Asianet Suvarna News Asianet Suvarna News

ಫಾಸ್ಟ್‌ಟ್ಯಾಗ್ ದಟ್ಟಣೆ : ವಿಮಾನ ಹೋಗುತ್ತೆಂದು ಅಂಗಲಾಚಿದ ಮಹಿಳೆ

ಕೇಂದ್ರ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಟೋಲ್‌ಪ್ಲಾಜಾಗಳಲ್ಲೂ ಭಾನುವಾರದಿಂದ ಶೇ.75ರಷ್ಟುದ್ವಾರಗಳನ್ನು ಫಾಸ್ಟ್‌ಟ್ಯಾಗ್‌ ಇರುವ ವಾಹನಗಳಿಗೆ, ಶೇ.25ರಷ್ಟು ದ್ವಾರಗಳನ್ನು ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಳ್ಳದ ವಾಹನಗಳ ಸಂಚಾರಕ್ಕೆ ನಿಗದಿಪಡಿಸಲಾಗಿದೆ. 

Fastag Heavy Traffic Jam In Toll
Author
Bengaluru, First Published Dec 16, 2019, 8:46 AM IST

ಬೆಂಗಳೂರು [ಡಿ.16]:  ನಗರದ ಹೊರವಲಯದ ಟೋಲ್‌ಪ್ಲಾಜಾಗಳ ಮುಕ್ಕಾಲು ಭಾಗ ದ್ವಾರಗಳಲ್ಲಿ ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಂಡ ವಾಹನಗಳು ಸರಾಗವಾಗಿ ಚಲಿಸುತ್ತಿದ್ದರೆ, ಉಳಿದ ಕೆಲವೇ ದ್ವಾರಗಳಲ್ಲಿ ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿನಿಂತ ಫಾಸ್ಟ್‌ಟ್ಯಾಗ್‌ ರಹಿತ ವಾಹನಗಳು.

ಕೆಲವು ವಾಹನಗಳಿಂದ ಇಳಿದು ಬರುತ್ತಿದ್ದ ಪ್ರಯಾಣಿಕರು ದೂರ ಹೋಗಬೇಕು, ತುರ್ತು ಕೆಲಸವಿದೆ. ದಟ್ಟಣೆ ಇಲ್ಲದ ಪಕ್ಕದ ಸಾಲಲ್ಲಿ ಹೋಗೋಕೆ ಬಿಡಿ. ಬೇಕಾದ್ರೆ ಹೆಚ್ಚು ಶುಲ್ಕ ಕಟ್ಟುತ್ತೇವೆ... ದಯವಿಟ್ಟು ನಮ್ಮದೊಂದು ಗಾಡಿ ಬಿಡಿ. ತಡವಾದ್ರೆ ವಿಮಾನ ಹೊರಟೋಗುತ್ತೆ....

ಕೇಂದ್ರ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಟೋಲ್‌ಪ್ಲಾಜಾಗಳಲ್ಲೂ ಭಾನುವಾರದಿಂದ ಶೇ.75ರಷ್ಟುದ್ವಾರಗಳನ್ನು ಫಾಸ್ಟ್‌ಟ್ಯಾಗ್‌ ಇರುವ ವಾಹನಗಳಿಗೆ, ಶೇ.25ರಷ್ಟು ದ್ವಾರಗಳನ್ನು ಫಾಸ್ಟ್‌ಟ್ಯಾಗ್‌ ಅಳವಡಿಸಿಕೊಳ್ಳದ ವಾಹನಗಳ ಸಂಚಾರಕ್ಕೆ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ನಗರದ ಹೊರವಲಯದ ಪ್ರಮುಖ ಮೂರು ಟೋಲ್‌ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳ ದ್ವಾರಗಳಲ್ಲಿ ಕಂಡುಬಂದು ಚಿತ್ರಣವಿದು.

ಭಾನುವಾರ ಸಾರ್ವತ್ರಿಕ ರಜೆ ಪರಿಣಾಮ ಬೆಳಗ್ಗೆಯಿಂದಲೇ ನಗರದಿಂದ ಹೊರಗೆ ತೆರಳುವ ಹಾಗೂ ಬರುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ ನಗರದ ಬೆಂಗಳೂರು- ತುಮಕೂರು ರಸ್ತೆಯ ನೆಲಮಂಗಲ, ಬೆಂಗಳೂರು- ಹೈದರಾಬಾದ್‌ ರಸ್ತೆಯ ವಿಮಾನ ನಿಲ್ದಾಣ ರಸ್ತೆ, ಹೊಸೂರು ರಸ್ತೆ, ಹೊಸಕೋಟೆ ಟೋಲ್‌ ಪ್ಲಾಜಾಗಳ ಬಳಿ ವಾಹನ ದಟ್ಟಣೆ ಉಂಟಾಗಿತ್ತು. ಈ ನಡುವೆ ಟೋಲ್‌ ಸಿಬ್ಬಂದಿ ಶೇ.75 ಮತ್ತು ಶೇ.25ರಷ್ಟುಮೀಸಲು ದ್ವಾರದ ನಿಯಮ ಪಾಲಿಸಲು ಹೋಗಿ ಹೈರಾಣಾದರು. ಟೋಲ್‌ಪ್ಲಾಜಾದ 500 ಮೀಟರ್‌ ದೂರದಲ್ಲೇ ಫಾಸ್ಟ್‌ಟ್ಯಾಗ್‌ ಇರುವ ಹಾಗೂ ಇಲ್ಲದ ವಾಹನಗಳ ದ್ವಾರ ಎಂಬ ಪ್ರತ್ಯೇಕ ನಾಮಫಲಕ ಹಾಕುವ ಜೊತೆಗೆ ಟೋಲ್‌ ಸಿಬ್ಬಂದಿ ಮಾರ್ಗದರ್ಶನ ನೀಡುತ್ತಿದ್ದರು. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳೇ ಹೆಚ್ಚಾಗಿದ್ದರಿಂಂದ ವಾಹನ ಸವಾರರು ಹೈರಾಣಾಗಿ ಟೋಲ್‌ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದು ಕಂಡುಬಂತು.

ಮೈಸೂರು: ರೀಡಿಂಗ್ ಮೆಷಿನ್ ಇಲ್ಲ, ಫಾಸ್ಟ್‌ ಟ್ಯಾಗ್ ಅಳವಡಿಸಿದ ವಾಹನಗಳಿಗೆ ಫ್ರೀ ಎಂಟ್ರಿ...

ಕೆಲವೆಡೆ ಸಾಲು ದೊಡ್ಡದಾಗಿ ಫಾಸ್ಟ್‌ಟ್ಯಾಗ್‌ ಇರುವ ವಾಹನಗಳ ಸಂಚಾರಕ್ಕೂ ತೊಂದರೆಯಾಗುವ ಲಕ್ಷಣಗಳು ಕಂಡುಬಂದಾಗ ಎಚ್ಚೆತ್ತುಕೊಂಡ ಸಿಬ್ಬಂದಿ ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳನ್ನೂ ಶೇ.75ರಷ್ಟುದ್ವಾರಗಳಲ್ಲಿ ಬಿಟ್ಟು ಪರಿಸ್ಥಿತಿ ನಿಭಾಯಿಸಿದರು.

ವಿಮಾನ ತಪ್ಪುವ ಆತಂಕ

ವಿಮಾನ ನಿಲ್ದಾಣದ ಮಾರ್ಗದ ಸಾದಹಳ್ಳಿ ಟೋಲ್‌ ಪ್ಲಾಜಾದಲ್ಲಿ ಸೀಮಿತ ದ್ವಾರಗಳಲ್ಲಿ ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳ ಸಾಲು ಕಿಲೋ ಮೀಟರ್‌ನಷ್ಟುದೊಡ್ಡದಾಗಿತ್ತು. ಫಾಸ್ಟ್‌ ಟ್ಯಾಗ್‌ ಇಲ್ಲದ ವಾಹನಗಳಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಪ್ರಯಾಣಿಕರು ಈ ಸರತಿ ಸಾಲಿನಲ್ಲಿ ಸಿಲುಕಿ ಪಡಿಪಾಟಲು ಪಟ್ಟರು. ಟೋಲ್‌ ಪ್ಲಾಜಾ ದಾಟಿಕೊಂಡು ಹೋಗುವ ವೇಳೆಗೆ ವಿಮಾನ ತಪ್ಪುವ ಆತಂಕದಿಂದ ಟೋಲ್‌ ಪ್ಲಾಜಾ ಸಿಬ್ಬಂದಿ ಬಳಿ ತೆರಳಿ ಫಾಸ್ಟ್‌ ಟ್ಯಾಗ್‌ ದ್ವಾರಗಳಲ್ಲೂ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಬಸ್‌ಗಳಿಗೆ ಅಳವಡಿಕೆಗೆ ಚಾಲನೆ

ಕೆಎಸ್‌ಆರ್‌ಟಿಸಿಯ ಐದು ಸಾವಿರ ಬಸ್‌ಗಳು ಪ್ರತಿದಿನ ರಾಷ್ಟ್ರೀಯ ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುವುದರಿಂದ ಎಲ್ಲ ಬಸ್‌ಗಳಿಗೆ ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ಗಡುವು ವಿಸ್ತರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ಜ.15ರ ವರೆಗೂ ಗಡುವು ವಿಸ್ತರಿಸಲಾಗಿದೆ. ಈಗಾಗಲೇ ಬಸ್‌ಗಳಿಗೆ ಫಾಸ್ಟ್‌ ಟ್ಯಾಗ್‌ ಅಳವಡಿಸುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ಚಾಲನೆ ನೀಡಲಾಗಿದೆ. ನಿಗದಿತ ಗಡುವಿನೊಳಗೆ ಫಾಸ್ಟ್‌ ಟ್ಯಾಗ್‌ ಅಳವಡಿಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟೋಲ್‌ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆಗೆ ಅನುಗುಣವಾಗಿ ಈ ಮೀಸಲು ನಿಯಮ ಅನುಸರಿಸಲಾಗುತ್ತಿದೆ. ವಾಹನಗಳ ದಟ್ಟಣೆ ಹೆಚ್ಚಾದಾಗ ಫಾಸ್ಟ್‌ ಟ್ಯಾಗ್‌ ದ್ವಾರಗಳಲ್ಲೂ ಫಾಸ್ಟ್‌ ಟ್ಯಾಗ್‌ ರಹಿತ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಫಾಸ್ಟ್‌ ಟ್ಯಾಗ್‌ ವಾಹನಗಳಿಗೆ ಕೊಂಚ ತೊಂದರೆಯಾಗುತ್ತಿದೆ. ಶೀಘ್ರದಲ್ಲೇ ಈ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ.

-ಶ್ರೀಧರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ.

Follow Us:
Download App:
  • android
  • ios