ಅಥಣಿ [ಆ.16]:  ತನ್ನ ಒಂದೂವರೆ ವರ್ಷದ ಮಗುವಿಗೆ ಹಾಲುಣಿಸಲು ತಾಯಿ ತೀವ್ರ ಒದ್ದಾಡುತ್ತಿದ್ದಾಳೆ. ಮಗು ಕೂಡ ಹಸಿವು ತಾಳದೆ ತನ್ನ ತಾಯಿಯ ಎದೆ ಹಾಲುಣ್ಣಲು ಮುಂದಾಗುತ್ತದೆ. ಆದರೆ, ಅದರಲ್ಲಿ ಹಾಲೇ ಬರುತ್ತಿಲ್ಲ. ಕಾರಣ ಪ್ರವಾಹದಿಂದ ತತ್ತರಿಸಿಹೋಗಿರುವ ಈ ತಾಯಿಗೆ ಸರಿಯಾಗಿ ಊಟ ಸಿಕ್ಕಿಲ್ಲ. ಹೀಗಾಗಿಯೇ ಆ ತಾಯಿ ಎದೆಯಲ್ಲಿ ಹಾಲು ಜಿನುಗುವುದೇ ದುಸ್ತರವಾಗಿದೆ. 

ಇದು ವಿಚಿತ್ರವಾದರೂ ಸತ್ಯವಾದ ಘಟನೆ. ಅಥಣಿ ತಾಲೂಕಿನ ಸತ್ತಿ ಗ್ರಾಮದ ಕರಜಗಿ ಕುಟುಂಬದ ನೋವು ನೋಡಿದವರಿಗೆ ಎಂತವರ ಮನ ಕರಗದಿರದು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಕರಜಗಿ ಕುಟುಂಬದ ಒಂದೂವರೆ ವರ್ಷದ ಮಗು ಸೇರಿದಂತೆ ಒಟ್ಟು ಐವರು ಈಗ ಪ್ರವಾಹದಿಂದ ತತ್ತರಿಸಿ ಸಿದ್ಧಾರೂಢ ತೋಟದ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದ್ದ ಹೊಲ, ಮನೆ, ಬಟ್ಟೆ, ವಸ್ತುಗಳು, ಬಂಗಾರ ಎಲ್ಲವನ್ನು ಕಳೆದುಕೊಂಡಿರುವ ಈ ಕುಟುಂಬ ಅಕ್ಷರಶಃ ಬಸ್‌ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎದೆ ಹಾಲುಣ್ಣುವ ಒಂದೂವರೆ ವರ್ಷದ ಮಗು, ಇಬ್ಬರು ವೃದ್ಧರು ಸೇರಿದಂತೆ ಒಟ್ಟು ಐವರು ಜನರು ಇಲ್ಲಿ ವಾಸವಾಗಿದ್ದಾರೆ. ಮನೆಬಿಟ್ಟು ಬಂದ ನಂತರ ಸರಿಯಾದ ಊಟ ಕೂಡ ಸಿಕ್ಕಿಲ್ಲ. ಹೀಗಾಗಿ ಮಗುವಿಗೂ ಸರಿಯಾಗಿ ಆಹಾರ ಸಿಗುತ್ತಿಲ್ಲ.

ಪ್ರವಾಹ ಬಂದಾಗ ನಸುಕಿನ ಜಾವವೇ ಇಲ್ಲಿಗೆ ಬಂದಿದ್ದೇವೆ. ಮರುದಿನ ತಿನ್ನಲು ನಮಗೆ ಏನೂ ಸಿಕ್ಕಿಲ್ಲ. ಮೊಲೆಹಾಲುಣ್ಣುವ ಮಗು ಇದ್ದರೂ ಅದಕ್ಕೆ ಸರಿಯಾಗಿ ಊಟ ಸಿಗುತ್ತಿಲ್ಲ ಎಂದು ತಮ್ಮ ಗೋಳು ಹೇಳಿಕೊಳ್ಳುತ್ತಿದೆ ಈ ಕುಟುಂಬ. ಇನ್ನಾದರೂ ಸಂಬಂಧಪಟ್ಟವರು ಈ ಕುಟುಂಬಕ್ಕೆ ನೆರವಾಗುತ್ತಾರಾ ಎಂಬುವುದು ಪ್ರಶ್ನೆಯಾಗಿದೆ.