ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಿಂದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಇದನ್ನೇ ಬಳಸಿಕೊಂಡು ಟಿಕೆಟ್ ರಹಿತ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಕೆಎಸ್‌ಆರ್‌ಟಿಸಿಯಲ್ಲಿ 4,353 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ 8 ಲಕ್ಷಕ್ಕೂ ಅಧಿಕ ದಂಡ ವಸೂಲಿ.

ಬೆಂಗಳೂರು (ಜ.17): ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಿಂದಾಗಿ ಬಸ್‌ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಬಸ್‌ಗಳು ಸದಾ ರಶ್ ಇರುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿ ಪ್ರಯಾಣಿಕರು ಟಿಕೆಟ್ ಪಡೆಯದೆ ನಿಗಮಕ್ಕೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಒಂದೇ ತಿಂಗಳಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ವಂಚನೆ!

ಕೇವಲ ಡಿಸೆಂಬರ್ ತಿಂಗಳೊಂದರಲ್ಲೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟಿಕೆಟ್ ಪಡೆಯದೆ ಸಂಚರಿಸುತ್ತಿದ್ದ ಬರೋಬ್ಬರಿ 4,353 ಪ್ರಯಾಣಿಕರನ್ನು ತಪಾಸಣಾಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಸ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ.

8 ಲಕ್ಷಕ್ಕೂ ಅಧಿಕ ದಂಡ ವಸೂಲಿ

ಟಿಕೆಟ್ ರಹಿತ ಪ್ರಯಾಣಿಕರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದವರಿಂದ ಒಟ್ಟು 8 ಲಕ್ಷ ರೂಪಾಯಿಗಳಷ್ಟು ದಂಡವನ್ನು ವಸೂಲಿ ಮಾಡಲಾಗಿದೆ. ಈ ಮೂಲಕ ನಿಗಮದ ಆದಾಯಕ್ಕೆ ಕನ್ನ ಹಾಕುತ್ತಿದ್ದವರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಿಬ್ಬಂದಿ ವಿರುದ್ಧವೂ ಇಲಾಖೆ ಗರಂ

ಕೇವಲ ಪ್ರಯಾಣಿಕರಷ್ಟೇ ಅಲ್ಲದೆ, ನಿಗಮದ ಹಣ ಸೋರಿಕೆಯಾಗಲು ಕಾರಣರಾದ ನಿರ್ವಾಹಕರ ಮೇಲೂ ಕ್ರಮ ಕೈಗೊಳ್ಳಲಾಗಿದೆ. ತಪಾಸಣೆ ವೇಳೆ ನಿಗಮದ ಹಣದಲ್ಲಿ ಸೋರಿಕೆಯಾಗುತ್ತಿದ್ದ ಸುಮಾರು 1 ಲಕ್ಷದ 14 ಸಾವಿರ ರೂಪಾಯಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕರ್ತವ್ಯ ಲೋಪ ಎಸಗಿದ ಮತ್ತು ಹಣಕಾಸಿನ ಅವ್ಯವಹಾರ ನಡೆಸಿದ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಫೋನ್ ಪೇ ಹೆಸರಲ್ಲಿ ಚಾಲಕ-ನಿರ್ವಾಹಕರಿಗೆ ವಂಚನೆ

ಇನ್ನು ಬಿಎಂಟಿಸಿ ಬಸ್‌ಗಳಲ್ಲಿ ಇತ್ತೀಚೆಗೆ ಡಿಜಿಟಲ್ ಪಾವತಿ ಹೆಚ್ಚಾಗಿದೆ. ಆದರೆ, ಬಸ್‌ನ ರಶ್ ಬಳಸಿಕೊಳ್ಳುವ ಕೆಲವು ಪ್ರಯಾಣಿಕರು ಫೋನ್ ಪೇ ಸ್ಕ್ಯಾನ್ ಮಾಡಿದಂತೆ ನಟಿಸಿ, ಹಳೆಯ ಪಾವತಿಯ ಸ್ಕ್ರೀನ್‌ಶಾಟ್ ತೋರಿಸಿ ಅಥವಾ ದುಡ್ಡು ಹಾಕಿದ್ದೇನೆ ಎಂದು ಸುಳ್ಳು ಹೇಳಿ ಚಾಲಕ ಮತ್ತು ನಿರ್ವಾಹಕರನ್ನು ಯಾಮಾರಿಸುತ್ತಿದ್ದಾರೆ. ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ.