ಆಟೋಮೋಟೀವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ವಾಹನಗಳ ಪರೀಕ್ಷೆ, ಪ್ರಮಾಣೀಕರಣ ಮತ್ತು ತಾಂತ್ರಿಕ ಸಂಶೋಧನೆಗಳನ್ನು ಇಲ್ಲಿಯೇ ನಡೆಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ (ಮಾ.15): ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಟೋಮೋಟೀವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ವಾಹನಗಳ ಪರೀಕ್ಷೆ, ಪ್ರಮಾಣೀಕರಣ ಮತ್ತು ತಾಂತ್ರಿಕ ಸಂಶೋಧನೆಗಳನ್ನು ಇಲ್ಲಿಯೇ ನಡೆಸಲಾಗುವುದು ಎಂದು ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ವಿ.ಸಿ.ಫಾರಂನಲ್ಲಿ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ನಿರ್ಮಾಣವಾಗಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕರ್ನಾಟಕದಲ್ಲಿ ವಾಹನಗಳ ಪರೀಕ್ಷಾ ಕೇಂದ್ರದ ಕೊರತೆ ಇತ್ತು. ಇಲ್ಲಿ ಉತ್ಪಾದನೆಯಾದ ವಾಹನಗಳನ್ನು ಪರೀಕ್ಷೆಗಾಗಿ ಪೂನಾ ಅಥವಾ ಚೆನ್ನೈಗೆ ತೆಗೆದುಕೊಂಡು ಹೋಗಬೇಕಿತ್ತು. ಆ ಕೊರತೆ ನೀಗಿಸಲು ಎಆರ್‌ಎಐನಿಂದ ಪರೀಕ್ಷಾ ಕೇಂದ್ರವನ್ನು ಆರಂಭಿಸಲು ರಾಜ್ಯ ಸರ್ಕಾರಕ್ಕೆ ಜಾಗ ನೀಡುವಂತೆ ಪತ್ರ ಬರೆದಿದ್ದುದಾಗಿ ಹೇಳಿದರು.
ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಾಗ ನೀಡುವುದಾಗಿ ರಾಜ್ಯ ಸರ್ಕಾರ ಬಜೆಟ್ ಪುಸ್ತಕದಲ್ಲಿ ಘೋಷಣೆ ಮಾಡಿದ್ದಾರೆ. ಜಾಗ ಯಾವಾಗ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ. ಅವರು ಜಾಗ ನೀಡಿದ ಬಳಿಕ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಕೈಗಾರಿಕೆಗಳನ್ನು ಸ್ಥಾಪಿಸುವ ವಿಷಯದಲ್ಲಿ ಜಿಲ್ಲೆಯ ಜನರ ನಿರೀಕ್ಷೆಯನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸುವುದಿಲ್ಲ. ಜಿಲ್ಲೆಯ ವಿದ್ಯಾವಂತ ಯುವಜನರಿಗೆ ಉದ್ಯೋಗವಕಾಶ ಸೃಷ್ಟಿಸುವುದಲ್ಲದೆ, ಅಕ್ಕ-ಪಕ್ಕದ ಜಿಲ್ಲೆಗಳ ಯುವಕರಿಗೂ ಉದ್ಯೋಗ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಇದರ ಜೊತೆಗೆ 200-300 ಕೋಟಿ ರು. ವೆಚ್ಚದಲ್ಲಿ ಸ್ಟಾರ್ಟಪ್ ಕಂಪನಿಗಳು ಆರಂಭಿಸುತ್ತೇನೆ. ಅಲ್ಲಿಯೂ ಸ್ಥಳೀಯವಾಗಿ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ದೇವೇಗೌಡರ ಬಗ್ಗೆ ಅಭಿಮಾನವಿಟ್ಟು ನನ್ನನ್ನು ಬಹುಮತದ ಅಂತರದಿಂದ ಗೆಲ್ಲಿಸಿದ್ದೀರಿ.. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸಮಾರಂಭದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಡಾ. ಕೆ.ಅನ್ನದಾನಿ, ಜಿ.ಬಿ.ಶಿವಕುಮಾರ್, ಕೆ.ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ ಬಿ.ಎಸ್.ರಾಮಚಂದ್ರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಸಿಎಸ್‌ಆರ್ ಫಂಡ್ ನೀಡಿದ ಟಿವಿಎಸ್ ಕಂಪನಿಯ ಸಿಎಫ್‌ಒ ಸೇತುರಾಂ, ಉಪಾಧ್ಯಕ್ಷ ಪ್ರಸಾದ್ ಕೃಷ್ಣನ್, ಇನ್‌ಫೋಸಿಸ್‌ನ ಹಿರಿಯ ಉಪಾಧ್ಯಕ್ಷ ಸತೀಶ್ ಬಿ.ನಂಜಪ್ಪ, ಎಚ್‌ಎಂಟಿ ಅಧ್ಯಕ್ಷ ರಾಜೇಶ್ ಕೊಹ್ಲಿ, ಹಿಂದೂಜಾ ಹಾಸ್ಪೆಟಲ್‌ನ ಡಾ.ಸಂಜಯ್‌ಕುಮಾರ್ ಬಜಾಜ್, ಪ್ರದೀಪ್, ಸೈಲ್ ಕಂಪನಿಯ ರಾಜೀವ್ ಪಾಂಡೆ, ಸಿವೈಕೆ ಪಾಂಡೆ ಅವರನ್ನು ಅಭಿನಂದಿಸಲಾಯಿತು.
ವಿಕಲಚೇತನರಿಗೆ ಎಲೆಕ್ಟ್ರಿಕ್ ವಾಹನಗಳ ವಿತರಣೆ
ವೇದಿಕೆಯ ಸಭೆಯ ನಂತರ 388 ಮಂದಿ ವಿಕಲಚೇತನರಿಗೆ ಟಿಸಿಎಸ್ ಕಂಪನಿ ಮತ್ತು ಭಾರತೀಯ ಉಕ್ಕು ಪ್ರಾಧಿಕಾರ ತಮ್ಮ ಸಿಎಸ್ ಆರ್ ನಿಧಿಯಲ್ಲಿ ನೀಡಿರುವ ಎಲೆಕ್ಟ್ರಿಕ್ ವಾಹನ ವಿತರಣೆ ಮಾಡಲಾಯಿತು. ತದನಂತರ ಇನ್ಫೋಸಿಸ್ ಕಂಪನಿ ನೀಡಿರುವ 500 ಕಂಪ್ಯೂಟರ್‌ಗಳು, 100 ಲ್ಯಾಪ್‌ಟಾಪ್‌ಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಾಂತರ ಮಾಡಲಾಯಿತು. ಹಿಂದುಜಾ ಕಂಪನಿ ನೀಡಿದ ಅತ್ಯಾಧುನಿಕ ಆಂಬ್ಯುಲೆನ್ಸ್‌ನ್ನು ಮಂಡ್ಯದ ಮಿಮ್ಸ್ ಸಂಸ್ಥೆಗೆ ನೀಡಲಾಯಿತು.


