Asianet Suvarna News Asianet Suvarna News

Mysuru ಸಂದೇಶ್‌, ಧರ್ಮಸೇನಗೆ 3 ಬಾರಿ ಟಿಕೆಟ್‌ ಸಿಗುವುದೇ?

  • ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ  ಚುನಾವಣೆ
  • ಹಾಲಿ ಸದಸ್ಯರಾದ ಸಂದೇಶ್‌ ನಾಗರಾಜ್‌ ಹಾಗೂ ಆರ್‌. ಧರ್ಮಸೇನ ಅವರಿಗೆ ಮತ್ತೆ ಟಿಕೆಟ್‌ ಸಿಗುವುದೇ
MLC election sandesh nagaraj Dharmasena likely to get tickets 3rd time snr
Author
Bengaluru, First Published Nov 11, 2021, 1:22 PM IST

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.11): ಮೈಸೂರು (Mysuru) ಮತ್ತು ಚಾಮರಾಜನಗರ (Chamarajanagar) ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ  ಡಿ.10 ರಂದು ನಡೆಯುವ ಚುನಾವಣೆಯಲ್ಲಿ (Election) ಹಾಲಿ ಸದಸ್ಯರಾದ ಸಂದೇಶ್‌ ನಾಗರಾಜ್‌ (Sandesh Nagaraj) ಹಾಗೂ ಆರ್‌. ಧರ್ಮಸೇನ ಅವರಿಗೆ ಮತ್ತೆ ಟಿಕೆಟ್‌ ಸಿಗುವುದೇ?.

ಈ ಇಬ್ಬರು ಸತತ ಎರಡು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಏಕೆಂದರೆ ಈ ಕ್ಷೇತ್ರದಲ್ಲಿ ಈವರೆಗೆ ಯಾರೂ ಸತತ ಎರಡು ಬಾರಿ ಆಯ್ಕೆಯಾಗಿರಲಿಲ್ಲ. 2010 ಹಾಗೂ 2016 ರಲ್ಲಿ ಸಂದೇಶ್‌ ನಾಗರಾಜ್‌ ಅವರು ಜೆಡಿಎಸ್‌ ಟಿಕೆಟ್‌ (JDS Ticket) ಮೇಲೆ ಸಾರ್ವತ್ರಿಕ ಚುನಾವಣೆಯಲ್ಲಿ (Election) ಆಯ್ಕೆಯಾಗಿದ್ದರು. ಧರ್ಮಸೇನ 2013 ರಲ್ಲಿ ನಡೆದ ಉಪ ಚುನಾವಣೆ ಹಾಗೂ 2016ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

2005 ರಲ್ಲಿ ಕಾಂಗ್ರೆಸ್‌ (Congress) ಟಿಕೆಟ್‌ ಮೇಲೆ ಆಯ್ಕೆಯಾಗಿದ್ದ ಎನ್‌. ಮಂಜುನಾಥ್‌ ಅವರಿಗೆ 2010ರ ಚುನಾವಣೆಯಲ್ಲಿ ಮತ್ತೆ ಟಿಕೆಟ್‌ ನೀಡಲಾಗಿತ್ತು. ಆದರೆ ಅವರು ಸೋತು ಬಿಜೆಪಿಯ (BJP) ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಆಯ್ಕೆಯಾಗಿದ್ದರು. ಮಲ್ಲಿಕಾರ್ಜುನಪ್ಪ ಅವರು 2013ರ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕೆಜೆಪಿ ಟಿಕೆಟ್‌ ಮೇಲೆ ಸ್ಪರ್ಧಿಸಿದ್ದರಿಂದ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ 2013 ರಲ್ಲಿ ಮೊದಲ ಉಪ ಚುನಾವಣೆ ಎದುರಾಗಿತ್ತು. ಆಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್‌. ಧರ್ಮಸೇನ ಆಯ್ಕೆಯಾಗಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲದೊಂದಿಗೆ ಕೆಜೆಪಿಯಿಂದ ಕಣಕ್ಕಿಳಿದಿದ್ದ ಉದ್ಯಮಿ ಯು,ಎಸ್‌. ಶೇಖರ್‌ ಪರಾಭವಗೊಂಡಿದ್ದರು. 2016 ರಲ್ಲಿ ಬಿಜೆಪಿಯಿಂದ ಹಾಲಿ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಆರ್‌. ರಘು ಕೌಟಿಲ್ಯ ಅವರು ಸ್ಪರ್ಧಿಸಿ, ಸೋತಿದ್ದರು.

ಅವಿಭಜಿತ ಮೈಸೂರು ಜಿಲ್ಲೆ ದ್ವಿಸದಸ್ಯ ಕ್ಷೇತ್ರವಾಗಿತ್ತು. 1997 ರಲ್ಲಿ ಮೈಸೂರಿನಿಂದ ಬೇರ್ಪಡಿಸಿ ಚಾಮರಾಜನಗರ ಜಿಲ್ಲೆಯನ್ನು ರಚಿಸಲಾಗಿದೆ. ಆದರೂ ಇವರೆಡೂ ಜಿಲ್ಲೆಗಳು ಸೇರಿ ದ್ವಿಸದಸ್ಯ ಕ್ಷೇತ್ರವಾಗಿದೆ. ಉಭಯ ಜಿಲ್ಲೆಗಳ ಸಂಸದರು, ಶಾಸಕರು, ನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಸೇರಿ ಇಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಸದಸ್ಯರಿಗೂ ಮತದಾನದ ಹಕ್ಕು ಇದೆಯಾದರೂ ಸದ್ಯಕ್ಕೆ ಅವಧಿ ಮುಗಿದಿದೆ. ಚುನಾವಣೆ ಮುಂದಕ್ಕೆ ಹೋಗಿರುವುದರಿಂದ ಹಾಲಿ ಸದಸ್ಯರು ಇಲ್ಲ.

ಈ ಬಾರಿಯೂ ಧರ್ಮಸೇನ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡ, ಆರೋಗ್ಯ ಇಲಾಖೆಯ ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮ್ಮಯ್ಯ, ಟಿ. ನರಸೀಪುರ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಹದೇವ್‌, ಪಪಂಮಾಜಿ ಅಧ್ಯಕ್ಷ ಟಿ. ಮರಯ್ಯ, ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಮುನಾವರ್‌ ಪಾಷ, ಮೈಮುಲ್‌ ನಿರ್ದೇಶಕ ಚಲುವರಾಜು, ಪ್ರದ್ಯಮ್ನ ಆಲನಹಳ್ಳಿ ಟಿಕೆಟ್‌ ಕೇಳುತ್ತಿದ್ದಾರೆ.

ಬಿಜೆಪಿಯಲ್ಲಿ ಎಂಡಿಎ (MDA), ಮೈಮುಲ್‌ ಹಾಗೂ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷರೂ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಪರಮಾಪ್ತರಾದ ಸಿ. ಬಸವೇಗೌಡರ ಹೆಸರು ಕೇಳಿ ಬಂದಿದೆ. ಅಲ್ಲದೇ ಕಳೆದ ಬಾರಿ ಸ್ಪರ್ಧಿಸಿ, ಸೋತಿರುವ ಹಾಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌. ರಘು ಕೌಟಿಲ್ಯ ಅವರ ಹೆಸರಿದೆ. ಇದಲ್ಲದೇ ಇನ್ನೂ ತಾಂತ್ರಿಕವಾಗಿ ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ ಅವರು ಕೂಡ ಮುಖಂಡರನ್ನು ಭೇಟಿ ಮಾಡಿ, ಟಿಕೆಟ್‌ ಕೇಳುತ್ತಿದ್ದಾರೆ.

ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ, ಕಳೆದ ಬಾರಿ ವರುಣದಿಂದ ಸ್ಪರ್ಧಿಸಿದ್ದ ಅಭಿಷೇಕ್‌, ಅಲ್ಪಕಾಲ ಅರಣ್ಯವಿಹಾರಧಾಮ ಅಧ್ಯಕ್ಷರಾಗಿದ್ದ ವಿವೇಕಾನಂದ ಮೊದಲಾದವರು ಆಕಾಂಕ್ಷಿಗಳು.

ಈವರೆಗೆ ಪ್ರತಿನಿಧಿಸಿದವರು :  1988 ರಿಂದ 1994- ಟಿ.ಎನ್‌. ನರಸಿಂಹಮೂರ್ತಿ (ಕಾಂಗ್ರೆಸ್‌), ವಿ.ಎಚ್‌. ಗೌಡ (ಜನತಾಪಕ್ಷ)

1997 ರಿಂದ 2003- ಸಿ. ರಮೇಶ್‌ (ಕಾಂಗ್ರೆಸ್‌), ವೈ.ಮಹೇಶ್‌ (ಜನತಾದಳ)

2004 ರಿಂದ 2010- ಎನ್‌. ಮಂಜುನಾಥ್‌ (ಕಾಂಗ್ರೆಸ್‌), ಬಿ. ಚಿದಾನಂದ (ಜೆಡಿಎಸ್‌)

2010 ರಿಂದ 2016- ಸಂದೇಶ್‌ ನಾಗರಾಜ್‌ (ಜೆಡಿಎಸ್‌), ಪ್ರೊ.ಕೆ.ಆರ್‌. ಮಲ್ಲಿಕಾರ್ಜನಪ್ಪ (ಬಿಜೆಪಿ),

2013ರ ಉಪ ಚುನಾವಣೆ- ಪ್ರೊ.ಕೆ.ಆರ್‌. ಮಲ್ಲಿಕಾರ್ಜನಪ್ಪ ಅವರ ರಾಜೀನಾಮೆಯಿಂದಾಗಿ ಉಪ ಚುನಾವಣೆಯಲ್ಲಿ ಆರ್‌. ಧರ್ಮಸೇನ (ಕಾಂಗ್ರೆಸ್‌)

2016 ರಿಂದ 2022- ಆರ್‌. ಧರ್ಮಸೇನ (ಕಾಂಗ್ರೆಸ್‌), ಸಂದೇಶ್‌ ನಾಗರಾಜ್‌ (ಜೆಡಿಎಸ್‌)

Follow Us:
Download App:
  • android
  • ios