ಬೆಳಗಾವಿ(ಡಿ.18): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮತ್ತು ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸರು ನಡೆಸಿದ ಲಾಠಿ ಚಾರ್ಜ್‌ ಖಂಡಿಸಿ ರಾಜ್ಯದಲ್ಲಿ ಮಂಗಳವಾರವೂ ಪ್ರತಿಭಟನೆ ಮುಂದುವರಿದಿದೆ. ಬೆಳಗಾವಿಯಲ್ಲಿ ಕಲ್ಲು ತೂರಾಟ ನಡೆದಿದೆ. 8 ವಾಹನಗಳು ಹಾಗೂ ಒಂದು ಎಟಿಎಂಗೆ ಹಾನಿಯಾಗಿದೆ.

ಉಳಿದಂತೆ ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು, ಕೊಪ್ಪಳ, ಮಂಗಳೂರಲ್ಲಿ ಪ್ರತಿಭಟನೆ ನಡೆಸಲಾಗಿದೆ. ಬೆಳಗಾವಿ ಹೊರತುಪಡಿಸಿ ಉಳಿದೆಡೆ ಅಹಿತಕರ ಘಟನೆ ನಡೆದಿಲ್ಲ.

6 ಬಸ್‌ಗಳಿಗೆ ಹಾನಿ:

ಬೆಳಗಾವಿಯಲ್ಲಿ ಪ್ರತಿಭಟನಾ ರಾರ‍ಯಲಿಯ ಮುಕ್ತಾಯದ ನಂತರ ಕೆಲ ಕಿಡಿಗೇಡಿಗಳು ಶಿವಾಜಿ ನಗರ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ವಿವಿಧೆಡೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಆರು ಸಾರಿಗೆ ಬಸ್‌ಗಳು, ಒಂದು ಕಾರು, ಒಂದು ತೈಲ ಹೊತ್ತ ಟ್ಯಾಂಕರ್‌ ಮತ್ತು ಒಂದು ಎಟಿಎಂಗೆ ಹಾನಿಯಾಗಿದೆ. ಮತ್ತೊಂದೆಡೆ ಕಲ್ಲು ತೂರಾಟ ನಡೆಯುತ್ತಿದ್ದಂತೆ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ತದನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಮಾರುಕಟ್ಟೆಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲಿ ಮುಸ್ಲಿಂ ಮುತ್ತಹೀದಾ ಕೌನ್ಸಿಲ್‌ ಸೇರಿದಂತೆ ವಿವಿಧ ಮುಸ್ಲಿಂ, ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ರಾರ‍ಯಲಿ ನಡೆಯಿತು. ರಾರ‍ಯಲಿಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಸಮುದಾಯದವರು ಕಪ್ಪು ಪಟ್ಟಿಧರಿಸಿ ಪ್ರತಿಭಟನೆ ನಡೆಸಿದರು. ರಾಯಚೂರಲ್ಲಿ ನಗರದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್‌, ಎನ್‌ಆರ್‌ಸಿ ಮತ್ತು ಸಿಎಬಿ ವಿರೋಧಿಸಿ ಉತ್ತರ ಭಾರತ ಹೊತ್ತಿ ಉರಿಯುತ್ತಿದೆ. ಕರ್ನಾಟಕದಲ್ಲಿ ಜಾರಿಗೊಳಿಸಿದರೆ ಇಲ್ಲೂ ಹೊತ್ತಿ ಉರಿದೀತು. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.