Asianet Suvarna News Asianet Suvarna News

ಅಯೋಗ್ಯರ ಬಗ್ಗೆ ಹೆಚ್ಚು ಮಾತಾಡಬಾರದು: ನಟ ಪ್ರಕಾಶ್‌ ರಾಜ್‌ ವಿರುದ್ಧ ಹರಿಹಾಯ್ದ ಈಶ್ವರಪ್ಪ

ಸಿದ್ದರಾಮಯ್ಯನವರು ಅಂಬೇಡ್ಕರ್‌ ಬಿಟ್ಟರೆ ನಾನೇ ಕಾನೂನು ತಜ್ಞ ಎನ್ನೋ ಲೆವಲ್ಲಗೆ ಮಾತನಾಡುತ್ತಾರೆ. ಅವರಿಗೆ ಈ ಪತ್ರಿಕೆಯನ್ನು ಕಳುಹಿಸುತ್ತೇನೆ. ಭಾರತ ಮಾತಾ ಕೀ ಜೈ ಎಂದು ಇಡೀ ದೇಶದ ಜನ ಕೂಗೋದನ್ನು ನಾವು ಕೇಳಿದ್ದೇವೆ. ಭಾರತ ಅಂದ್ರೆ ನಮ್ಮ ದೇಶ, ನಮ್ಮ ತಾಯಿ ಎಂದ ಕೆ.ಎಸ್.ಈಶ್ವರಪ್ಪ 

Former Minister KS Eshwarappa Slams Actor Prakash Raj grg
Author
First Published Sep 7, 2023, 10:30 PM IST

ಬಾಗಲಕೋಟೆ(ಸೆ.07): ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ ನನ್ನ ತಂದೆ-ತಾಯಿಗೆ ಹುಟ್ಟಿದೇನೆ ಎಂದು ಹೇಳಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸದ್ಯ ಅದು ಗ್ಯಾರಂಟಿನಾ ಎಂಬುದನ್ನಾದರೂ ಕೇಳಿ ಎಂದು ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಪ್ಪ ಯಾರು ಎಂದು ಆತ ಅವರಮ್ಮನನ್ನು ಕೇಳಿದ್ದಾನೋ ಇಲ್ಲವೋ ಗೊತ್ತಿಲ್ಲ. ಇಂಥ ಹುಚ್ಚರು, ಅಯೋಗ್ಯರು ಬಗ್ಗೆ ಹೆಚ್ಚಾಗಿ ಮಾತನಾಡೋದು ಬೇಡ ಎಂದರು.

ಸಿದ್ದರಾಮಯ್ಯ ಕರ್ನಾಟಕದ ಪಕ್ಷಾಂತರ ಪ್ರವೀಣ: ಈಶ್ವರಪ್ಪ

ಪರಮೇಶ್ವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ:

ಹಿಂದೂ ಧರ್ಮ ಹುಟ್ಟಿರೋ ಬಗ್ಗೆ ದಾಖಲೆ ಇಲ್ಲ ಎಂಬ ಗೃಹ ಸಚಿವ ಪರಮೇಶ್ವರ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದು ಧರ್ಮಕ್ಕೆ ಸನಾತನ ಧರ್ಮ ಅನ್ನೋದು. ಜಿ.ಪರಮೇಶ್ವರ ಬಗ್ಗೆ ತುಂಬಾ ಗೌರವವಿದೆ. ಆದರೆ ಅವರ ಬಾಯಲ್ಲಿ ಇಂಥ ಮಾತು ಏಕೆ ಬಂತೋ ಗೊತ್ತಿಲ್ಲ. ಅವರ ಅಪ್ಪನ ಹೆಸರು ಗಂಗಾಧರಪ್ಪ, ತಾತನ ಹೆಸರು ಮರಿಯಪ್ಪ, ಮುತ್ತಜ್ಜನ ಹೆಸರು ಹೇಳಲಿ ನೋಡೊಣ? ನಿಮ್ಮ ವಂಶದಲ್ಲಿನ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ, ಎಂದಾದ ಮೇಲೆ ಸನಾತನ ಧರ್ಮದ ಇತಿಹಾಸದ ಬಗ್ಗೆ ನೀನೇನು ಮಾತನಾಡುವೆ?, ನಿನ್ನ ಕುಟುಂಬದ ಬಗ್ಗೆನೆ ನಿನಗೆ ಗೊತ್ತಿಲ್ಲ, ಹಿಂದು ಧರ್ಮ ಯಾವತ್ತು ಹುಟ್ಟಿತ್ತು ಅಂತ ಕೇಳುವಷ್ಟು ದೊಡ್ಡ ಮನುಷ್ಯ ಆದ್ಯಾ ನೀನು? ಕೆಲವರಿಗೆ ಮಾಧ್ಯಮಗಳಲ್ಲಿ ತಮ್ಮ ಹೆಸರು ಬರಬೇಕು ಅನ್ನೋ ಕಾಯಿಲೆ ಬಂದಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಕ್ಷಮೆ ಕೇಳಿಬಿಡಿ:

ನೂರಾರು ವರ್ಷಗಳ ಇತಿಹಾಸ ಇರುವ ಹಿಂದು ಧರ್ಮದ ಬಗ್ಗೆ ಪ್ರಶ್ನೆ ಕೇಳುವ ಅವಕಾಶವೇ ಪರಮೇಶ್ವರ ಅವರಿಗೆ ಬರಬಾರದು, ಪರಮೇಶ್ವರ ಹಿರಿಯರು, ಹೋಂ ಮಿನಿಸ್ಟರ್ ಬೇರೆ, ಯಾರೇ ಏನೇ ಮಾತನಾಡಿದರೂ ಕೂಡ ಹಿಂದು ಸಮಾಜ ಶಾಂತವಾಗಿದೆ. ಮುಂದೆಯೂ ಪರಿಸ್ಥಿತಿ ಹೀಗೆಯೇ ಇರಲಿದೆ ಎಂದು ಹೇಳಲು ಆಗುವುದಿಲ್ಲ. ಅದಕ್ಕೆ ನಾನು ಪರಮೇಶ್ವರ ಅವರಲ್ಲಿ ಪ್ರಾರ್ಥನೆ ಮಾಡುತ್ತೇನೆ, ಹಿಂದು ಧರ್ಮದ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ಇಲ್ಲ. ಹಾಗಾಗಿ ದಯವಿಟ್ಟು ಈಗಲೇ ಕ್ಷಮೆ ಕೇಳಿಬಿಡಿ. ಹಿಂದು ಧರ್ಮದ ಬಗ್ಗೆ ಪರಮೇಶ್ವರ ಮಾತನಾಡಿದ್ದು, ಆಶ್ಚರ್ಯ, ಆಘಾತ ತಂದಿದೆ ಎಂದರು.

ಸಿಎಂ ಆದಾಗ ಯಾರ ಬಕೆಟ್ ಹಿಡಿದಿದ್ರು ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಟಿಕೆಟ್ ನೀಡ್ತಾರೆ ಎಂಬ ಜಗದೀಶ ಶೆಟ್ಟರ್ ಕುಟುಂಬಸ್ಥರ ಆರೋಪಕ್ಕೂ ಕೋಪಗೊಂಡ ಅವರು ಚುನಾವಣೆ ಮುಂಚೆ, ಬಿಜೆಪಿ ಬಿಡೋ ಮುಂಚೆ ಇದನ್ನ ಯಾಕೆ ಹೇಳಲಿಲ್ಲ. ಇವರು ಸಿಎಂ ಆದಾಗ ಯಾರ ಬಕೆಟ್ ಹಿಡಿದಿದ್ರು ಹೋಗಿ. ಇವರ ತಮ್ಮ ಎಂಎಲ್‌ಸಿ ಆಗಿದ್ದಾನಲ್ಲ, ಈಗ ಸಂತೋಷ ಬಗ್ಗೆ ಹುಚ್ಚನಂತೆ ಮಾತನಾಡುತ್ತಿದ್ದಾನೆ. ಆ ಪ್ರದೀಪ ಯಾರ ಬಕೆಟ್ ಯಾವಾಗ ಹಿಡಿದಿದ್ದಾ. ಯಾರು ಪಕ್ಷದ ಸಿದ್ಧಾಂತವನ್ನ ಒಪ್ಪಿ ತಾಯಿ ಎಂದು ತಿಳಿಯುತ್ತಾರೋ ಅಂಥವರನ್ನು ಜನ ಮೆಚ್ಚುತ್ತಾರೆ. ಹೆತ್ತ ತಾಯಿಗೆ (ಪಕ್ಷಕ್ಕೆ) ಮೋಸ ಮಾಡಿ ಬಯ್ದಿದ್ದಕ್ಕೆ ಶೆಟ್ಟರ್ ತಮ್ಮದೇ ಕ್ಷೇತ್ರದಲ್ಲಿ ಸೋತರು. ಸನಾತನ ಧರ್ಮದ ಪ್ರಕಾರ ಕೆಟ್ಟ ತಾಯಿ ಇಲ್ಲ, ಕೆಟ್ಟ ಮಗ ಇರಬಹುದು. ಅಂಥ ಕೆಟ್ಟ ಮಕ್ಕಳಿಗೆ ಈ ಜಗದೀಶ ಶೆಟ್ಟರ್, ಪ್ರದೀಪ ಶೆಟ್ಟರ್‌ನಂಥವರು ಉದಾಹರಣೆ ಎಂಬಂತಿದ್ದಾರೆ ಎಂದು ಕುಟುಕಿದರು.

ಶೆಟ್ಟರ್‌ ಅವರು ಇಂದಿನವರೆಗೂ ಬಿಜೆಪಿ ಸಿದ್ಧಾಂತದ ಬಗ್ಗೆ ಟೀಕೆ ಮಾಡುತ್ತಿಲ್ಲ. ಸಂತೋಷ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವಾಗ ಸಂತೋಷ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿರಲಿಲ್ಲವೇ?, ಇವ್ರು ಸಿಎಂ ಆಗಬೇಕಾದರೆ, ಸಂತೋಷ ಒಳ್ಳೆಯವರು. ಆಗ ಅವರ ಬಕೆಟ್ ಹಿಡಿಕೊಂಡು ಹೋದವರು ಶೆಟ್ಟರ್‌. ಈಗ ಇತರರಿಗೆ ಬಕೆಟ್ ಹಿಡಕೊಂಡು ಹೋದ್ರು ಎಂದು ಟೀಕಿಸುತ್ತಾರೆ. ಹಾಗಾದ್ರೆ ನೀವು ಈಗ ಯಾರ ಬಕೆಟ್ ಹಿಡಕೊಂಡು ಹೋಗಿ ಕಾಂಗ್ರೆಸ್ ಸೇರಿದ್ರಿ. ನೀವು ಚೆನ್ನಾಗಿರಿ, ಕಾಂಗ್ರೆಸ್‌ಗೆ ಹೋಗ್ತೀರೋ, ಮುಸ್ಲಿಂ ಲೀಗ್‌ಗೆ ಹೋಗ್ತೀರೋ ಹೋಗಿ, ಅದು ನಿಮಗೆ ಬಿಟ್ಟ ವಿಚಾರ. ಆದರೆ, ಹೋದ ಮೇಲೆ ನಿಮಗೆ ಎಲ್ಲವನ್ನೂ ಕೊಟ್ಟ ತಾಯಿಯಂಥ ಪಕ್ಷವನ್ನು ಮಾತ್ರ ಒದೆಯಬೇಡಿ. ಸಂತೋಷ ನಮ್ಮಂಥ ಸಾವಿರಾರು ಜನರನ್ನು ಬೆಳೆಸಿದ್ದಾರೆ. ಅವರು ರಾಜಕಾರಣಿ ಆಗಿರಬಹುದು, ಆರ್.ಎಸ್.ಎಸ್.ಪ್ರಚಾರಕರೂ ಹೌದು. ಅವರು ಮದುವೆ ಆಗಿಲ್ಲ, ಸಂಸಾರ ಮಾಡಿಲ್ಲ, ನರೇಂದ್ರ ಮೋದಿ ಅವರಂತೆಯೇ ಪಕ್ಷಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿಗಳ ಬಗ್ಗೆ ಮಾತನಾಡಿದರೆ ನೀವು ಎಂದಿಗೂ ಉದ್ಧಾರ ಆಗಲ್ಲ ಎಂದು ಛೇಡಿಸಿದರು.

ಸನಾತನ ಧರ್ಮದ ಬಗ್ಗೆ ಉದಯನಿಧಿ, ಪ್ರಿಯಾಂಕ್ ಖರ್ಗೆ ಹೇಳಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರಿಗೆ ಮುಸ್ಲಿಂ ವೋಟ್ ಬೇಕು. ಅದಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ.

ಖರ್ಗೆ, ಉದಯನಿಧಿ ಏನು ದೊಡ್ಡ ಮನುಷ್ಯರಲ್ಲ. ಈ ಮುಂಚೆ ಉದಯನಿಧಿ ಹೆಸರು ನೀವು ಕೇಳಿದ್ದಿರಾ?, ಹೆಸರು ಬರಲಿ ಅನ್ನೋ ತೆವಲಿಗೆ ಹಿಂದುಗಳ ಬಗ್ಗೆ, ಸನಾತನ ಧರ್ಮದ ಬಗ್ಗೆ ಇಂಥ ಕೆಲ ಹುಚ್ಚರು ಟೀಕೆ ಮಾಡುತ್ತಾರೆ. ನಮ್ಮದು ಸನಾತನ ಧರ್ಮ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆಇದೆ. ಜಗತ್ತಿನ ಶಾಂತಿಗಾಗಿ ಯಾಗ, ಯಜ್ಞ ಮಾಡಿದ ಧರ್ಮ ಹಿಂದು ಧರ್ಮ. ಇಂಥ ಸನಾತನ ಧರ್ಮದ ಬಗ್ಗೆ ಟೀಕೆ ಮಾಡುವವರು ನಿಜಕ್ಕೂ ಅಯೋಗ್ಯರೇ ಎಂದು ವಾಗ್ದಾಳಿ ನಡೆಸಿದರು.

ಭಾರತ ಮಾತಾಕಿ ಜೈ ಅಂತೇವೆ, ಆದ್ರೆ ಇಂಡಿಯಾ ಮಾತಾಕಿ ಜೈ ಎನ್ನೊಲ್ಲ: ಕೆ.ಎಸ್. ಈಶ್ವರಪ್ಪ ಆಕ್ರೋಶ

ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ನಾಮಕರಣ ಮಾಡುವ ಕುರಿತು ಮಾತನಾಡಿದ ಕೆ.ಎಸ್.ಈಶ್ವರಪ್ಪ , ದಿನಪತ್ರಿಕೆ ತೋರಿಸಿ, ಸುಪ್ರೀಂ ಕೋರ್ಟ್‌ ಏನು ಹೇಳಿದೆ. ಇಂಡಿಯಾ ಅಥವಾ ಭಾರತ ಎಂದು ಕರೆಯಲು ಮುಕ್ತ ಅವಕಾಶವಿದೆ. 2016ರಲ್ಲಿ ಸುಪ್ರಿಂ ಕೋರ್ಟ್‌ ಈ ಅವಕಾಶ ಕಲ್ಪಿಸಿದೆ. ಸಿದ್ದರಾಮಯ್ಯನವರು ಅಂಬೇಡ್ಕರ್‌ ಬಿಟ್ಟರೆ ನಾನೇ ಕಾನೂನು ತಜ್ಞ ಎನ್ನೋ ಲೆವಲ್ಲಗೆ ಮಾತನಾಡುತ್ತಾರೆ. ಅವರಿಗೆ ಈ ಪತ್ರಿಕೆಯನ್ನು ಕಳುಹಿಸುತ್ತೇನೆ. ಭಾರತ ಮಾತಾ ಕೀ ಜೈ ಎಂದು ಇಡೀ ದೇಶದ ಜನ ಕೂಗೋದನ್ನು ನಾವು ಕೇಳಿದ್ದೇವೆ. ಭಾರತ ಅಂದ್ರೆ ನಮ್ಮ ದೇಶ, ನಮ್ಮ ತಾಯಿ ಎಂದರು.

ನನ್ನ ಮಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ

ತಮ್ಮ ಮಗ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಾಗಿ ಪ್ರಯತ್ನ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಹಾವೇರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಬೇಕು ಎಂದು ನನ್ನ ಮಗ ಇಷ್ಟಪಟ್ಟಿದ್ದಾನೆ. ನನ್ನ ಮಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆಗಿರುವುದು ನಿಜ. ಅವನೂ ಈ ದೇಶದಲ್ಲೇ ಹುಟ್ಟಿದ್ದಾನೆ. ಅವನು ಇಷ್ಟಪಟ್ಟ ಜಾಗ ಅದು, ಅವಕಾಶ ಸಿಕ್ಕರೆ ನಿಲ್ಲುತ್ತಾನೆ, ಇಲ್ಲ ಅಂದ್ರೆ ಇಲ್ಲ, ಯಾರಿಗೆ ಟಿಕೆಟ್ ಸಿಗುತ್ತೋ ಅವರನ್ನು ನಾವು ಬಿಜೆಪಿಯಿಂದ ಗೆಲ್ಲಿಸುತ್ತೇವೆ ಎಂದರು. ಬೇರೆ ಜಿಲ್ಲೆಯವರಾಗಿ ಹಾವೇರಿಯಿಂದ ಸ್ಪರ್ಧೆ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾದಾಗ ಬಿಜೆಪಿ ಒಂದು ವಿಶೇಷವಾದ ಪಕ್ಷ ಕರ್ನಾಟಕದ ಜಗನ್ನಾಥ್ ರಾವ್ ಜೋಷಿ ಮಧ್ಯಪ್ರದೇಶದ, ಭೂಪಾಲನಲ್ಲಿ ಸ್ಪರ್ಧಿಸಿದ್ದರು. ಅಟಲ್ ಜೀ ಕೂಡ ತಮ್ಮ ಕ್ಷೇತ್ರ ಬದಲಿಸಿದ್ದರು. ಮೋದಿಜೀ ಕೂಡ ವಾರಾಣಸಿ ವಿಜಯದ ನಂತರ ಈಗ ತಮಿಳುನಾಡಿಗೆ ಹೋಗುವ ವಿಚಾರ ಮಾಡುತ್ತಿದ್ದಾರೆ. ಇಂಥದರಲ್ಲಿ ನನ್ನ ಮಗ ಬೇರೆ ಜಿಲ್ಲೆಗಳಿಗೆ ಹೋಗಬಾರದು ಎಂದೇನಿಲ್ಲ ಎಂದು ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios