Asianet Suvarna News Asianet Suvarna News

ಅರಣ್ಯ, ವನ್ಯ ಜೀವಿ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ : ಸಿಎಂ ಸಿದ್ದರಾಮಯ್ಯ

ಅರಣ್ಯ ಪ್ರದೇಶ ಹಾಗೂ ವನ್ಯ ಪ್ರಾಣಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Forest and wildlife conservation is everyone's responsibility: CM Siddaramaiah snr
Author
First Published Oct 8, 2023, 9:14 AM IST

  ಮೈಸೂರು :  ಅರಣ್ಯ ಪ್ರದೇಶ ಹಾಗೂ ವನ್ಯ ಪ್ರಾಣಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಕರ್ನಾಟಕ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಸಂಕಲ್ಪ ಮಾಡಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸಿ. ವನ್ಯಜೀವಿ ಸಪ್ತಾಹದ ಉದ್ದೇಶ ಅರಣ್ಯ ಪ್ರದೇಶ ಹಾಗೂ ಅರಣ್ಯ ಜೀವಿಗಳ ಸಂರಕ್ಷಣೆ ಮಾಡುವುದು. ಅರಣ್ಯ ಉಳಿದರೆ ನಾಡು ಜನ ಉಳಿಯಲು ಸಾಧ್ಯ. ಪ್ರಕೃತಿ ಸಮತೋಲನಕ್ಕೆ ಅರಣ್ಯ ಶೇ. 33ರಷ್ಟು ಇರಬೇಕು. ಆದರೆ ಶೇ. 22ರಷ್ಟು ಅರಣ್ಯ ಇದೆ. ಮನುಷ್ಯನ ದುರಾಸೆಯಿಂದ ಕಾಡು ಕಡಿಮೆ ಆಗುತ್ತಿದೆ. ಇದರಿಂದ ವನ್ಯ ಜೀವಿಗಳಿಗೆ ತೊಂದರೆ ಆಗಿ ನಾಡಿಗೆ ಬರುತ್ತಿವೆ. 6,395 ಆನೆಗಳು ಇದ್ದು ದೇಶದಲ್ಲಿ ಪ್ರಥಮ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿ 563 ಹುಲಿಗಳು ಇವೆ ಎಂದು ತಿಳಿಸಿದರು.

ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಗಟ್ಟಲು ಈವರೆಗೆ 312 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರಾಣಿಗಳು ಆಹಾರ ಮತ್ತು ಕುಡಿಯುವ ನೀರನ್ನು ಅರಸಿ ನಾಡಿಗೆ ಬರುತ್ತವೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿಯೇ ನೀರು ಮತ್ತು ಆಹಾರ ಸಿಗುವಂತೆ ಮಾಡಿದರೆ ಪ್ರಾಣಿಗಳು ನಾಡಿಗೆ ಬರುವುದಿಲ್ಲ. ಇದಕ್ಕೆ ಅಗತ್ಯವಾದ ಎಲ್ಲಾ ಸಹಕಾರವನ್ನು ಸರ್ಕಾರ ನೀಡುತ್ತದೆ ಎಂದರು.

ಅರಣ್ಯ ಪ್ರದೇಶ ಹೆಚ್ಚಳ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಪಶ್ಚಿಮಘಟ್ಟ ಪ್ರದೇಶ ತುಂಬಾ ಹಳೆಯದಾದ ಜೀವ ವೈವಿಧ್ಯತೆ ಪ್ರದೇಶ. ಇಲ್ಲಿ ಎಲ್ಲಾ ರೀತಿಯ ಸಸ್ಯ ಹಾಗೂ ಪ್ರಾಣಿಗಳು ಇವೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅರಣ್ಯ ಪ್ರದೇಶದ ಬಗ್ಗೆ ಅಭಿಮಾನ ಇರಬೇಕು. ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸಿಸುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ವನ್ಯಜೀವಿ ಸಪ್ತಾಹದ ಉದ್ದೇಶ ಅರಣ್ಯ ಮತ್ತು ಕಾಡು ಪ್ರಾಣಿಗಳನ್ನು ಸಂರಕ್ಷಿಸುವುದು. ಸ್ವತಂತ್ರ ಬಂದ ವೇಳೆ ಪ್ರಪಂಚದ ಜನಸಂಖ್ಯೆ 300 ಕೋಟಿ ಇತ್ತು. ಈಗ 800 ಕೋಟಿ ಆಗಿದೆ. ಆದರೆ ಭೂಮಿ ಅಷ್ಟೇ ಇದೆ. ಜನಸಂಖ್ಯೆ ಹೆಚ್ಚಳದಿಂದ ಜನರು ಅರಣ್ಯ ನಾಶ ಮಾಡುತ್ತಾರೆ. ಅರಣ್ಯ ನಾಶ ಹಾಗೂ ಪರಿಸರ ಸಂರಕ್ಷಣೆ ಮಾಡದೇ ಇದ್ದರೆ ಹವಾಮಾನ ವೈಪರೀತ್ಯ ಉಂಟಾಗಿ ಮಳೆ ಕಡಿಮೆ ಆಗಿ ತಾಪಮಾನ ಹೆಚ್ಚಾಗುತ್ತದೆ ಎಂದರು.

ಭೂಮಿಯ ಮೇಲೆ ಶೇ. 33ರಷ್ಟು ಅರಣ್ಯ ಇರಬೇಕು. ಆದರೆ ಇಷ್ಟು ಪ್ರಮಾಣ ಇಲ್ಲ. ಆಮ್ಲಜನಕದ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಹೆಚ್ಚಿನ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಮಾತನಾಡಿ, ಪ್ರತಿವರ್ಷ ವನ್ಯಜೀವಿ ಸಪ್ತಾಹ ನಡೆಯುತ್ತದೆ. ಪ್ರಕೃತಿ ಪರಿಸರ ಇಲ್ಲದೆ ಇದ್ದರೆ ನಾವು ಯಾರು ಬದುಕಲು ಸಾದ್ಯವಿಲ್ಲ. ಪರಿಸರದ ಏರುಪೇರಿನಿಂದ ಹವಾಮಾನ ಬದಲಾವಣೆ ಆಗುತ್ತಿದೆ. ಕೆಲವು ಕಡೆ ಹೆಚ್ಚು ಮಳೆ ಕೆಲವು ಕಡೆ ಬರ ಉಂಟಾಗುತ್ತದೆ. ಇದಕ್ಕೆ ಕಾರಣ ಅರಣ್ಯ ನಾಶ. ನಮ್ಮಲ್ಲಿ ಶೇ. 22 ರಷ್ಟು ಮಾತ್ರ ಅರಣ್ಯ ಪ್ರದೇಶ ಇದ್ದು ಇದನ್ನು ಶೇ. 33ಕ್ಕೆ ಹೆಚ್ಚಿಸಬೇಕು. ರಾಜ್ಯದಲ್ಲಿ ಈ ವರ್ಷ 5 ಕೋಟಿ ಸಸಿ ನೆಟ್ಟು ಬಳಸುತ್ತಿದ್ದೇವೆ ಎಂದರು.

ಇದರಲ್ಲಿ ಕನಿಷ್ಟ 90ರಷ್ಟು ಬದುಕಬೇಕು. ಮುಂದಿನ ವರ್ಷ 10 ಕೋಟಿ ಸಸಿ ನೆಡುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಭೂಮಿಯ ಮೇಲೆ ಮಾನವನಿಗೆ ಹೇಗೆ ಬದುಕಲು ಹಕ್ಕು ಇದೆಯೋ ಅದೇ ರೀತಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕು ಇದೆ. ದೇಶದ 8 ವನ್ಯಜೀವಿ ಸಂರಕ್ಷಣಾ ಪ್ರದೇಶಗಳಲ್ಲಿ ನಮ್ಮ ರಾಜ್ಯದ ಪಶ್ಚಿಮಘಟ್ಟ ಪ್ರದೇಶ ಸೇರಿದೆ. ವನ್ಯ ಜೀವಿಗಳ ದಾಳಿಯಿಂದ ಅನೇಕ ಮಾನವ ಜೀವ ಹಾನಿ ಆಗುತ್ತಿದೆ. ಇದರಲ್ಲಿ ಹೆಚ್ಚು ಆನೆ ತುಳಿತದಿಂದ ಆಗುತ್ತಿದೆ. ಈ ವರ್ಷ ಆನೆ ದಾಳಿಯಿಂದ 31 ಜನ ಮರಣ ಹೊಂದಿದ್ದಾರೆ. ಇದನ್ನು ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾಕಷ್ಟು ಅನುದಾನ ಮೀಸಲಿಡಲಾಗಿದೆ. ನಮ್ಮ ಇಲಾಖೆಯಿಂದ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ತ್ಯಜಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ನಮ್ಮ ದೇಶದಲ್ಲೇ ಹೆಚ್ಚು 6,395 ಆನೆಗಳು ಇವೆ ಹಾಗೂ ರಾಜ್ಯದಲ್ಲಿ 563 ಹುಲಿಗಳಿವೆ. ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಸುಮಾರು 10 ಸಾವಿರ ಜನರಿಗೆ ಹಕ್ಕು ಪತ್ರ ವಿತರಿಸಲಾವುದು ಎಂದು ಅವರು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ, ರಾಜ್ಯದಲ್ಲಿ ಶೇ. 22ರಷ್ಟು ಮಾತ್ರ ಅರಣ್ಯ ಇದೆ. ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚು ಆಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ರೇಡಿಯೋ ಟ್ರಾಕಿಂಗ್ ಮತ್ತು ಜಿಪಿಎಸ್ ಚಿಪ್ ಅನ್ನು ರಾಜ್ಯದಲ್ಲಿಯೇ ತಯಾರಿಸಬೇಕು ಎಂದು ಮುಖ್ಯಂತ್ರಿಗಳಲ್ಲಿ ಅವರು ಮನವಿ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಚಿರತೆ ಕಾರ್ಯಾಚರಣೆಗೆ ಅಗತ್ಯವಾದ ವನ್ಯಜೀವಿ ಆಂಬುಲೆನ್ಸ್ ವೀಕ್ಷಿಸಿದರು. ಬುಡಕಟ್ಟು ಜನಾಂಗದವರು ಕರಕುಶಲ ಕಲೆಯಿಂದ ಸ್ಥಳದಲ್ಲೇ ತಯಾರಿಸುವ ವಸ್ತುಗಳ ಮಳಿಗೆ ವೀಕ್ಷಿಸಿದರು.

ಕೊಕ್ಕರೆ ಬೆಳ್ಳೂರು ಪ್ರದೇಶದ ಕುರಿತು ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು. ಕೊಕ್ಕರೆ ಬೆಳ್ಳೂರು ಪ್ರದೇಶದ ತಾಂತ್ರಿಕ ವರದಿ ಬಿಡುಗಡೆಗೊಳಿಸಲಾಯಿತು. ರಂಗನತಿಟ್ಟು ಪಕ್ಷಿಧಾಮದ ಸಾಕ್ಷ ಚಿತ್ರ ಬಿಡುಗಡೆಗೊಳಿಸಲಾಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುರಿತ ಸಾಕ್ಷಚಿತ್ರ ಹಾಗೂ ಆನೆ ದಾಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಿರುವ ಕುರಿತ ಸಾಕ್ಷಚಿತ್ರ ಬಿಡುಗಡೆಗೊಳಿಸಲಾಯಿತು.

ಮೇಯರ್ ಶಿವಕುಮಾರ್, ಶಾಸಕರಾದ ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಉಪ ಮೇಯರ್ಡಾ.ಡಿ. ರೂಪಾ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

-

Follow Us:
Download App:
  • android
  • ios