ಸಿದ್ದರಾಮಯ್ಯ ಕರ್ನಾಟಕದ ಪಕ್ಷಾಂತರ ಪ್ರವೀಣ: ಈಶ್ವರಪ್ಪ

ಮೋದಿ ವಿಶ್ವವನ್ನೇ ಮುನ್ನಡೆಸುವ ನಾಯಕ. ದೇಶಭಕ್ತಿ ಯಾವ ಪಕ್ಷದಲ್ಲಿದೆ? ಎಂದು ದೇಶದ ಜನ ಯೋಚನೆ ಮಾಡುತ್ತಾರೆ. ಹೀಗಾಗಿ ಯಾವುದೇ ಅಲ್ಲೋಲ ಕಲ್ಲೋಲ ಆಗಲ್ಲ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ ಬಂದಿತ್ತು. ಈ ಬಾರಿಯೂ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ 

Siddaramaiah is Defector from Karnataka Says KS Eshwarappa grg

ಬಾಗಲಕೋಟೆ(ಆ.29):  ಸಿದ್ದರಾಮಯ್ಯ ಕರ್ನಾಟಕದ ಪಕ್ಷಾಂತರ ಪ್ರವೀಣ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದು, ಜೆಡಿಎಸ್‌ನಿದ ಕಾಂಗ್ರೆಸ್‌ಗೆ ಬಂದವರು ಯಾರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಕಾಂಗ್ರೆಸ್ ಶಾಸಕರ ಮೇಲೆ ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ತೋರುತ್ತಿರುವುದನ್ನು ಗಮನಿಸಿದರೆ ಎಲ್ಲ ಅರ್ಥವಾಗುತ್ತದೆ. ರಾಜ್ಯದಲ್ಲಿ ಪಕ್ಷಾಂತರ ಪ್ರವೀಣ ಯಾರು ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರಿಗೆ ಪಕ್ಷಾಂತರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಕಾಂಗ್ರೆಸ್ ಆಡಳಿತ ಸರಿಯಿಲ್ಲ, ಬಿಜೆಪಿಗೆ ಹೋಗುತ್ತೇವೆ ಎಂದು 17 ಜನ ರಾಜೀನಾಮೆ ನೀಡಿ ಬಿಜೆಪಿಗೆ ಬಂದರು. ಆಗ ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ ಪಕ್ಷಾಂತರವಾದ 17 ಜನರನ್ನು ಮರಳಿ ಪಕ್ಷಕ್ಕೆ ಕರೆತರಲ್ಲ ಎಂದು ವಿಧಾನಸೌಧಲ್ಲಿ ಇದೇ ಸಿದ್ದರಾಮಯ್ಯ ಹೇಳಿದ್ದರು. ಈಗ ಏನು ಆಗುತ್ತಿದೆ ನೋಡಿ ಎಂದು ಪ್ರತಿಕ್ರಿಯಿಸಿದರು.

ಈಶ್ವರಪ್ಪ ಪುತ್ರನ ಹಾವೇರಿ ಕನಸಿಗೆ ಆರಂಭದಲ್ಲೇ ವಿಘ್ನ: ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಕುರುಬರಿಗೇಕೆ ಟಿಕೆಟ್..?

ಅವರ ಪಾರ್ಟಿ ಉಳಿಯಲ್ಲ:

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 23 ಸ್ಥಾನ ಬರುತ್ತದೆ ಎಂದು ಸಮೀಕ್ಷೆಯಲ್ಲಿದೆ. ಹೀಗಾಗಿ ಕಾಂಗ್ರೆಸ್‌ನವರು ನಿದ್ದೆ ಮಾಡುತ್ತಿಲ್ಲ. ಸಂಸತ್‌ ಚುನಾವಣೆ ಬಳಿಕ ರಾಜ್ಯದಲ್ಲಿ ಈ ಸರ್ಕಾರ ಇರುತ್ತದೆಯೇ? ಕಾಂಗ್ರೆಸ್ಸಿನವರು ದಿಕ್ಕು ದಿಕ್ಕಾಗಿ ಹೋಗುತ್ತಾರೆ. ಅವರ ಪಾರ್ಟಿ ಉಳಿಯಲ್ಲ. ಮಗೂಗೆ (ಸರ್ಕಾರಕ್ಕೆ) ಈಗ ಮೂರು ತಿಂಗಳು. ಇನ್ನು ಮೂರು ತಿಂಗಳಾಗಲಿ. ಲೋಕಸಭೆ ಎಲೆಕ್ಷನ್ ಅಗಲಿ. ಆಗ ಇವರ ಪರಿಸ್ಥಿತಿ ಹೇಗಿರುತ್ತೆ ನೋಡಿ ಎಂದು ಹೇಳಿದರು.

ಸರ್ಕಾರದ ವಿರುದ್ಧ ವಿಪಕ್ಷಗಳು ಗುತ್ತಿಗೆದಾರರನ್ನು ಎತ್ತಿಕಟ್ಟಿದ್ದಾರೆಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಡಿಕೆಶಿ ಡಿಸಿಎಂ ಆದ ದಿನದಿಂದಲೂ ಸಿಎಂ ಅವರೋ? ಸಿದ್ದರಾಮಯ್ಯನವರೋ ಎಂಬ ಅನುಮಾನದ ರೀತಿ ಮಾತನಾಡುತ್ತಿದ್ದಾರೆ. ಎಲ್ಲ ಇಲಾಖೆಗಳು ನಿಮ್ಮ ಕೈಯಲ್ಲಿವೆ. ತನಿಖೆ ಮಾಡಿಸಿ. ಯಾವುದಾದರೊಂದು ಇಲಾಖೆಗೆ ಒಬ್ಬ ಜಡ್ಜ್ ಅವರನ್ನು ಚೇರಮನ್ ಮಾಡಿ. 15 ದಿನ ಅವರಿಗೆ ಸಮಯ ಕೊಡಿ. ಒಂದು ಕೇಸ್ ಕೊಡಿ ನೋಡೋಣ. ಎಲ್ಲರದ್ದೂ ತನಿಖೆ ಮಾಡಿಸುತ್ತೇವೆ ಎನ್ನುತ್ತಾರೆ. ಬ್ಲ್ಯಾಕ್ ಮೇಲ್ ತಂತ್ರದ ರಾಜಕಾರಣವನ್ನು ಬಿಜೆಪಿ ನಂಬೋದಿಲ್ಲ ಎಂದು ತಿರುಗೇಟು ನೀಡಿದರು.

ನೇರವಾಗಿ ನನ್ನದೊಂದು ಸವಾಲು:

ಹಾಲಿ ಅಥವಾ ನಿವೃತ್ತ ಜಡ್ಜ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಲಿ ಸತ್ಯ ಗೊತ್ತಾಗುತ್ತದೆ. ನಿಜಕ್ಕೂ ಕಳಕಳಿ ಇದ್ದರೆ ನಿಮ್ಮ ಕಾಲದಿಂದ ಇಲ್ಲಿಯವರೆಗೂ ತನಿಖೆ ಮಾಡಿಸಿ. ಬರೀ ತನಿಖೆ ಅನ್ನೋ ಡಿಕೆಶಿ ಯಾರು? ಡಿಕೆಶಿ ಯಾವ ಜೈಲಿನಿಂದ ಹೊರಬಂದವರು? ಯಾವ ಬೇಲ್‌ನಲ್ಲಿ ಬಂದವರು? ಯಾವ ಜೈಲಿನಲ್ಲಿ ಇದ್ದವರು? ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಬ್ಲ್ಯಾಕ್ ಮೇಲ್ ತಂತ್ರ ಮಾಡಿದರೆ ಜನ ನಂಬುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಕಪ್ಪು ಹಣ ತರುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಸ್ವಪಕ್ಷದ ಸುಬ್ರಹ್ಮಣ್ಯ ಸ್ವಾಮಿ ಆರೋಪಕ್ಕೆ ಉತ್ತರಿಸಿ, ಚುನಾವಣೆ ಬಂದಾಗ ಯಾರ ಬಾಯಿ ಕೂಡ ಹಿಡಿಯೋಕೆ ಆಗಲ್ಲ. ರಾಜ್ಯದ ಜನ ಬುದ್ಧಿವಂತರಿದ್ದಾರೆ. ಮೋದಿ ಬಂದ ಮೇಲೆ ರೈತರಿಗೆ, ರಾಜ್ಯಕ್ಕೆ, ದೇಶಕ್ಕೆ ಏನು ಮಾಡಿದ್ದಾರೆ? ವಿಶ್ವಕ್ಕೆ ಏನು ಮಾಡಿದ್ದಾರೆ? ಎಂಬುದೆಲ್ಲವನ್ನೂ ನೋಡಿದ್ದಾರೆ ಎಂದರು. ರಾಹುಲ್ ಗಾಂಧಿ ಮುಂದಿಟ್ಟುಕೊಂಡು ಅವರು ಹೋಗಲಿ. ಪರೋಕ್ಷವಾಗಿ ಕಪ್ಪು ಹಣದ ವಿಷಯ ಸತ್ತೋಗಿರುವ ವಿಷಯ ಎಂದ ಈಶ್ವರಪ್ಪ. ಸತ್ತೋಗಿರುವ ಹೆಣ ಹೊರಗೆ ತೆಗಿತಿದೀರಿ ಎಂದು ಪ್ರತಿಕ್ರಿಯಿಸಿದರು.

ಬಾಗಲಕೋಟೆಯಲ್ಲಿ ಶಿವಾಜಿ ಪ್ರತಿಮೆ ತೆರವು ವಿಚಾರ:

ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸಿ ಎರಡು ದಿನದ ಬಳಿಕ ಏಕೆ ತೆರವು ಮಾಡಿದರು? ಡಿಸಿ, ಎಸ್ಪಿಗೆ ಧಮ್ಕಿ ಹಾಕಿದ್ದು ಯಾರು? ಆ ಸಚಿವ ಯಾರು? ಎಂಬ ಬಗ್ಗೆ ತನಿಖೆ ಮಾಡಲಿ. ಅಂಥ ಸಚಿವರ ರಾಜೀನಾಮೆ ತೆಗೆದುಕೊಳ್ಳಲಿ ಎಂದು ಈಶ್ವರಪ್ಪ ಆಗ್ರಹಿಸಿದರು.

ಇದು ಬಾಗಲಕೋಟೆಗೆ ಮಾಡಿದ ಅವಮಾನ ಅಲ್ಲ. ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಮುಂದೆ ಅನುಭವಿಸುತ್ತಾರೆ ಅನುಭವಿಸಲಿ. ಶಿವಾಜಿ ಇರಲಿಲ್ಲ ಅಂದ್ರೆ ಇಂದು ನಾವು-ನೀವು ಇರುತ್ತಿರಲಿಲ್ಲ. ನಾನು ಸೀರಿಯಸ್ ಆಗಿ ಹೇಳುತ್ತಿದ್ದೇನೆ. ಎಲ್ಲಾ ಕಟ್ ಆಗಿ ಹೋಗುತ್ತಿತ್ತು. ಹೀಗೆ ಹೇಳಿದ್ದೇನೆ ಎಂದು ಯಾರಾದರೂ ಕೇಸ್ ಮಾಡಿದರೆ ಮಾಡಲಿ. ಎಲ್ಲವೂ ಪೀಸ್‌ ಪೀಸ್‌ ಆಗಿ ಹೋಗುತ್ತಿತ್ತು. ಶಿವಾಜಿ ಮಹಾರಾಜರು ದೇಶದಲ್ಲಿ ಇದ್ದಿದ್ದಕ್ಕೆ ನಾವೆಲ್ಲ ಹಿಂದೂಗಳಾಗಿ ಉಳಿದಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರು.

ಲೋಕಸಭೆ ಚುನಾವಣೆಗೆ ಪುತ್ರನ ಸ್ಪರ್ಧೆ ಹಾವೇರಿಯಲ್ಲಿಯೇ ಖಚಿತ: ಕೆ.ಎಸ್‌.ಈಶ್ವರಪ್ಪ

ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿ ತೆರವು ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆಗೆ ಸಜ್ಜಾಗಿರೋ ಶಿವಾಜಿ ಮೂರ್ತಿ ಪರಿಶೀಲಿಸಿದ ಕೆ.ಎಸ್.ಈಶ್ವರಪ್ಪ ಅವರ ಜೊತೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ, ಮಾಜಿ ಎಂಎಲ್ಸಿ ನಾರಾಯಣಸಾ ಭಾಂಡಗೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜನ ದೇಶಭಕ್ತಿ ಯೋಚನೆ ಮಾಡುತ್ತಾರೆ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗಿಬಿಡುತ್ತದೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ ಅವರು, ಕಾಂಗ್ರೆಸ್‌ ಕಳೆದ ಬಾರಿಯೂ ಇದೇ ರೀತಿಯ ಭಾವನೆ ಮೂಡಿಸಿತ್ತು. ಒಂದು ಸೀಟ್ ಗೆಲ್ಲಲ್ಲ, ಎರಡು ಸೀಟ್ ಸಹ ಗೆಲ್ಲಲ್ಲ ಎಂದಿದ್ದರು. ಈಗಲೂ ಅದೇ ವಾತಾವರಣ ಇದೆ. ನಿಜ. ಆದರೆ ಯಾರೋ ಒಂದಿಬ್ಬರು ಅಲ್ಲಿ..ಇಲ್ಲಿ.. ಹೋದರೆಂಬ ಮಾತ್ರಕ್ಕೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲವೆಂದು ಸ್ಪಷ್ಟಪಡಿಸಿದರು. ರಾಜಕೀಯ ನಿಂತ ನೀರಲ್ಲ.. ಯಾರೋ ಒಂದಿಬ್ಬರು ಬರುತ್ತಾರೆ, ಹೋಗುತ್ತಾರೆ ಅಂದರೆ ಇಡೀ ದೇಶದಲ್ಲಿಯೇ ಪರಿವರ್ತನೆ ಆಯಿತು ಎಂಬ ಭಾವನೆಯಿಲ್ಲ. ಬಿಜೆಪಿಯ ವಿಶೇಷ ಅಂದ್ರೆ ಲಕ್ಷಾಂತರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಉದ್ದೇಶ ದೇಶ ಉಳಿಸಬೇಕು ಎಂಬುದಾಗಿದೆ. ಮೋದಿ ವಿಶ್ವವನ್ನೇ ಮುನ್ನಡೆಸುವ ನಾಯಕ. ದೇಶಭಕ್ತಿ ಯಾವ ಪಕ್ಷದಲ್ಲಿದೆ? ಎಂದು ದೇಶದ ಜನ ಯೋಚನೆ ಮಾಡುತ್ತಾರೆ. ಹೀಗಾಗಿ ಯಾವುದೇ ಅಲ್ಲೋಲ ಕಲ್ಲೋಲ ಆಗಲ್ಲ. ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ ಬಂದಿತ್ತು. ಈ ಬಾರಿಯೂ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ.

Latest Videos
Follow Us:
Download App:
  • android
  • ios