ಮಂಗಳೂರು(ಡಿ.18): ದ.ಕ. ಜಿಲ್ಲೆಯ ಬ್ರಹ್ಮರಕೂಟ್ಲು, ತಲಪಾಡಿ ಮತ್ತು ಸುರತ್ಕಲ್‌ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಬಳಕೆದಾರರ ಸಂಖ್ಯೆ ನಾಲ್ಕು ದಿನಗಳಿಂದೀಚೆಗೆ ಸುಮಾರು ಶೇ. 40 ಕ್ಕೆ ಏರಿಕೆಯಾಗಿದೆ. ಜೊತೆಗೆ ಫಾಸ್ಟ್ಯಾಗ್‌ ದುರುಪಯೋಗ ನಡೆಸುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಇದೇ ವೇಳೆ ತಲಪಾಡಿ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯ ವಾಹನಗಳಿಗೆ ಪಾಸ್‌ ವಿತರಿಸಲು ಚಿಂತಿಸಲಾಗಿದೆ.

ಸುರತ್ಕಲ್‌ ಟೋಲ್‌ನಲ್ಲಿ ಕಾರಿನ ಫಾಸ್ಟ್ಯಾಗ್‌ ಬಳಸಿ ಮರಳು ಸಾಗಾಟ ನಡೆಸುವ ಲಾರಿಗಳು ಪ್ರಯಾಣ ನಡೆಸಿದ ನಾಲ್ಕು ಪ್ರಕರಣಗಳನ್ನು ಮಂಗಳವಾರ ಪತ್ತೆಹಚ್ಚಲಾಗಿದೆ. ಈ ರೀತಿ ಮೋಸ ಮಾಡುವ ಲಾರಿಗಳ ನಿರ್ವಾಹಕರು ಕೈಯಲ್ಲಿ ಕಾರಿನ ಫಾಸ್ಟ್ಯಾಗ್‌ ತೋರಿಸಿ ಟೋಲ್‌ ದಾಟುತ್ತಿದ್ದ ಸಂದರ್ಭ ಸ್ಥಳದಲ್ಲಿದ್ದ ಟೋಲ್‌ ನಿರ್ವಾಹಕರ ಸೂಕ್ಷ್ಮ ತಪಾಸಣೆ ಸಂದರ್ಭ ಸಿಕ್ಕಿಬಿದ್ದಿದ್ದಾರೆ. ಇವರು ಫಾಸ್ಟ್ಯಾಗ್‌ ಅನ್ನು ಲಾರಿಯ ಎದುರಿನ ಗ್ಲಾಸಿಗೆ ಅಂಟಿಸದೆ ಟೋಲ್‌ ದಾಟುವ ಸಂದರ್ಭ ಕೈಯಲ್ಲಿ ಹಿಡಿದುಕೊಂಡು ಎದುರು ತೋರಿಸುತ್ತಿದ್ದರು.

ಎಲ್ಲ ಇಲಾಖೆಗಳಲ್ಲೂ ಇ-ಆಫೀಸ್‌ ಕಡ್ಡಾಯ

ಕಾರಿನ ಒಂದು ಪ್ರಯಾಣಕ್ಕೆ 50 ರು. ಶುಲ್ಕವಿದ್ದು, ಲಾರಿಗೆ 175 ರು. ಇದೆ. ಮರಳಿನ ಲಾರಿಗಳು ತಮ್ಮ ಮೋಸದ ಆಟದಲ್ಲಿ ಒಂದು ಪ್ರಯಾಣದಲ್ಲೇ 125 ರು. ಉಳಿತಾಯ ಮಾಡಿಕೊಳ್ಳುತ್ತಿದ್ದರು. ಅಲ್ಲದೆ ಕೆಎ 19 ನೋಂದಣಿ ಹೊಂದಿರುವ ವಾಹನಗಳಿಗೆ ಟೋಲ್‌ಗಳಲ್ಲಿ ವಿನಾಯಿತಿ ಇದ್ದು, ಕೆಲವರು ಸುಳ್ಳು ದಾಖಲೆ ತೋರಿಸಿ ಮಂಗಳವಾರ ಟೋಲ್‌ ದಾಟಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ಸ್ಥಳೀಯ ವಿನಾಯ್ತಿ ರದ್ದತಿ ಸಂಭವ:

ತಲಪಾಡಿ ಟೋಲ್‌ನಲ್ಲಿ ಕಳೆದ ಮೂರು ದಿನಗಳಿಂದ ಕಗ್ಗಂಟಾಗಿದ್ದ ಖಾಸಗಿ ಬಸ್‌ಗಳ ಟೋಲ್‌ ಪ್ರವೇಶ ವಿನಾಯ್ತಿಯಲ್ಲಿ ಮುಂದುವರಿದಿದೆ. ಆದರೆ ಡಿ.18ರಂದು ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ ನಡೆಸಿ ಖಾಸಗಿ ಬಸ್‌ಗಳಿಗೂ ಟೋಲ್‌ ಪಾಸ್‌ ನೀಡುವ ಬಗ್ಗೆ ಗುತ್ತಿಗೆದಾರರು ಚಿಂತನೆ ನಡೆಸಿದ್ದಾರೆ. ಇದರೊಂದಿಗೆ ಸ್ಥಳೀಯ ವಾಹನಗಳ ವಿನಾಯ್ತಿ ರದ್ದುಗೊಳ್ಳಲಿದ್ದು, ರಿಯಾಯ್ತಿ ದರ ಇದೆಯೇ? ಇದ್ದರೆ ಎಷ್ಟುದರ ಎಂಬುದು ಸ್ಪಷ್ಟವಾಗಿಲ್ಲ.

ಬ್ರಹ್ಮರಕೂಟ್ಲುವಿನಲ್ಲಿ ಗಮನಾರ್ಹ ಯಾವುದೇ ಪ್ರಕರಣಗಳು ಗಮನಕ್ಕೆ ಬಂದಿಲ್ಲ. ಫಾಸ್ಟ್ಯಾಗ್‌ ರೀಡ್‌ ಆದ ಕೂಡಲೇ ಎದುರಿನ ಭೂಮ್‌ ಬ್ಯಾರಿಯರ್‌ (ಸ್ವಯಂ ಚಾಲಿತ ಗೇಟ್‌) ತೆರೆದುಕೊಳ್ಳುವ ಮತ್ತು ಬಳಿಕ ಮುಚ್ಚಿಕೊಳ್ಳುವ ವ್ಯವಸ್ಥೆ ದೀರ್ಘ ಕಾಲದ ಬಳಿಕ ಎರಡು- ಮೂರು ದಿನಗಳಲ್ಲಿ ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಸ್ಥಾಪನೆಯಾಗಲಿದೆ. ಫಾಸ್ಟ್ಯಾಗ್‌ ವ್ಯವಸ್ಥೆಗೆ ನಿಧಾನವಾಗಿ ವಾಹನ ಚಾಲಕರು ಹೊಂದಿಕೊಳ್ಳುತ್ತಿದ್ದಾರೆ. ಆದರೆ ನಗದು ಪಾವತಿ ಸಾಲು ಬಿಟ್ಟು ಫಾಸ್ಟ್ಯಾಗ್‌ ಸಾಲಿನಲ್ಲಿ ಬಂದು ದುಪ್ಪಟ್ಟು ದಂಡ ಪಾವತಿಸುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಟೋಲ್‌ ಪ್ಲಾಜಾ ಸಿಬ್ಬಂದಿ ಹೇಳುತ್ತಿದ್ದಾರೆ.

ಪೌರತ್ವ ಕಾಯ್ದೆ ತೀವ್ರ ವಿರೋಧ: ಬೆಳಗಾವಿಯಲ್ಲಿ ಕಲ್ಲು ತೂರಾಟ, ಪ್ರಕ್ಷುಬ್ಧ ವಾತಾವರಣ

ಟೋಲ್‌ ಪ್ಲಾಜಾಗಳಲ್ಲಿ ನಿಗದಿಯಂತೆ ಸುಂಕ ವಸೂಲಿ ನಡೆಯುತ್ತಿದೆ. ಫಾಸ್ಟ್ಯಾಗ್‌ ಮತ್ತು ನಗದು ಪಾವತಿ ಲೇನ್‌ಗಳಲ್ಲಿ ಯಾವುದೇ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಸ್ಥಳೀಯ ವಾಹನಗಳಿಗೆ ವಿನಾಯ್ತಿ ವಿಚಾರದಲ್ಲಿ ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಸಿಂಧು ರೂಪೇಶ್ ಹೇಳಿದ್ದಾರೆ.