ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಳ್ಳಾರಿ ಲೂಟಿ, ಜನಾರ್ದನ ರೆಡ್ಡಿ ಸೇರ್ಪಡೆ, ಮತ್ತು ಕುಮಾರಸ್ವಾಮಿಯವರ ಹೇಳಿಕೆಗಳನ್ನು ಖಂಡಿಸಿದ ಅವರು, ಪಕ್ಷಾಂತರಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಬಳ್ಳಾರಿಯಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಕಳ್ಳತನ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಯವರು ಬಳ್ಳಾರಿಗೆ ಹೋಗುತ್ತಿದ್ದಾರೆ. ಆದರೆ ಬಳ್ಳಾರಿಯನ್ನು ಚೀನಾ ಮಾರುಕಟ್ಟೆಯಲ್ಲಿ ಹರಾಜು ಹಾಕಿದವರು ಯಾರು? ಬಳ್ಳಾರಿಯಲ್ಲಿ ಲೂಟಿ ಮಾಡಿದ ಗಣಿದಣಿ ದೊರೆ ಯಾರು ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ” ಎಂದು ಅವರು ಕಿಡಿಕಾರಿದರು.
“ಕಳ್ಳರು ಹೋಗಿ ಕಳ್ಳತನದ ಬಗ್ಗೆ ಭಾಷಣ ಮಾಡಿದರೆ, ಅದನ್ನು ಕೇಳಲು ರಾಜ್ಯದ ಜನರು ದಡ್ಡರಲ್ಲ” ಎಂದು ಹೇಳಿದ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರ ನೈತಿಕತೆ ಮೇಲೆ ಗಂಭೀರ ಪ್ರಶ್ನೆ ಎತ್ತಿದರು.
ನಾವು ಹೆದರಲ್ಲ ಎಂದರೆ ಇನ್ನೇನು ನಾವು ಏನು ಹೆದರ್ತಿವಾ?
ಬಿಜೆಪಿ ನಾಯಕ ಛಲವಾಧಿ ನಾರಾಯಣಸ್ವಾಮಿ ಅವರು “ನಾವು ಯಾವುದಕ್ಕೂ ಹೆದರಲ್ಲ” ಎಂಬ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, “ನಾವೇನು ಹೆದರ್ತೀವಾ? ಪಕ್ಷ ಬಿಟ್ಟು ಜಿಗಿಯುವ ಜಂಪಿಂಗ್ ಗಿರಾಕಿಗಳಿಗೆ ಧೈರ್ಯ ಇರಬಹುದು. ಆದರೆ ಪಕ್ಷಕ್ಕೆ ಲಾಯಲ್ ಆಗಿ ನಿಂತಿರುವ ನಮಗೆ ಎಷ್ಟು ಧೈರ್ಯ ಇರಬೇಕು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಅಲ್ಲದೆ, “ಅನ್ನ ಇಟ್ಟ ಮನೆಗೆ ದ್ರೋಹ ಮಾಡುವವರನ್ನು ಯಾರು ನಂಬಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದನ್ನು ಸ್ಮರಿಸಿ, ಪಕ್ಷ ಬದಲಿಸುವ ರಾಜಕಾರಣಿಗಳ ಮೇಲೆ ವ್ಯಂಗ್ಯವಾಡಿದರು.
“ಹಿಂದೆ ಜನಾರ್ದನ ರೆಡ್ಡಿಯನ್ನೇ ಸೇರಿಸಿಕೊಳ್ಳದ ಬಿಜೆಪಿ, ಈಗ ಏಕಾಏಕಿ ಪ್ರೀತಿ ಯಾಕೆ?”
ಬಿಜೆಪಿ ಮೇಲೆ ತೀವ್ರ ಟೀಕೆ ಮುಂದುವರಿಸಿದ ಅವರು, “ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಜನಾರ್ದನ ರೆಡ್ಡಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಈಗ ಏಕಾಏಕಿ ಅವರಿಗೆ ಪ್ರೀತಿ ಏಕೆ? ಚುನಾವಣೆ ಫಂಡ್ ಸಹಾಯ ಸಿಗುತ್ತದೆ ಅನ್ನೋ ಕಾರಣಕ್ಕಾ ಈ ಪ್ರೀತಿ?” ಎಂದು ಪ್ರಶ್ನಿಸಿದರು. ವಿಜಯೇಂದ್ರ ಕುರಿತು ಮಾತನಾಡಿದ ಅವರು, “ವಿಜಯೇಂದ್ರಗೆ ಈ ಎಲ್ಲ ರಾಜಕೀಯ ಬೆಳವಣಿಗೆಗಳ ಬಗ್ಗೆ ಏನು ಗೊತ್ತಿಲ್ಲ” ಎಂದು ಟೀಕಿಸಿದರು.
“ಜೆಸಿಬಿ ಯಂತ್ರಗಳ ಪಿತಾಮಹ” – ಯತ್ನಾಳ್‌ಗೆ ವ್ಯಂಗ್ಯ
ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಕುರಿತು ವ್ಯಂಗ್ಯವಾಡಿದ ಪ್ರದೀಪ್ ಈಶ್ವರ್, “ಜೆಸಿಬಿ ಯಂತ್ರಗಳ ಪಿತಾಮಹ ಅಂತಾರೆ, ಆದರೆ ಜೆಸಿಬಿ ನೋಡದೇ ಇರುವ ಪಿತಾಮಹ. ಕಮಂಗಿ, ಕೋತಿ ಬಿ-ಫಾರಂ ತಗೊಳ್ಳೋಕೆ ಯೋಗ್ಯತೆ ಇಲ್ಲದವರು ಎಲ್ಲ ಕ್ಷೇತ್ರಗಳಲ್ಲೂ ಓಡಾಡ್ತಿದ್ದಾರೆ” ಎಂದು ಕಿಡಿಕಾರಿದರು.
ಕುಮಾರಸ್ವಾಮಿ ವಿರುದ್ಧ ತೀವ್ರ ಅಸಮಾಧಾನ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ 40 ವರ್ಷಗಳ ರಾಜಕೀಯ ಜೀವನದ ಬಗ್ಗೆ ಮಾತನಾಡಿರುವುದಕ್ಕೂ ಪ್ರದೀಪ್ ಈಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಸ್ವಲ್ಪ ಓದಿಕೊಂಡಿರುತ್ತಾರೆ ಎಂದುಕೊಂಡಿದ್ದೆ. ಆದರೆ 371(J) ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ. 2012ರಲ್ಲಿ ಜಾರಿಯಾದ 371(J) ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಮಕ್ಕಳಿಗೆ ಲೈಫ್ ಟೈಮ್ ಅವಕಾಶ. ಇದು ಕೇವಲ ಕಾಂಗ್ರೆಸ್ ನಾಯಕರ ಮಕ್ಕಳಿಗೆ ಮಾತ್ರ ಅಲ್ಲ, ನಿಮ್ಮ ಜೆಡಿಎಸ್ ನಾಯಕರ ಮಕ್ಕಳಿಗೂ ಅನ್ವಯಿಸುತ್ತದೆ” ಎಂದರು. ಈ ಹಕ್ಕಿಗೆ ಕಾರಣವಾಗಿದ್ದು ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರು ಎಂದು ಹೇಳಿದ ಅವರು, “ಖರ್ಗೆ ಅವರು ಲೇಬರ್ ಲೀಡರ್ ಆಗಿ ಮೆಟ್ಟಿಲು ಮೆಟ್ಟಿಲಾಗಿ ಮೇಲೆ ಬಂದವರು. ಬಿಡದಿ ಹತ್ತಿರ ರೆಸಾರ್ಟ್‌ಗೆ ಹೋಗಿ ರಾಜಕೀಯಕ್ಕೆ ಬಂದವರಲ್ಲ” ಎಂದು ಟೀಕಿಸಿದರು.
“ಮರಾಠಿ ಬೇರೆ, ಕನ್ನಡ ಬೇರೆ”
“ಮುಂಬೈ ಪಾಲಿಕೆ ಚುನಾವಣೆ ನೋಡಿ ಸ್ಪೂರ್ತಿಯಾಗಿ ಮಾತನಾಡುವುದು ಸರಿಯಲ್ಲ. ಮರಾಠಿ ಬೇರೆ, ಕನ್ನಡ ಬೇರೆ ಸರ್. ಕನ್ನಡ ನಾಡಿನ ತಾಕತ್ ಬೇರೆ. ಬೇರೆ ರಾಜ್ಯದ ವಿದ್ಯಮಾನಗಳನ್ನು ಇಲ್ಲಿ ತಂದು ಲಿಂಕ್ ಮಾಡುವುದು ಸರಿಯಲ್ಲ” ಎಂದು ಕುಮಾರಸ್ವಾಮಿಯವರಿಗೆ ಎಚ್ಚರಿಕೆ ನೀಡಿದರು.
“ಬಿಜೆಪಿ ಹಾಗೂ ಜೆಡಿಎಸ್ ‘ಡ್ಯಾಡಿ ಇಸ್ ಬ್ಯಾಕ್’ ಅಂತಾರೆ. ಡ್ಯಾಡಿ ಇಸ್ ಹೋಮ್ ಅಂದರೆ, ಹೋಮ್ ಯಾವುದು? ಬಿಜೆಪಿಗಾ, ಕಾಂಗ್ರೆಸ್ ಗಾ? ಕುಮಾರಸ್ವಾಮಿ ಬಣ್ಣ ಬದಲಿಸಿ ಹೊಂದಾಣಿಕೆ ಮಾಡೋದು ಚೆನ್ನಾಗಿ ಗೊತ್ತಿದೆ” ಎಂದು ವ್ಯಂಗ್ಯವಾಡಿದರು.
ಮಹಿಳಾ ಅಧಿಕಾರಿಗೆ ಅವಮಾನ ಪ್ರಕರಣ: “ಕಾನೂನು ಕ್ರಮ ಖಚಿತ”
ರಾಜೀವ್ ಗೌಡ ಅರೆಸ್ಟ್ ಆಗದ ವಿಚಾರಕ್ಕೂ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, “ಹೆಣ್ಣು ಮಗುವಿಗೆ ಅವಮಾನ ಮಾಡಿದರೆ ಯಾರೇ ಆಗಲಿ ತಪ್ಪೇ. ಸಿ.ಟಿ. ರವಿ ಬೈದರೂ ತಪ್ಪು, ಎನ್. ರವಿಕುಮಾರ್ ಬೈದರೂ ತಪ್ಪು, ರಾಜೀವ್ ಗೌಡ ಬೈದರೂ ತಪ್ಪೇ” ಎಂದು ಹೇಳಿದರು. “ರಾಜೀವ್ ಗೌಡ ಅವರನ್ನು ನಾವು ಸಮರ್ಥಿಸಿಕೊಳ್ಳಲ್ಲ. ಎಫ್‌ಐಆರ್ ದಾಖಲಾಗಿದೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪಾರ್ಟಿಯೂ ಕ್ರಮ ತೆಗೆದುಕೊಳ್ಳುತ್ತದೆ” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, “ಎಂಎಲ್‌ಸಿ ರವಿಕುಮಾರ್ ಚೀಪ್ ಸಕ್ರೆಟ್ರಿ ಬಗ್ಗೆ ಮಾತನಾಡಿದಾಗ ನಾವು ಹತ್ತು ನಿಮಿಷದಲ್ಲೇ ಅರೆಸ್ಟ್ ಮಾಡಬಹುದಿತ್ತು. ಆದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಮಹಿಳಾ ಅಧಿಕಾರಿಗೆ ಅವಮಾನ ಆಗಿದೆ, ನಾವು ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ. ಇವತ್ತಲ್ಲ, ನಾಳೆ ಅರೆಸ್ಟ್ ಖಚಿತ” ಎಂದರು.
“ಮಹಿಳಾ ಅಧಿಕಾರಿಗೆ ಗೌರವ ಕೊಡಲೇಬೇಕು”
ಈ ವಿಚಾರದಲ್ಲಿ ಉಸ್ತುವಾರಿ ಸಚಿವರೂ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ ಪ್ರದೀಪ್ ಈಶ್ವರ್, “ಮಹಿಳಾ ಅಧಿಕಾರಿಗಳಿಗೆ ಗೌರವ ಕೊಡಬೇಕು. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ” ಎಂದು ಖಡಕ್ ಸಂದೇಶ ನೀಡಿದರು.


