ದೇಶವನ್ನೇ ಲೂಟಿ ಮಾಡಿದವರನ್ನು ತಡೆಯದ ಕೇಂದ್ರ ಸರ್ಕಾರ ರೈತರನ್ನು ತಡೆಯುವುದು ಸರಿಯಲ್ಲ| ದೇಶಕ್ಕೆ ಅನ್ನ ನೀಡುವ ರೈತರ ಹೋರಾಟಕ್ಕೆ ತಡೆ| ಕೇಂದ್ರ ಬಜೆಟ್ ದೇಶದ ಜನರಿಗೆ ಬಗೆದ ದ್ರೋಹ| ಕರ್ನಾಟಕಕ್ಕೆ ಸಂಪೂರ್ಣ ಮೋಸವಾಗಿದ್ದು, ಯಾವುದೇ ಯೋಜನೆ ಇಲ್ಲ: ಯು.ಟಿ. ಖಾದರ್|
ಬೀದರ್(ಫೆ.09): ದೇಶ ಲೂಟಿ ಮಾಡಿದವರನ್ನು ತಡೆಯದ ಕೇಂದ್ರ ಸರ್ಕಾರ, ದೇಶಕ್ಕೆ ಅನ್ನ ನೀಡುವ ರೈತರನ್ನು ತಡೆಯುವುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೆಹಲಿ ಪ್ರತಿಭಟನೆ ರೈತರಿಗೆ ಮಾತ್ರವಲ್ಲ, ದೇಶದ 134 ಕೋಟಿ ಜನರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ. ನೀರವ್ ಮೋದಿ, ವಿಜಯ ಮಲ್ಯ ಸೇರಿದಂತೆ ಇನ್ನಿತರರು ವಿದೇಶಕ್ಕೆ ತೆರಳಿದರೂ ಮೋದಿ ಸರ್ಕಾರ ತಡೆದಿಲ್ಲ. ಚುನಾವಣೆ ಸಮಯದಲ್ಲಿ ಮೇರಾ ಕಿಸಾನ್ ಎಂದು ಘೋಷಣೆ ಕೂಗಿ ಚುನಾವಣೆ ನಂತರ ಮಾರೋ ಕಿಸಾನ್ ಎಂದು ಹೇಳಿ ಇಗ ಅವರನ್ನು ವೈರಿ ತರಹ ಬಂದೂಕು ಹಾಗೂ ಲಾಠಿಯಿಂದ ಹೊಡೆಯುತಿದ್ದಾರೆ ಎಂದು ಆರೋಪಿಸಿದರು.
ರೈತರ ಗೋರಿಯ ಮೇಲೆ ಮಹಲ್:
ಚೀನಾದವರು ಗಡಿಯಲ್ಲಿ ಮನೆ ಕಟ್ಟಿದ್ದಾರೆ. ಅದನ್ನು ಕೆಡವಲು ದಮ್ಮು ಇರದ ಸರ್ಕಾರ ರೈತರ ಗೋರಿಯ ಮೇಲೆ ಮಹಲ್ ಕಟ್ಟಲು ಹೊರಟಿದೆ. ರೈತರು ಎಂಎಸ್‌ಪಿ ಕೇಳುತಿದ್ದಾರೆ ಅದನ್ನು ಕೊಡಲು ಆಗದ ಸರ್ಕಾರ ಅವರ ಮೇಲೆ ಪ್ರಹಾರ ಮಾಡುತ್ತಿದೆ. ಕೃಷಿ ಕಾನೂನುಗಳು ಜಾರಿಯಾದರೆ ಫುಡ್ ಕಾರ್ಪೋರೇಷನ್‌ಗಳು ಹಾಗೂ ನ್ಯಾಯ ಬೆಲೆ ಅಂಗಡಿ ಸಂಪೂರ್ಣವಾಗಿ ನಿರ್ನಾಮ ಆಗಲಿವೆ. ಈ ಕಾನೂನಿನ ಬಗ್ಗೆ ಪ್ರಶ್ನಿಸಿದರೆ ದೇಶದ್ರೋಹಿ ಎನ್ನುತ್ತಾರೆ ಎಂದರು.
ಬೀದರ್ ಬೆಡಗಿ ಅರುಣಾ ಪಾಟೀಲ್‌ಗೆ ‘ಮಿಸಸ್ ಕ್ವೀನ್ ಆಫ್ ಇಂಡಿಯಾ’ ಕಿರೀಟ
ಸೇಲ್ ಇಂಡಿಯಾ, ಲೂಟ್ ಇಂಡಿಯಾ:
ಮೋದಿ ಸರ್ಕಾರ ಆಸ್ತಿ ಮಾರುವ ಮೂಲಕ ಸೇಲ್ ಮಾಡುತ್ತಿದ್ದರೆ, ಇನ್ನೊಂದೆಡೆ ಜನ ಸಾಮಾನ್ಯರ ಮೇಲೆ ತೆರಿಗೆ ಹಾಕಿ ಲೂಟಿ ಮಾಡುತಿದೆ. ಕೇಂದ್ರ ಬಜೆಟ್ ದೇಶದ ಜನರಿಗೆ ಬಗೆದ ದ್ರೋಹವಾಗಿದೆ. ಕರ್ನಾಟಕಕ್ಕೆ ಸಂಪೂರ್ಣ ಮೋಸವಾಗಿದ್ದು, ಯಾವುದೇ ಯೋಜನೆ ಇಲ್ಲ. ಯುವ ವರ್ಗಕ್ಕೆ ಉದ್ಯೋಗ ಹಾಗೂ ಯಾವುದೇ ಸೌಲಭ್ಯ ಇಲ್ಲ. ಅಗ್ರಿಕಲ್ಚರ್‌ಗೆ ಸೆಸ್ ಹಾಕಿದ್ದಾರೆ. ಅದೇ ರೀತಿ ಪೆಟ್ರೋಲ್ ಮತ್ತು ಡಿಸೇಲ್‌ಗೆ ತೆರಿಗೆ ಹಾಕಿದ್ದು, ಇದು ತನ್ನಿಂದ ತಾನೆ ವಾರಕ್ಕೊಮ್ಮೆ ಏರಿಕೆಯಾಗುತ್ತದೆ. ಸರ್ಕಾರದ ಕಪಿಮುಷ್ಟಿಯಲ್ಲಿರುವ ಬಿಪಿಸಿ ಸೇರಿದಂತೆ ಅನೇಕ ಕಂಪನಿಗಳು ಖಾಸಗಿಕರಣ ಮಾಡಲು ಹೊರಟಿದ್ದು ಲಕ್ಷಾಂತರ ಕೋಟಿ ಆಸ್ತಿ ಮಾರಾಟ ಮಾಡುತಿದ್ದಾರೆ ಎಂದು ದೂರಿದರು.
ಹೇಳಿಕೆಗೆ ಹುಲಿ, ಪಿಎಂ ಎದುರು ಇಲಿ:
ರಾಜ್ಯದ ಬಿಜೆಪಿ ಸಂಸದರು ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ನಾಯ ಆಗಿರುವ ಬಗ್ಗೆ ಯಾರೂ ಚಕಾರ ಎತ್ತದೆ, ಕೇವಲ ಪತ್ರಿಕೆ ಹೇಳಿಕೆ ನೀಡಿ ಹುಲಿಯಾಗುತಿದ್ದು ಪ್ರಧಾನಿ ಎದುರು ಇಲಿಯಾಗುತ್ತಾರೆ. ಕಲ್ಯಾಣ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಖರ್ಗೆ ಸಂಸದರಾಗಿದ್ದರೆ ಹೀಗೆ ಆಗುತ್ತಿರಲಿಲ್ಲ. ರಾಜ್ಯದ ಸಂಸದರು ಬಾಯಿ ತೆರೆಯದೆ ಇದ್ದರೆ ಏನು ಸಿಗಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ರಹೀಮ್ ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಂಎ ಸಮೀ, ಶಂಕರ ದೊಡ್ಡಿ, ದತ್ತು ಮೂಲಗೆ ಇದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 9, 2021, 2:43 PM IST