ಬಾಡೂಟಕ್ಕೆ ಹೋಟೆಲ್‌ಗಳಿಗೆ ತೆರಳಿದ್ದ ಹಲವರಿಗೆ ನಿರಾಸೆ ಕಾದಿತ್ತು. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಅಭಾವದಿಂದಾಗಿ ನಗರದ ಹಲವು ಹೋಟೆಲ್‌ಗಳು ಬಂದ್‌ ಆಗಿದ್ದು ಇದಕ್ಕೆ ಕಾರಣವಾಗಿತ್ತು. ಆದರೆ ಕೆಲವು ಹೋಟೆಲ್‌ನವರು ಸೌಧೆ ಒಲೆಯಲ್ಲೇ ಅಡುಗೆ ತಯಾರಿಸಿ ಗ್ರಾಹಕರಿಗೆ ಉಣಬಡಿಸಿದ್ದು ಕಂಡುಬಂತು.

ಬೆಂಗಳೂರು : ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ಬಾಡೂಟಕ್ಕೆ ಹೋಟೆಲ್‌ಗಳಿಗೆ ತೆರಳಿದ್ದ ಹಲವರಿಗೆ ನಿರಾಸೆ ಕಾದಿತ್ತು. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಅಭಾವದಿಂದಾಗಿ ನಗರದ ಹಲವು ಹೋಟೆಲ್‌ಗಳು ಬಂದ್‌ ಆಗಿದ್ದು ಇದಕ್ಕೆ ಕಾರಣವಾಗಿತ್ತು. ಆದರೆ ಕೆಲವು ಹೋಟೆಲ್‌ನವರು ಸೌಧೆ ಒಲೆಯಲ್ಲೇ ಅಡುಗೆ ತಯಾರಿಸಿ ಗ್ರಾಹಕರಿಗೆ ಉಣಬಡಿಸಿದ್ದು ಕಂಡುಬಂತು.

ವಾರಾಂತ್ಯವಾಗಿದ್ದರಿಂದ ಸಂಡೇ ಸ್ಪೆಷಲ್‌ ಸವಿಯಲು ರಾಜಾಜಿನಗರದ ಪ್ರಕೃತಿ ಫ್ಯಾಮಿಲಿ ರೆಸ್ಟೋರೆಂಟ್‌ಗೆ ಆಗಮಿಸಿದ್ದವರು ನಿರಾಸೆ ಅನುಭವಿಸಬೇಕಾಯಿತು. 199 ರುಪಾಯಿಗೆ ಸ್ಪೆಷಲ್‌ ಬಿರಿಯಾನಿ ನೀಡುತ್ತಿದ್ದ ಈ ರೆಸ್ಟೋರೆಂಟ್‌ಗೆ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಶನಿವಾರ ಸಂಜೆಯೇ ಬಂದ್‌ ಮಾಡಲಾಗಿತ್ತು. ಭಾನುವಾರವೂ ಇದೇ ಪರಿಸ್ಥಿತಿ ಮುಂದುವರೆದಿದ್ದು ರೆಸ್ಟೋರೆಂಟ್‌ ಬಾಗಿಲು ತೆರಯಲಿಲ್ಲ.

ವೈಯಾಲಿಕಾವಲ್‌ನ ಗುಂಡಪ್ಪ ದೊನ್ನೆ ಬಿರಿಯಾನಿ ಹೋಟೆಲ್‌ನಲ್ಲಿ ಸಿಲಿಂಡರ್‌ ಅಭಾವದಿಂದ ಸೌಧೆ ಬಳಸಿ ಅಡುಗೆ ತಯಾರಿಸಿದ್ದು, ಮೆನುವಿನಲ್ಲಿ ಯಾವುದೇ ಕಡಿತ ಮಾಡಿರಲಿಲ್ಲ. ಸಿಲಿಂಡರ್‌ ಸಿಗದಿದ್ದರೂ ಗ್ರಾಹಕರಿಗೆ ಯಾವುದೇ ತೊಂದರೆ ಉಂಟು ಮಾಡಿಲ್ಲ. ಎಂದಿನಂತೆ ಎಲ್ಲ ಐಟಂಗಳೂ ಸಿಗಲಿವೆ ಎಂದು ಹೋಟೆಲ್‌ ಮಾಲೀಕರು ತಿಳಿಸಿದರು.

ಬೆಟ್ಟಯ್ಯ ಹೋಟೆಲ್‌ಗೂ ಬಿಸಿ:

ಮಾಗಡಿ ರಸ್ತೆಯ ಪ್ರತಿಷ್ಠಿತ ಬೆಟ್ಟಯ್ಯ ಹೋಟೆಲ್‌ಗೂ ಗ್ಯಾಸ್‌ ಸಿಲಿಂಡರ್‌ ಅಭಾವ ತಲೆದೋರಿದ್ದು, ಗ್ರಾಹಕರನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಹೋಟೆಲ್‌ ಮಾಲೀಕರು ಸೌಧೆ ಒಲೆಯಲ್ಲೇ ಅಡುಗೆ ಮಾಡಲು ವ್ಯವಸ್ಥೆ ಮಾಡಿದ್ದು ಕಂಡುಬಂತು. ‘ಭಾನುವಾರ ಆಗಿರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಿಗೆ ತೊಂದರೆ ಆಗಬಾರದು ಎಂದು ಸೌಧೆ ಒಲೆಯಲ್ಲೇ ಅಡುಗೆ ತಯಾರಿಸಲಾಗಿದೆ’ ಎಂದು ಹೋಟೆಲ್‌ ಸಿಬ್ಬಂದಿ ಸ್ಪಷ್ಟಪಡಿಸಿದರು.

ಮಾಗಡಿ ರಸ್ತೆಯಲ್ಲಿರುವ ಪ್ರಸಿದ್ಧ ಮಯೂರ ಬಿರಿಯಾನಿ ಹೋಟೆಲ್‌ ಅನ್ನು ಮಾವಳ್ಳಿ ಮಿಲ್ಟ್ರಿ ಹೋಟೆಲ್‌ ಎಂದೂ ಸಹ ಕರೆಯಲಾಗುತ್ತಿದ್ದು, ಸೌಧೆ ಬಳಸಿ ಅಡುಗೆ ತಯಾರಿಸಲಾಗಿತ್ತು. ಮೆನುವಿನಲ್ಲೂ ಯಾವುದೇ ಬದಲಾವಣೆ ಮಾಡಿರಲಿಲ್ಲ.

ದರ ಹೆಚ್ಚಳ:

ಸಿಲಿಂಡರ್‌ ಸಮಸ್ಯೆ ಉಂಟಾಗಿರುವುದರಿಂದ ನಗರದ ಕೆಲವು ಹೋಟೆಲ್‌ಗಳಲ್ಲಿ ಟೀ-ಕಾಫಿ ಮತ್ತು ಆಹಾರ ಪದಾರ್ಥಗಳ ಬೆಲೆ 5 ರಿಂದ 10 ರುಪಾಯಿ ಹೆಚ್ಚಳ ಮಾಡಿರುವುದು ಕಂಡುಬಂತು. ವಿಧಿಯಲ್ಲದೇ ದರ ಹೆಚ್ಚಳ ಮಾಡಲಾಗಿದೆ ಎಂದು ವಿಜಯನಗರದ ಹೋಟೆಲ್‌ ಪ್ರಸಾದಂ ಸಿಬ್ಬಂದಿ ತಿಳಿಸಿದರು.

ಟನ್‌ ಸೌಧೆಗೆ ₹5000

ವಾಣಿಜ್ಯ ಬಳಕೆಯ ಸಿಲಿಂಡರ್‌ ಸರಬರಾಜು ಸ್ಥಗಿತ ಆಗಿರುವುದರಿಂದ ಕೆಲವು ಹೋಟೆಲ್‌ನವರು ಸೌಧೆ ಒಲೆಗೆ ಮೊರೆ ಹೋಗಿದ್ದು, ಅದಕ್ಕಾಗಿ ಟನ್‌ಗಟ್ಟಲೇ ಸೌಧೆ ಸಂಗ್ರಹಿಸುತ್ತಿದ್ದಾರೆ. ಪ್ರತಿ ಟನ್‌ ಸೌಧೆ ಬೆಲೆ ₹5000 ಇದ್ದು ಕೆಲವರು ಎರಡ್ಮೂರು ಟನ್‌ ಸೌಧೆ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಸೌಧೆ ಡಿಪೋ ಮಾಲೀಕರೊಂದಿಗೆ ಮಾತನಾಡಿ ಪ್ರತಿದಿನ ಸೌಧೆ ಒದಗಿಸುವಂತೆ ಹೋಟೆಲ್‌ನವರು ಕೋರಿದ್ದಾರೆ. ಮಲ್ಲೇಶ್ವರಂನ ಪ್ರಿನ್ಸ್‌ ನಾನ್‌ವೆಜ್‌ ಹೋಟೆಲ್‌ನಲ್ಲಿ ಸಾಕಷ್ಟು ಸೌಧೆ ದಾಸ್ತಾನು ಮಾಡಿರುವುದು ಕಂಡುಬಂತು.

ಮೀನು ಕೇಳೋರಿಲ್ಲ

ಮೀನು ವ್ಯಾಪಾರಸ್ಥರಿಗೂ ಯುದ್ಧದ ಬಿಸಿ ತಟ್ಟಿದ್ದು ಶಿವಾಜಿನಗರದ ರಸೆಲ್‌ ಮಾರುಕಟ್ಟೆಯತ್ತ ಹೋಟೆಲ್‌ ಮಾಲೀಕರು ಮುಖ ಮಾಡಿಲ್ಲ. ಮಾಮೂಲಿಯಾಗಿ ಭಾನುವಾರ ಹೋಟೆಲ್‌ನವರು ಹೆಚ್ಚಾಗಿ ಮೀನು ಖರೀದಿಸುತ್ತಾರೆ. ಆದರೆ ಸಿಲಿಂಡರ್‌ ಅಭಾವದಿಂದ ಹೋಟೆಲ್‌ ಮಾಲೀಕರು ಇತ್ತ ಸುಳಿಯುತ್ತಿಲ್ಲ. ಇದರಿಂದ ವ್ಯಾಪಾರಕ್ಕೆ ಬಹಳ ಹೊಡೆತವಾಗಿದೆ ಎಂದು ಮೀನು ಮಾರಾಟಗಾರರು ಅವಲತ್ತುಕೊಂಡರು.

ಇಂದು ಶೇ.20 ಗ್ಯಾಸ್‌ ಸರಬರಾಜು: ರಾವ್‌

ಬೆಂಗಳೂರು: ಸೋಮವಾರದಿಂದ ಹೋಟೆಲ್‌ಗಳಿಗೆ ಶೇ.20ರಷ್ಟು ಅನಿಲ ಸಿಲಿಂಡರ್‌ ಸರಬರಾಜು ಆಗುವ ನಿರೀಕ್ಷೆ ಇದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಸೋಮವಾರದಿಂದ ಹೋಟೆಲ್‌ಗಳಿಗೆ ಶೇ.20ರಷ್ಟು ಅನಿಲ ಸಿಲಿಂಡರ್‌ ಸರಬರಾಜಾಗುವ ನಿರೀಕ್ಷೆ ಇದೆ. ಶೇ.20 ರಷ್ಟು ಪೂರೈಕೆಯಿಂದ ಪರಿಸ್ಥಿತಿ ಬಹಳಷ್ಟು ಚೇತರಿಕೆ ಕಂಡುಬರುವುದಿಲ್ಲ. ಆದರೆ, ಇದು ಭವಿಷ್ಯದಲ್ಲಿ ಶೇ.50ಕ್ಕೆ ಹೆಚ್ಚಳವಾಗುವ ಸಂಭವವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸುಮಾರು 40 ಸಾವಿರ ಹೋಟೆಲ್‌ಗಳಿದ್ದು ಗ್ಯಾಸ್‌ ಸಮಸ್ಯೆಯಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸುವುದು ಹೋಟೆಲ್‌ ಮಾಲೀಕರಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.