ಗದಗ ನಗರದ ಬಸ್ ನಿಲ್ದಾಣದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ, ಬಸ್ ಹತ್ತಲು ಬಿಡಲಿಲ್ಲವೆಂದು ರಾದ್ಧಾಂತ ಸೃಷ್ಟಿಸಿದ್ದಾನೆ. ಬಸ್‌ನಲ್ಲಿ ಹೆಚ್ಚು ಜನರಿದ್ದಾರೆಂದು ಆರೋಪಿಸಿ, ಬಸ್‌ನ ಚಕ್ರದ ಮುಂದೆ ಮಲಗಿ ಪ್ರತಿಭಟಿಸಿ, ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಹೈರಾಣಾದರು.
ಗದಗ (ಜ.17): ಕುಡಿದ ಮತ್ತಿನಲ್ಲಿ ಏನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲದೆ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಲ್ಲಿ ಭಾರೀ ರಾದ್ಧಾಂತ ಮಾಡಿರುವ ಘಟನೆ ಗದಗ ನಗರದ ಮುಳಗುಂದ ನಾಕಾ ಬಸ್ ಸ್ಟಾಪ್ ಬಳಿ ನಡೆದಿದೆ. ಕುಡುಕನ ಈ ಅವಾಂತರದಿಂದಾಗಿ ಬಸ್ ಪ್ರಯಾಣಿಕರು ಹಾಗೂ ಸಿಬ್ಬಂದಿ ಕೆಲಕಾಲ ಹೈರಾಣಾಗಿದ್ದಾರೆ.
'50 ಮಂದಿಗಷ್ಟೇ ಅವಕಾಶ' - ಕುಡುಕನ ಕಾನೂನು ಅಸ್ತ್ರ!
ಬಸ್ ಹತ್ತಲು ಬಂದಿದ್ದ ವ್ಯಕ್ತಿಗೆ ಬಸ್ ರಶ್ ಇದೆ, ಹತ್ತಬೇಡಿ ಎಂದು ನಿರ್ವಾಹಕರು ತಿಳಿಸಿದ್ದಾರೆ. ಇದಕ್ಕೆ ಕೆಂಡಾಮಂಡಲವಾದ ಕುಡುಕ, 'ಬಸ್‌ನಲ್ಲಿ ಕೇವಲ 50 ಜನರಿಗಷ್ಟೇ ಅವಕಾಶವಿದೆ, ನಿಯಮ ಮೀರಿ ಜನರನ್ನು ತುಂಬಿಸಿಕೊಂಡಿದ್ದೀರಿ. ಮೊದಲು ಉಳಿದವರನ್ನು ಕೆಳಗಿಳಿಸಿ' ಎಂದು ಕಾನೂನು ಮಾತನಾಡುತ್ತಾ ಕಿರಿಕ್ ಶುರು ಮಾಡಿದ್ದಾನೆ.
ಬಸ್ ಮುಂದೆ ಮಲಗಿ ಹೈಡ್ರಾಮಾ
ತನ್ನ ವಾದಕ್ಕೆ ಮಣಿಯದ ಬಸ್ ಸಿಬ್ಬಂದಿ ವಿರುದ್ಧ ಆಕ್ರೋಶಗೊಂಡ ವ್ಯಕ್ತಿ, ಸೀದಾ ಬಸ್‌ನ ಚಕ್ರದ ಮುಂದೆ ಮಲಗಿ ಪ್ರತಿಭಟನೆ ನಡೆಸಿದ್ದಾನೆ. 'ಅಷ್ಟು ಜನರನ್ನು ತುಂಬಿಸಿಕೊಂಡ ಮೇಲೆ ನಾನೊಬ್ಬನೇ ಹೇಗೆ ಹೆಚ್ಚಾಗುತ್ತೇನೆ? ಎಲ್ಲರನ್ನೂ ಇಳಿಸಿ ಇಲ್ಲದಿದ್ದರೆ ಬಸ್ ಬಿಡಲು ಬಿಡುವುದಿಲ್ಲ' ಎಂದು ಹಠ ಹಿಡಿದು ಕುಳಿತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು.
ಸುಸ್ತು ಹೊಡೆದ ಪ್ರಯಾಣಿಕರು
ಕುಡುಕನ ವಿತಂಡವಾದ ಮತ್ತು ಕೂಗಾಟದಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಅಕ್ಷರಶಃ ಸುಸ್ತಾಗಿ ಹೋದರು. ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಹೈಡ್ರಾಮಾದಿಂದಾಗಿ ಪ್ರಯಾಣಿಕರು ಕೆಲಸ ಕಾರ್ಯಗಳಿಗೆ ಹೋಗಲು ತಡವಾಯಿತು. ಸ್ಥಳದಲ್ಲಿದ್ದವರು ವ್ಯಕ್ತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಆತ ಮಾತ್ರ ಬಸ್ ಇಳಿಯುವಂತೆ ಕೂಗಾಡುತ್ತಿದ್ದ.
ಕೊನೆಗೂ ಸ್ಥಳದಿಂದ ಕಾಲ್ಕಿತ್ತ ಭೂಪ
ಬಹಳ ಹೊತ್ತು ಗಲಾಟೆ ಮಾಡಿ, ಪ್ರಯಾಣಿಕರ ತಾಳ್ಮೆ ಪರೀಕ್ಷಿಸಿದ ಈ ಕುಡುಕ, ಕೊನೆಗೆ ಸ್ಥಳೀಯರ ಗದರಿಕೆ ಮತ್ತು ಪೊಲೀಸರಿಗೆ ದೂರು ನೀಡುವ ಎಚ್ಚರಿಕೆಯ ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ. ವ್ಯಕ್ತಿ ಹೋದ ನಂತರ ಬಸ್ ಚಾಲಕರು ನಿಟ್ಟುಸಿರು ಬಿಟ್ಟು ಬಸ್ ಚಲಾಯಿಸಿದರು.


