡದ್ದನ್ನು ಮಾಡಿದ ಬೊಮ್ಮಯಿ
* ಕಾರವಾರ ಮತ್ತು ಮಂಗಳೂರು ಬಂದರುಗಳ ವಿಸ್ತರಣೆ ಕಾರ್ಯ ನವೆಂಬರ್‌ನಲ್ಲಿ ಆರಂಭ
ಕಾರ್ಕಳ(ಜೂ.02): ಸ್ಥಳೀಯ ಕುಶಲಕರ್ಮಿಗಳಿಗೆ ಪ್ರೋತ್ಸಾಹ ಮತ್ತು ಯುವಕರಿಗೆ ಉದ್ಯೋಗ ಒದಗಿಸುವಂತಹ ಅಂತಾರಾಷ್ಟ್ರೀಯ ಮಟ್ಟದ ಫರ್ನೀಚರ್ ಕ್ಲಸ್ಟರನ್ನು ಮಂಗಳೂರು ಸಮೀಪದಲ್ಲಿ ಈ ವರ್ಷದಲ್ಲಿಯೇ ಪ್ರಾರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಅವರು ಬುಧವಾರ ಇಲ್ಲಿನ ಎಣ್ಣೆಹೊಳೆ ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಶಿಲೆ ಶಿಲ್ಪಿಗಳು, ಕಾಷ್ಟಶಿಲ್ಪಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ಸಚಿವ ಸುನಿಲ್ ಕುಮಾರ್ ಅವರ ಬೇಡಿಕೆಯಂತೆ ಕಾರ್ಕಳದಲ್ಲಿ ಶಿಲ್ಪ- ಕಾಷ್ಟಕಲೆ ಕ್ಲಸ್ಟರನ್ನು ಸ್ಥಾಪಿಸಲು ಶೀಘ್ರದಲ್ಲಿಯೇ ಅನುಮೋದನೆ ನೀಡಲಾಗುವುದು ಎಂದೂ ಸಿಎಂ ಹೇಳಿದರು. ಅಲ್ಲದೆ ಕರಾವಳಿ ಪ್ರದೇಶದಲ್ಲಿ ಗ್ರೀನ್ ಪವರ್ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದ್ದು, ಹಸಿರು ಇಂಧನ ಆಧಾರಿತ ಕೈಗಾರಿಕಾ ಹಬ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಸಮುದ್ರ ನೀರಿನಿಂದ ವಿದ್ಯುತ್ ಉತ್ಪಾದನೆ: ಸಿಎಂ ಬೊಮ್ಮಾಯಿ!
ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಹಾಗೂ ಯಾತ್ರಾ ಪ್ರವಾಸೋದ್ಯಮ ಈ ವರ್ಷ ಅಭಿವೃದ್ಧಿ ಮಾಡಲಾಗುವುದು. ಕಾರ್ಕಳದಲ್ಲಿ ಪ್ರಾಚೀನ ಜೈನ ಬಸದಿಗಳು ಮತ್ತು ದೇವಾಲಯಗಳಿರುವುದಿಂದ ಹೆರಿಟೇಜ್ ಟೂರಿಸಂ ಬಗ್ಗೆಯೂ ಯೋಜನೆ ರೂಪಿಸಲಾಗುತ್ತದೆ ಎಂದರು.
ಹೆಚ್ಚು ಸಂಖ್ಯೆಯಲ್ಲಿ ಹಡಗುಗಳು ತಂಗುವುದಕ್ಕೆ ಅವಕಾಶವಾಗುವಂತೆ ಕಾರವಾರ ಮತ್ತು ಮಂಗಳೂರು ಬಂದರುಗಳ ವಿಸ್ತರಣೆ ಕಾರ್ಯ ನವೆಂಬರ್‌ನಲ್ಲಿ ಆರಂಭವಾಗಲಿದೆ. ಜೊತೆಗೆ ಕರಾವಳಿಯ 8 ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೂ ಯೋಜನೆ ರೂಪಿಸಿದ್ದು, ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಾಗರಮಾಲಾ ಯೋಜನೆಯಡಿ ಕರಾವಳಿ ಭಾಗದ 24 ಬಂದರುಗಳ ಅಭಿವೃದ್ಧಿಗೆ 2400 ಕೋಟಿ ರು. ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೊಮ್ಮಾಯಿ ಅವರು ಎಣ್ಣೆಹೊಳೆಗೆ ಪೂಜೆ ಮಾಡಿ ಬಾಗಿನ ಅರ್ಪಿಸಿದರು. ಡೀಮ್‌್ಡಫಾರೆಸ್ವ್ ಸಂತ್ರಸ್ತರಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ಮುಖ್ಯಮಂತ್ರಿ ಅವರನ್ನು ಕಾರ್ಕಳ ಜನತೆಯ ಪರವಾಗಿ ಸಚಿವ ಸುನಿಲ್ ಕುಮಾರ್ ಸನ್ಮಾನಿಸಿದರು.
ಬೇರೆ ಪಕ್ಷಗಳಲ್ಲಿಯೂ ಸ್ನೇಹಿತರಿದ್ದಾರೆ, ರಾಜ್ಯಸಭೆ ಚುನಾವಣೆ ಗೆಲ್ತೇವೆ: ಸಿಎಂ ಬೊಮ್ಮಾಯಿ
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಶಾಸಕರಾದ ರಘುಪತಿ ಭಟ್, ಲಾಲಾಜಿ, ಸುಕುಮಾರ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ರಾಜ್ಯ ಗೇರು ಬೀಜ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಇತರರು ಉಪಸ್ಥಿತರಿದ್ದರು.
ಯಾವ ಸರ್ಕಾರವೂ ಮಾಡದ್ದನ್ನು ಬೊಮ್ಮಯಿ ಮಾಡಿದ್ದಾರೆ
ರಾಜ್ಯದಲ್ಲಿ ಕಳದ 30 ವರ್ಷಗಳಿಂದ ಡೀಮ್ಡ್ ಫಾರೆಸ್ವ್ ಸಮಸ್ಯೆ ಇತ್ತು. ಈ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಈ ಸಮಸ್ಯೆ ನಮ್ಮ ಸರ್ಕಾರದಿಂದ ಆಗಿರುವುದಲ್ಲ. ಆದರೆ ಈ ಹಿಂದಿನ ಯಾವ ಸರ್ಕಾರಗಳೂ ಈ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನೇ ಮಾಡಿರಲಿಲ್ಲ. ಈಗ ಬೊಮ್ಮಯಿ ಅವರು ಸಿಎಂ ಆಗುತಿದ್ದಂತೆ 6.33 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟನ್ನು ವಿರಹಿತಗೊಳಿಸಿದ್ದಾರೆ. ಇದರಿಂದ ಜಿಲ್ಲೆಯ 10 ಸಾವಿರ ಕುಟುಂಬಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗಿದೆ. ಈ ಪ್ರದೇಶದಲ್ಲಿ 2 ತಿಂಗಳಲ್ಲಿ 180 ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.