ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ‘ಗ್ರೀನ್‌ ಎನರ್ಜಿ- ಕ್ಲೀನ್‌ ಎನರ್ಜಿ’ಗೆ ಕರೆ ನೀಡಿದ್ದು ರಾಜ್ಯದ ಕರಾವಳಿಯಲ್ಲಿ ಸಮುದ್ರದ ನೀರನ್ನು ಬಳಕೆ ಮಾಡಿ ವಿದ್ಯುತ್‌ ಉತ್ಪಾದಿಸುವ ಚಿಂತನೆ ನಡೆಸಲಾಗಿದೆ. 

ಉಡುಪಿ/ಕಾರ್ಕಳ (ಜೂ.02): ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ‘ಗ್ರೀನ್‌ ಎನರ್ಜಿ- ಕ್ಲೀನ್‌ ಎನರ್ಜಿ’ಗೆ ಕರೆ ನೀಡಿದ್ದು ರಾಜ್ಯದ ಕರಾವಳಿಯಲ್ಲಿ ಸಮುದ್ರದ ನೀರನ್ನು ಬಳಕೆ ಮಾಡಿ ವಿದ್ಯುತ್‌ ಉತ್ಪಾದಿಸುವ ಚಿಂತನೆ ನಡೆಸಲಾಗಿದೆ. ಇದು ಕಾರ್ಯಗತವಾದರೆ ಕರಾವಳಿಯ ಈ ಬಹುದೊಡ್ಡ ಯೋಜನೆಯು ದೇಶದ ಆರ್ಥಿಕತೆಗೆ ಶಕ್ತಿ ತುಂಬಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ಮಣಿಪಾಲದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ 8 ವರ್ಷಗಳ ಸಾಧನೆಯ ಬಗ್ಗೆ ಸುದ್ದಿಗೋಷ್ಠಿ ಮತ್ತು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳಿಗೆ ಹಾಗೂ ಹೆಬ್ರಿ ಬಸ್‌ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕರಾವಳಿಯ ಅಭಿವೃದ್ಧಿ ಯೋಜನೆಗಳ ವಿವರ ನೀಡಿದರು. ಕರಾವಳಿ ಭಾಗಗಳ ಅಭಿವೃದ್ಧಿಗಾಗಿ ಹಸಿರು ವಿದ್ಯುತ್‌(ಗ್ರೀನ್‌ ಪವರ್‌) ಮತ್ತು ಹಸಿರು ಆರ್ಥಿಕ ವಲಯ(ಗ್ರೀನ್‌ ಎಕಾನಾಮಿಕ್‌ ಝೋನ್‌) ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. 

ಬೇರೆ ಪಕ್ಷಗಳಲ್ಲಿಯೂ ಸ್ನೇಹಿತರಿದ್ದಾರೆ, ರಾಜ್ಯಸಭೆ ಚುನಾವಣೆ ಗೆಲ್ತೇವೆ: ಸಿಎಂ ಬೊಮ್ಮಾಯಿ

ಪೆಟ್ರೋಲ್‌, ಡೀಸೆಲ್‌ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ, ಕರ್ನಾಟಕವು ಶೇ.20ರಷ್ಟುಎಥೆನಾಲ್‌ ಬಳಕೆ ನಡೆಸುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಎಥೆನಾಲ್‌ ಉತ್ಪಾದಿಸಿ ಬಳಸುವ ಮತ್ತು ಸರಬರಾಜು ಮಾಡುವ ರಾಜ್ಯ ಕರ್ನಾಟಕವಾಗಿದೆ ಎಂದವರು ಹೇಳಿದರು. ಇನ್ನು ಸೌರ ಶಕ್ತಿ ಬಳಕೆಯನ್ನು ಹೆಚ್ಚಿಸಲೂ ಪ್ರಧಾನಿ ಮೋದಿ ಕರೆ ನೀಡಿದ್ದು, ಅದರಂತೆ ಶರಾವತಿ ನದಿ ಪ್ರದೇಶದಲ್ಲಿ .5000 ಕೋಟಿ ವೆಚ್ಚದಲ್ಲಿ ಸೋಲಾರ್‌ ಸ್ಟೋರೇಜ್‌ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಒತ್ತು: ಕರಾವಳಿಯಲ್ಲಿನ ಪ್ರವಾಸಿಗರನ್ನು ಆಕರ್ಷಿಸಲು ಬೀಚ್‌ ಟೂರಿಸಂಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಕಾರ್ಕಳ ಭಾಗದ ಪ್ರಾಚೀನ ಜೈನ ಬಸದಿಗಳು, ದೇವಸ್ಥಾನಗಳನ್ನು ಪ್ರವಾಸಿಗರಿಗೆ ಉತ್ತೇಜಿಸುವ ಸಲುವಾಗಿ ಟೆಂಪಲ್‌ ಟೂರಿಸಂಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಪ್ರತಿಯೊಬ್ಬರ ಮನೆಗೆ ಗಂಗೆಯನ್ನು ತಲುಪಿಸುತ್ತೇನೆ ಎನ್ನುವ ಸಾಹಸ ಇದುವರೆಗಿನ ಯಾವ ಪ್ರಧಾನಿಯಿಂದಾಗಿರಲಿಲ್ಲ. ಆದರೆ ಮೋದಿಯವರು ಘೋಷಣೆಯನ್ನು ಮಾಡಿದ್ದಲ್ಲದೆ ಅದರಲ್ಲಿ ಜಯ ಸಾಧಿಸಿದ್ದಾರೆ. 

ಮುಂದಿನ ವರ್ಷದಿಂದ ಹೈಸ್ಕೂಲ್‌, ಕಾಲೇಜಿನಲ್ಲಿ ಯೋಗ ಪಾಠ: ಸಿಎಂ ಬೊಮ್ಮಾಯಿ

ನಮ್ಮ ರಾಜ್ಯದಲ್ಲಿಯೂ ಜಲಜೀವನ ಮಿಷನ್‌ನಲ್ಲಿ 25 ಲಕ್ಷ ಮನೆಗಳಿಗೆ ಕುಡಿವ ನೀರಿನ ಸಂಪರ್ಕ ನೀಡಲಾಗಿದ್ದು, ಈ ವರ್ಷ 25 ಲಕ್ಷ ಮನೆಗೆ ಸಂಪರ್ಕ ನೀಡುವ ಗುರಿ ಹೊಂದಿದ್ದು, 2024ರಲ್ಲಿ ಕರ್ನಾಟಕದ ಎಲ್ಲ ಮನೆಗೆ ಕುಡಿಯುವ ನೀರು ಪೂರೈಕೆಯಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು. ಮೂಲಸೌಕರ್ಯಗಳಿಗೆ ಸರ್ಕಾರವು ಒತ್ತು ನೀಡುತ್ತಿದ್ದು 3000 ರಾಜ್ಯ ಹೆದ್ದಾರಿಗಳು, 8 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, 5 ಹೊಸ ವಿಮಾನ ನಿಲ್ದಾಣ , 8 ಹೊಸ ರೈಲು ಯೋಜನೆಗಳನ್ನು ರೂಪಿಸುವ ಮೂಲಕ ನವಕರ್ನಾಟಕ ನಿರ್ಮಾಣ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ 8 ಹೊಸ ವಿಶ್ವವಿದ್ಯಾಲಯಗಳು, 7 ಎಂಜಿನಿಯರಿಂಗ್‌ ಕಾಲೇಜುಗಳು, 6 ಹೊಸ ನಗರಗಳ ನಿರ್ಮಾಣ ಮಾಡಲು ಚಿಂತನೆ ನಡಲಾಗುವುದು ಎಂದು ಹೇಳಿದರು.