ಹಾಸನ(ಡಿ.27): ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪ್ರಕಟಿಸದಿದ್ದರೇ ಸರ್ಕಾರವೇ ನಾಮಿನೇಟ್‌ ಮಾಡಿಕೊಳ್ಳಲಿ, ಚುನಾವಣೆ ಏಕೆ ಬೇಕಿತ್ತು? ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆ ಮೊದಲನೇ ಹಂತ ಮುಗಿದಿದ್ದು, ಇಂದು ಎರಡನೇ ಹಂತವು ಸಹ ಮುಗಿಯಲಿದ್ದು, ಕೂಡಲೇ ಸರ್ಕಾರ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ ಮಾಡಬೇಕೆಂದು ಈ ಬಗ್ಗೆ ಜಿಲ್ಲಾ​ಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದರು. ನಿಗದಿತ ಸಮಯದಲ್ಲಿ ಮೀಸಲಾತಿ ಮಾಡದಿದ್ದಲ್ಲಿ ಸರ್ಕಾರವು ತಮಗಿಷ್ಟ ಬಂದವರನ್ನು ನಾಮಿನೇಟ್‌ ಮಾಡಲಿ ಇಲ್ಲವಾದರೆ ಚುನಾವಣೆ ಯಾಕೆ ನಡೆಸಬೇಕು ಎಂದು ಹರಿಹಾಯ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಚುನಾವಣೆ ಸಮಯದಲ್ಲಿ ಜಿಲ್ಲೆಯ ಪ್ರವಾಸ ಮಾಡಿದ್ದಾರೆ. ನಮಗೆ ಗ್ರಾಮ ಪಂಚಾಯತಿ ಚುನಾವಣೆ ಯಾವುದೇ ತೊಂದರೆ ಇಲ್ಲ. ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅನುದಾನವನ್ನು ಅವರಿಗೆ ಬೇಕಾದಂತಹ ಗುತ್ತಿಗೆದಾರರಿಗೆ ನೀಡಲಾಗಿದೆ. ವಿಧಾನಸೌಧದಲ್ಲಿರುವ ಖಾಸಗಿ ವ್ಯಕ್ತಿ ಅನುಮತಿ ಪಡೆದು ಟೆಂಡರ್‌ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಾಲು ಜಾರಿ ಕೆರೆಗೆ ಬಿದ್ದು ದತ್ತ ಮಾಲಾಧಾರಿ ಸಾವು

ಹಾಸನ ಜಿಲ್ಲೆಯ 80 ಕೋಟಿ ರೂಪಾಯಿ ಪರಿಶಿಷ್ಟ ಜನಾಂಗದ ಹಣ ಬಾಕಿ ಇದೆ. ವಿವಿಧ ಕಾಮಗಾರಿಗಳಿಗೆ ಪ್ಯಾಕೇಜ್‌ ರೀತಿ ಟೆಂಡರ್‌ ಹಾಕಬೇಕು. ಸರ್ಕಾರದ ಕಾರ್ಯದರ್ಶಿ, ಇಂಜಿನಿಯರ್‌ಗಳಿಗೆ 12 ಪರ್ಸೆಂಟ್‌ ಹಣ ಕೊಡಬೇಕು. ಇಲಾಖೆ ಲೆಟರ್‌ ತೆಗೆದುಕೊಂಡು ಹೊಗಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡ ಇಲಾಖೆ ಎಸ್‌ಇಪಿ ಮತ್ತು ಪಿಎಸ್‌ಪಿ ಅನುದಾನದ ಹಣ ಈ ರೀತಿ ದುರುಪಯೋಗ ಆಗುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೆನೆ. ಲೂಟಿ ಮಾಡುವರನ್ನು ಶಿಕ್ಷೆಗೆ ಗುರಿಪಡಿಸಲಿ ಯಾವುದೇ ಕೆಲಸ ನಿಡಲು ಲೋಕಲ್‌ ಲೀಡರ್‌ ಕೈಲಿ ಹೇಳಿಸುವಂತೆ ಅ​ಧಿಕಾರಿಗಳು ಕೇಳಿದ್ದು, ಆ ಲೀಡರ್‌ ಯಾರು ಅಂತ ನನಗೆ ಗೊತ್ತಿಲ್ಲ. ಪರಿಶಿಷ್ಟರ ಹಣ ದುರುಪಯೋಗ ಸರಿಯಲ್ಲ ಸಣ್ಣ ಪುಟ್ಟಟೆಂಡರ್‌ ದಾರರು ಅರ್ಜಿ ಹಾಕುವಾಗಿಲ್ಲ. ಸಾವಿರಾರು ಕೋಟಿ ಹಿಂಗಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಕ್ರಾಂತಿ ಕಳೆದ ಮೇಲೆ ಜಿಲ್ಲೆಯ ಕೆಲಸ ಮಾಡುವುದಾಗಿ ಹೇಳಿದ್ದೀನಿ, ಎರಡು ವರ್ಷ ಆದಮೇಲೆ ನೋಡೋಣ, ಎರಡು ವರ್ಷ ಅಭಿವೃದ್ಧಿ ಕಾಮಗಾರಿ ನಿಂತಿರಲಿ, ನಾನು ಮುಖ್ಯಮಂತ್ರಿಗಳನ್ನು ಕೇಳುವುದಕ್ಕೆ ಹೋಗುವುದಿಲ್ಲ. ದೇವರು ನಮಗೆ ಮುಂದೆ ಅವಕಾಶ ಕೊಟ್ಟರೆ ಮಾಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.