Asianet Suvarna News Asianet Suvarna News

Bengaluru: ಹಾಫ್‌ ಹೆಲ್ಮೆಟ್‌ ಧರಿಸಿದರೆ ಬೀಳುತ್ತೆ 500 ರೂ. ದಂಡ!

ನಾಗರಿಕರ ಸುರಕ್ಷತೆ ಸಲುವಾಗಿ ಸೀಟ್‌ ಬೆಲ್ಟ್‌ ಕಡ್ಡಾಯಗೊಳಿಸಿ ದಂಡ ಪರಿಷ್ಕರಣೆಗೊಂಡ ಬೆನ್ನಲ್ಲೇ ಕಳಪೆ ಗುಣಮಟ್ಟ ಹೆಲ್ಮೆಟ್‌ ನಿರ್ಮೂಲನೆಗೆ ಮುಂದಾಗಿರುವ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು, ಇನ್ಮುಂದೆ ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸುವವರ ಮೇಲೆ ದಂಡ ಪ್ರಯೋಗಕ್ಕೆ ನಿರ್ಧರಿಸಿದ್ದಾರೆ.

fine of 500 rupees will be imposed for wearing a half helmet at bengaluru gvd
Author
First Published Oct 22, 2022, 2:43 PM IST

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಅ.22): ನಾಗರಿಕರ ಸುರಕ್ಷತೆ ಸಲುವಾಗಿ ಸೀಟ್‌ ಬೆಲ್ಟ್‌ ಕಡ್ಡಾಯಗೊಳಿಸಿ ದಂಡ ಪರಿಷ್ಕರಣೆಗೊಂಡ ಬೆನ್ನಲ್ಲೇ ಕಳಪೆ ಗುಣಮಟ್ಟ ಹೆಲ್ಮೆಟ್‌ ನಿರ್ಮೂಲನೆಗೆ ಮುಂದಾಗಿರುವ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು, ಇನ್ಮುಂದೆ ಕಳಪೆ ಗುಣಮಟ್ಟದ ಹೆಲ್ಮೆಟ್‌ ಧರಿಸುವವರ ಮೇಲೆ ದಂಡ ಪ್ರಯೋಗಕ್ಕೆ ನಿರ್ಧರಿಸಿದ್ದಾರೆ. ಕಳಪೆ ಹೆಲ್ಮೆಟ್‌ ಧರಿಸುವುದನ್ನು ನಿರ್ಬಂಧಿಸಿ ದಂಡ ವಿಧಿಸಲು ವಿಶೇಷ ನಿಯಮ ಅಥವಾ ಕಾನೂನು ಜಾರಿಯಲ್ಲಿಲ್ಲ. ಹೀಗಾಗಿ ಹಾಫ್‌ ಅಥವಾ ಕಳಪೆ ಹೆಲ್ಮೆಟ್‌ ಧರಿಸಿದರೆ ಅಂಥವರಿಗೆ ಹೆಲ್ಮೆಟ್‌ ಧರಿಸಿಲ್ಲ ಎಂದು ಪರಿಗಣಿಸಿ ಪೊಲೀಸರು 500 ದಂಡ ವಿಧಿಸಲು ಮುಂದಾಗಿದ್ದಾರೆ.

ಮೊದಲ ಹಂತದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಹಾಫ್‌ ಹೆಲ್ಮೆಟ್‌ ಧರಿಸುವ ಪೊಲೀಸರಿಗೆ ವಿಶೇಷ ಕಾರ್ಯಾಚರಣೆ ಕೈಗೊಂಡು ಬಿಸಿ ಮುಟ್ಟಿಸಿರುವ ಸಂಚಾರ ವಿಭಾಗದ ಪೊಲೀಸರು, ಇದುವರೆಗೆ 140 ಪೊಲೀಸರಿಗೆ ದಂಡ ವಿಧಿಸಿದ್ದಾರೆ. ತಮ್ಮ ಇಲಾಖೆಯಲ್ಲಿ ಹಾಫ್‌ ಹೆಲ್ಮೆಟ್‌ ಬಳಕೆ ನಿಷೇಧ ನಿಯಮವನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕಿಳಿಸಿದ ಬಳಿಕ ಪೊಲೀಸರು ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ದಂಡ ವಿಧಿಸಲು ತೀರ್ಮಾನಿಸಿದ್ದಾರೆ. ಈ ಹಿನ್ನಲೆಯಲ್ಲಿ ನವೆಂಬರ್‌ನಲ್ಲಿ ಹೆಲ್ಮೆಟ್‌ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.

Bengaluru: ಹಾಫ್ ಹೆಲ್ಮೆಟ್ ಧರಿಸಿದ ಪೇದೆಗೂ ದಂಡ: ಆದರೂ ಜನರ ತರಾಟೆ

ಅರ್ಧ ಅಥವಾ ಹೆಲ್ಮೆಟ್‌ ಬಳಕೆಯನ್ನು ಸ್ವಯಂ ಜನರೇ ನಿರ್ಬಂಧಿಸಿಕೊಳ್ಳಬೇಕಿದೆ. ಐಎಸ್‌ಐ ಮುದ್ರೆ ಹೊಂದಿರುವ ಗುಣಮಟ್ಟದ ಹೆಲ್ಮೆಟ್‌ಗಳನ್ನೇ ಜನರು ಬಳಸಬೇಕು. ಕಳಪೆ ಅಥವಾ ಹಾಫ್‌ ಹೆಲ್ಮೆಟ್‌ ಬಗ್ಗೆ ಜಾಗೃತಿ ಅಭಿಯಾನ ಮುಗಿದ ಬಳಿಕ ತಪ್ಪು ಮಾಡಿದವರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ಮೊದಲು ನಮ್ಮ ಮನೆಯನ್ನು (ಪೊಲೀಸ್‌ ಇಲಾಖೆ) ಸ್ವಚ್ಛಗೊಳಿಸಬೇಕಿತ್ತು. ಅಂತೆಯೇ ಹಾಫ್‌ ಹೆಲ್ಮೆಟ್‌ ಧರಿಸಿದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಪೊಲೀಸರಿಗೆ ತಾಕೀತು ಮಾಡಲಾಯಿತು. ಈ ಸೂಚನೆಯನ್ನು ಸಿಬ್ಬಂದಿ ಪಾಲಿಸಿದರು ಎಂದು ಜಂಟಿ ಪೊಲೀಸ್‌ ಆಯುಕ್ತ ಸಂಚಾರ ರವಿಕಾಂತೇಗೌಡ ತಿಳಿಸಿದ್ದಾರೆ.

ಕಾಯ್ದೆ ಏನು ಹೇಳುತ್ತೆ?: ಕಳಪೆ ಹೆಲ್ಮೆಟ್‌ ಧರಿಸುವವರ ವಿರುದ್ಧ ಪೊಲೀಸರು, ಈಗ ಹೆಲ್ಮೆಟ್‌ ಧರಿಸದವರು ಎಂದು ಪರಿಗಣಿಸಿ ದಂಡ ವಿಧಿಸಲಿದ್ದಾರೆ. ಮೋಟಾರು ಕಾಯ್ದೆ 129 ಐಎಂಎ ಪ್ರಕಾರ ಬೈಕ್‌ ಸವಾರ ಹೆಲ್ಮೆಟ್‌ ಧರಿಸದಿರುವುದು ತಪ್ಪು ಎಂದು ಹೇಳುತ್ತದೆ. ಈ ತಪ್ಪಿಗೆ ಸೆಕ್ಷನ್‌ 194ಡಿ ಅನ್ವಯ .500 ದಂಡ ವಿಧಿಸಲಾಗುತ್ತದೆ. ಅದೇ ರೀತಿ ಹಿಂಬದಿ ಸವಾರನಿಗೆ ಕರ್ನಾಟಕ ಮೋಟಾರು ವಾಹನ ನಿಯಮ-1 ಅನ್ವಯ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

50 ಜಂಕ್ಷನ್‌ಗಳಲ್ಲಿ ಕ್ಯಾಮರಾ ಕಣ್ಣು: ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಕೂಡಾ ಕಳಪೆ ಹೆಲ್ಮೆಟ್‌ ಧರಿಸುವವರ ಮೇಲೆ ಕ್ಯಾಮರಾಗಳು ಹದ್ದಿನ ಕಣ್ಣಿಡಲಿವೆ. ಈಗಾಗಲೇ ಈ ಕ್ಯಾಮರಾಗಳನ್ನು ಆಪ್‌ಡೇಟ್‌ ಮಾಡಲಾಗಿದೆ. ಹಾಪ್‌ ಹೆಲ್ಮೆಟ್‌ ಹಾಕಿದ್ದರೆ ಅಂಥವರನ್ನು ಹೆಲ್ಮೆಟ್‌ ಧರಿಸದಿರುವವರು ಎಂದು ಫೋಟೋ ಕ್ಲಿಕಿಸಿ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ)ಗೆ ರವಾನೆಯಾಗಲಿದೆ. ಈ ಭಾವಚಿತ್ರದ ಆಧರಿಸಿ ಆ ಬೈಕ್‌ ಸವಾರ ಅಥವಾ ಹಿಂಬದಿ ಸವಾರನಿಗೆ ದಂಡ ವಿಧಿಸಿ ನೋಟಿಸನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಯಾವುದು ಕಳಪೆ ಹೆಲ್ಮೆಟ್‌?: ಕಿವಿ ಮುಚ್ಚುವಷ್ಟುಇಲ್ಲದ ಹಾಗೂ ಐಎಸ್‌ಐ ಮುದ್ರೆ ಹೊಂದಿಲ್ಲದ ಹೆಲ್ಮೆಟ್‌ಗಳನ್ನು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳೆಂದು ಪೊಲೀಸರು ಪರಿಗಣಿಸಿದ್ದಾರೆ. ಹೆಲ್ಮೆಟ್‌ ಖರೀದಿಸುವ ಮುನ್ನ ಐಎಎಸ್‌ ಮುದ್ರೆ ಪರಿಶೀಲಿಸುವಂತೆ ಗ್ರಾಹಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಎಚ್ಚರ ಎಚ್ಚರ... ಸೀಟ್‌ ಬೆಲ್ಟ್‌ ಧರಿಸದಿದ್ದರೆ ಇನ್ನು 1000 ರು. ದಂಡ!

ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಹೆಲ್ಮೆಟ್‌ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕಳಪೆ ಹೆಲ್ಮೆಟ್‌ ನಿಷೇಧ ನಿಯಮವನ್ನು ಜಾರಿಗೊಳಿಸಿದ್ದು, ನಮ್ಮ ಮನೆ ಸ್ವಚ್ಛವಾದ ಬಳಿಕ ಸಾರ್ವಜನಿಕರಿಗೆ ದಂಡ ವಿಧಿಸುತ್ತೇವೆ.
-ಡಾ.ಬಿ.ಆರ್‌.ರವಿಕಾಂತೇಗೌಡ, ಜಂಟಿ ಪೊಲೀಸ್‌ ಆಯುಕ್ತ, ಸಂಚಾರ.

Follow Us:
Download App:
  • android
  • ios