Asianet Suvarna News Asianet Suvarna News

Mysuru ಬಿಜೆಪಿಗೆ ಪ್ರಥಮ ಜಯ : 2 ಬಾರಿ ಟಿಕೆಟ್‌ ಪಡೆದಿದ್ದ ಕಾಂಗ್ರೆಸ್‌ನ ಮಂಜುನಾಥ್‌ ಸೋಲು

  •  ಬಿಜೆಪಿಗೆ ಪ್ರಥಮ ಜಯ :  2 ಬಾರಿ ಟಿಕೆಟ್‌ ಪಡೆದಿದ್ದ ಕಾಂಗ್ರೆಸ್‌ನ ಮಂಜುನಾಥ್‌ಗೆ ಸೋಲು
  • ಜೆಡಿಎಸ್‌ನಿಂದ ಸಂದೇಶ್‌ ಇದು 4ನೇ ಚುನಾವಣೆ ವಿಶೇಷ
  • ಸತತ ಎರಡನೇ ಬಾರಿ ಟಿಕೆಟ್‌ ಗಿಟ್ಟಿಸಿದ್ದ ಕಾಂಗ್ರೆಸ್‌ನ ಮಂಜುನಾಥ್‌ಗೆ ಸೋಲು
  • ಬೆಂಕಿ ಮಹದೇವ್‌ ಕೂಡ ಆಕಾಂಕ್ಷಿಯಾಗಿದ್ದರು
  • ಮತ್ತೊಮ್ಮೆ ವಾಟಾಳ್‌ ನಾಗರಾಜ್‌ ಕಣದಲ್ಲಿದ್ದರು
First Time BJP Candidate got victory  in 2009 MLC Election in Mysore region snr
Author
Bengaluru, First Published Nov 15, 2021, 11:43 AM IST

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.15):  ಮೈಸೂರು- ಚಾಮರಾಜನಗರ (Mysuru Chamarajanagar) ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ನಾಲ್ಕನೇ ಚುನಾವಣೆಯು (Election) 2009ರ ಡಿ.18 ರಂದು ನಡೆದು, ಜೆಡಿಎಸ್‌ನ (JDS) ಸಂದೇಶ್‌ ನಾಗರಾಜ್‌ (Sandesh nagaraj) ಹಾಗೂ ಬಿಜೆಪಿಯ (BJP) ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಆಯ್ಕೆಯಾದರು.

ಸತತ ಎರಡನೇ ಬಾರಿ ಟಿಕೆಟ್‌ ಗಿಟ್ಟಿಸಿದ್ದ ಕಾಂಗ್ರೆಸ್‌ನ ಎನ್‌. ಮಂಜುನಾಥ್‌ (N Manjunath) ಸೋತರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೊದಲ ಬಾರಿ ಸೋತರೆ, ಬಿಜೆಪಿ (BJP) ಪ್ರಥಮ ಜಯ ದಾಖಲಿಸಿತು.

ಒಟ್ಟು 6920 ಮತದಾರರಿದ್ದರು. ಈ ಪೈಕಿ 4068 ಪುರುಷರು ಹಾಗೂ 2892 ಮಹಿಳೆಯರು. ಮೈಸೂರು ಜಿಲ್ಲೆ(Mysuru) - 4684 (ಗ್ರಾಪಂ ಸದಸ್ಯರು- 4300, ತಾಪಂ ಸದಸ್ಯರು- 171, ಜಿಪಂ ಸದಸ್ಯರು- 46, ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳ ಸದಸ್ಯರು- 215, ವಿಧಾನಸಭಾ ಸದಸ್ಯರು- 11, ವಿಧಾನ ಪರಿಷತ್‌ ಸದಸ್ಯರು-5, ಸಂಸದರು-2), ಚಾಮರಾಜನಗರ ಜಿಲ್ಲೆ- 2276 (ಗ್ರಾಪಂ ಸದಸ್ಯರು- 2045, ತಾಪಂ ಸದಸ್ಯರು- 83, ಜಿಪಂ ಸದಸ್ಯರು- 21, ನಗರ, ಪಟ್ಟಣ ಸ್ಥಳೀಯಸಂಸ್ಥೆ ಸದಸ್ಯರು- 120, ವಿಧಾನಸಭಾ ಸದಸ್ಯರು-4, ಸಂಸದರು-1 )

ಜೆಡಿಎಸ್‌

ಜೆಡಿಎಸ್‌ (JDS) ಟಿಕೆಟ್‌ಗೆ ಸಂದೇಶ್‌ ನಾಗರಾಜ್‌ ಹಾಗೂ ಬನ್ನೂರಿನ ಮಾಜಿ ಶಾಸಕ ಜೆ. ಸುನೀತಾ ವೀರಪ್ಪಗೌಡ ಕೂಡ ಆಕಾಂಕ್ಷಿಯಾಗಿದ್ದರು. ವರಿಷ್ಠರು ಅಂತಿಮವಾಗಿ ಸಂದೇಶ್‌ ನಾಗರಾಜ್‌ ಅವರಿಗೆ ಟಿಕೆಟ್‌ ನೀಡಿದರು. ಹಿಂದೊಮ್ಮೆ ವಿಧಾನಸಭೆಯಿಂದ (Assembly) ವಿಧಾನ ಪರಿಷತ್‌ಗೆ (Council) ನಡೆದ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿದ್ದ ಸಂದೇಶ್‌ ನಾಗರಾಜ್‌ ಕಾಂಗ್ರೆಸ್‌ನ ವಿ.ಆರ್‌. ಸುದರ್ಶನ್‌ (RV Sudarshan) ಎದುರು ಅಲ್ಪಮತಗಳ ಅಂತರದಿಂದ ಸೋತಿದ್ದರು. 1994 ರಲ್ಲಿ ನರಸಿಂಹರಾಜ (Narasimha Raja) ಕ್ಷೇತ್ರದಿದ ಜನತಾದಳ, 2004 ರಲ್ಲಿ ಚಾಮರಾಜ ಕ್ಷೇತ್ರದಿಂದ ಕಾಂಗ್ರೆಸ್‌ (Congress) ಅಭ್ಯರ್ಥಿಯಾಗಿ ಸೋತರು. ಎಂಡಿಎ (MDA) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 2008 ರಲ್ಲಿ ಮತ್ತೆ ನರಸಿಂಹರಾಜ ಕ್ಷೇತ್ರದಿಂದ ಜೆಡಿಎಸ್‌ (JDS) ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಅಂತಿಮವಾಗಿ 2010 ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ದಶಕಗಳ ತಮ್ಮ ಕನಸನ್ನು ನನಸು ಮಾಡಿಕೊಂಡರು.

ಬಿಜೆಪಿ

ಬಿಜೆಪಿಯಲ್ಲಿ ಮಾಜಿ ಸಚಿವ ಬೆಂಕಿ ಮಹದೇವ್‌, ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ವರಿಷ್ಠರು ಪ್ರೊ.ಕೆ.ಆರ್‌. ಲ್ಲಿಕಾರ್ಜುನಪ್ಪ ಅವರಿಗೆ ಟಿಕೆಟ್‌ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಮಹದೇವ್‌ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದೆ ಜೆಡಿಎಸ್‌ ಸೇರಿದರು. ಆದರೆ ಜೆಎಸ್‌ಎಸ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಅವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇದೆ. ಹೀಗಾಗಿ ಅಚ್ಚರಿ ಎಂಬಂತೆ ಅವರು ಗೆದ್ದು, ದಾಖಲೆ ನಿರ್ಮಿಸಿದರು.

ಕಾಂಗ್ರೆಸ್‌

ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೊದಲ ಚುನಾವಣೆಯಲ್ಲಿ ಟಿ.ಎನ್‌. ನರಸಿಂಹಮೂರ್ತಿ- ವಿ.ಎಚ್‌. ಗೌಡ‚, ಎರಡನೇ ಚುನಾವಣೆಯಲ್ಲಿ ಸಿ. ರಮೇಶ್‌- ವೈ. ಮಹೇಶ್‌, ಮೂರನೇ ಚುನಾವಣೆಯಲ್ಲಿ ಎನ್‌. ಮಂಜುನಾಥ್‌- ಬಿ. ಚಿದಾನಂದ ಆಯ್ಕೆಯಾಗಿದ್ದರು.

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ (Congress) ಹಾಗೂ ಜನತಾ ಪರಿವಾರ ಸತತ ಎರಡನೇ ಬಾರಿಗೆ ಯಾರಿಗೂ ಟಿಕೆಟ್‌ ನೀಡುತ್ತಿರಲಿಲ್ಲ. ಆದರೆ ಅದೇ ಮೊದಲ ಬಾರಿಗೆ ಈ ಸಂಪ್ರದಾಯ ಮುರಿದ ಕಾಂಗ್ರೆಸ್‌ ಎನ್‌. ಮಂಜುನಾಥ್‌ ಅವರಿಗೆ ಸತತ ಎರಡನೇ ಬಾರಿ ಟಿಕೆಟ್‌ ನೀಡಿತ್ತು. ಮತ್ತೊರ್ವ ಆಕಾಂಕ್ಷಿಯಾಗಿದ್ದ ಮಾಜಿ ಸದಸ್ಯ ಸಿ. ರಮೇಶ್‌ ನಾಮಪತ್ರ ಸಲ್ಲಿಸಿ, ವಾಪಸ್‌ ಪಡೆದಿದ್ದರು. ಆದರೆ ಮಂಜುನಾಥ್‌ ಸೋತರು.

ಜೆಡಿಎಸ್‌ಗೆ ಪ್ರಥಮ ಸುತ್ತಿನಲ್ಲಿ ಗೆಲವು, ಬಿಜೆಪಿಗೆ ಅಂತಿಮ ಸುತ್ತಿನಲ್ಲಿ ಜಯ

ಜೆಡಿಎಸ್‌ನ ಸಂದೇಶ್‌ ನಾಗರಾಜ್‌ ಅವರು 3251 ಮತಗಳನ್ನು ಪಡೆದ ಪ್ರಥಮ ಸುತ್ತಿನಲ್ಲಿಯೇ ಜಯ ಗಳಿಸಿದರು. ಬಿಜೆಪಿಯ ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ 1624 ಮತಗಳನ್ನು ಪಡೆದು, ಅಂತಿಮ ಸುತ್ತಿನ ಎಣಿಕೆಯ ನಂತರ ಜಯ ಗಳಿಸಿದರು. ಕಾಂಗ್ರೆಸ್‌ನ ಎನ್‌. ಮಂಜುನಾಥ್‌ 1477 ಮತಗಳನ್ನು ಮಾತ್ರ ಗಳಿಸಿ, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಕ್ಷೇತ್ರದಿಂದ ಎರಡನೇ ಬಾರಿ ಕಣದಲ್ಲಿದ್ದ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ 57 ಮತಗಳನು ಮಾತ್ರ ಪಡೆದರು.

ಉಳಿದಂತೆ ಆರ್‌. ಜಗದೀಶನಾಯಕ- 17, ಲಕ್ಷ್ಮಣೇಗೌಡ- 5, ಕೆ. ಮಹದೇವು- 6, ಜಿ.ಎಂ. ಗಾಡ್ಕರ್‌- 7, ಕೆ. ನಾಗೇಂದ್ರ- 51, ಜಯರಾಜ ಹೆಗಡೆ- 96. ಎಂ.ಎಂ. ಶಾಂತಮೂರ್ತಿ- 6. ಮರಿಸ್ವಾಮಿಗೌಡ- 54, ಕೆ. ಕೆಂಪೇಗೌಡ- 23 ಮತಗಳನ್ನು ಪಡೆದರು.

‘ಜೈ ಚಾಮುಂಡೇಶ್ವರಿ’, ‘ಮಹದೇಶ್ವರ’ !

ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ 2010 ರಲ್ಲಿ ಸ್ಪರ್ಧಿಸಿದ್ದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ಕಾಪಾಡಿದ್ದು ‘ಹಣಬಲ’ ಮಾತ್ರವಲ್ಲದೇ ಚಾಮುಂಡೇಶ್ವರಿ ಹಾಗೂ ಮಹದೇಶ್ವರರ ಭಾವಚಿತ್ರಗಳು!. ಏಕೆಂದರೆ ಮೇಲ್ಮನೆ ಚುನಾವಣೆಯಲ್ಲಿ ಹಣವೊಂದೇ ಕೆಲಸ ಮಾಡುವುದಿಲ್ಲ. ಒಬ್ಬ ಅಭ್ಯರ್ಥಿಗಿಂತ ಮತ್ತೊರ್ವ ಅಭ್ಯರ್ಥಿ ಹೆಚ್ಚು ಹಣ ನೀಡಿದರೆ ಮತದಾರರ ಪ್ರಭುಗಳಾದ ಚುನಾಯಿತ ಪ್ರತಿನಿಧಿಗಳು ಅತ್ತ ವಾಲುವ ಸಾಧ್ಯತೆ ಇದೆ ಎಂಬುದು ಅವರಿಗೆ ಗೊತ್ತಿತ್ತು. ಒಬ್ಬರು ಹತ್ತು ಸಾವಿರ ರು. ನೀಡಿದ್ದರೆ ಮತ್ತೊಬ್ಬರು ಹದಿನೈದು ಸಾವಿರ ರು. ನೀಡಿದ್ದರು. ಆದ್ದರಿಂದ ಅವರಿಬ್ಬರೂ ವೀಳ್ಯದೆಲೆ- ಅಡಕೆಯೊಂದಿಗೆ ದುಡ್ಡು ಕೊಟ್ಟು ಮಾತು ಪಡೆಯಲಿಲ್ಲ. ಬದಲಿಗೆ ಹಣವಿರುವ ಕವರ್‌ ಮೇಲೆ ಚಾಮುಂಡೇಶ್ವರಿ ಹಾಗೂ ಮಹದೇಶ್ವರರ ಭಾವಚಿತ್ರ ಇಟ್ಟರು. ಏಕೆಂದರೆ ಇವತ್ತಿಗೂ ಜನರಿಗೆ ದೇವರು ಎಂದರೇ ಭಯ, ಭಕ್ತಿ ಜಾಸ್ತಿ!. ದೇವರ ಭಾವಚಿತ್ರದೊಂದಿಗೆ ಹಣ ಪಡೆದಿದ್ದರಿಂದ ಅಷ್ಟೇ ಭಯ, ಭಕ್ತಿಯಿಂದ ಈ ಇಬ್ಬರು ಅಭ್ಯರ್ಥಿಗಳ ಪರ ಮತ ಚಲಾಯಿಸಿದರು. ನಂಬಿಕೆಯೇ ದೇವರು ಎಂಬುದು ನಿಜವಾಯಿತು. ಈ ಇಬ್ಬರನ್ನು ಚಾಮುಂಡೇಶ್ವರಿ ಹಾಗೂ ಮಹದೇಶ್ವರರ ಭಾವಚಿತ್ರ ಗೆಲ್ಲಿಸಿತ್ತು!.

Follow Us:
Download App:
  • android
  • ios