ಮೈಸೂರು : ತಂಬಾಕು ದರ ದಿಢೀರ್ ಕುಸಿತ: ರೈತರ ಆಕ್ರೋಶ
ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ದರ ದಿಢೀರ್ ಕುಸಿತ ಹಿನ್ನೆಲೆ ಆಕ್ರೊಶಗೊಂಡ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾಜ್‌ರ್ ನಡೆಸಿ ಚದುರಿಸಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಬಳಿ ನಡೆಯಿತು.
ಪಿರಿಯಾಪಟ್ಟಣ (ಅ.20): ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ದರ ದಿಢೀರ್ ಕುಸಿತ ಹಿನ್ನೆಲೆ ಆಕ್ರೊಶಗೊಂಡ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಚಾಜ್‌ರ್ ನಡೆಸಿ ಚದುರಿಸಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಬಳಿ ನಡೆಯಿತು.
ತಂಬಾಕು (Tobavco) ಹರಾಜು ಮಾರುಕಟ್ಟೆ (Market) ಪ್ರಾರಂಭವಾದ ಅ. 10ರಂದು ಮೊದಲ ದಿನ ಉತ್ತಮ ಗುಣಮಟ್ಟದ ತಂಬಾಕಿಗೆ ಕೆಜಿಗೆ ರು. 200 ದರ ಸಿಕ್ಕಿದ್ದು, ಪ್ರತಿನಿತ್ಯ ದರದಲ್ಲಿ ಏರಿಕೆಯಾಗುತ್ತಿದ್ದು, ಅ. 18 ರಂದು ಗರಿಷ್ಠ ರು. 260 ರ ಗಡಿ ದಾಟಿತ್ತು. ಇದರಿಂದ ತಂಬಾಕು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು, ಆದರೆ ಬುಧವಾರ ಮಾರುಕಟ್ಟೆಪ್ರಾರಂಭವಾದಾಗ ಒಂದೇ ಬಾರಿಗೆ ದರ ಕುಸಿತವಾಗಿ ಕೆಜಿಗೆ ರೂ.231 ತಲುಪಿದಾಗ ನೊಂದ ರೈತರು ಮಂಡಳಿ ಅಧಿಕಾರಿಗಳು ಹಾಗೂ ಖರೀದಿದಾರ ಕಂಪನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ತಂಬಾಕು ಮಂಡಳಿ ಅಧಿಕಾರಿಗಳು ರೈತರನ್ನು ಮನವೊಲಿಸಲು ಮುಂದಾದರೂ ಜಗ್ಗದ ರೈತರು ಮಾತಿನ ವಾಗ್ವಾದ ಮುಂದುವರಿಸಿದಾಗ ಗೊಂದಲದ ವಾತಾವರಣದಿಂದಾಗಿ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು.
ಇದರಿಂದ ಆಕ್ರೋಶಗೊಂಡ ರೈತರು ಹರಾಜು ಮಾರುಕಟ್ಟೆಮುಂಭಾಗದ ಬೆಟ್ಟದಪುರ-ಪಿರಿಯಾಪಟ್ಟಣ ಹೆದ್ದಾರಿಯಲ್ಲಿ ಕುಳಿತು ಏಕಾಏಕಿ ಪ್ರತಿಭಟನೆಗೆ ಮುಂದಾದರು, ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರು, ರೈತರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದಾಗ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿ.ಮೀ ಗಟ್ಟಲೆ ವಾಹನಗಳು ನಿಂತು ಸಂಚಾರ ಅಸ್ತವ್ಯಸ್ತವಾದ ಹಿನ್ನೆಲೆ ವಾಹನ ಸವಾರರು ಬೇಸತ್ತು ಬೇರೆ ಮಾರ್ಗಗಳಲ್ಲಿ ಬಳಸಿಕೊಂಡು ಸಂಚರಿಸಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಇನ್ಸ್‌ಪೆಕ್ಟರ್ ಜಗದೀಶ್ ಅವರು ಪ್ರತಿಭಟನಾ ನಿರತರಿಗೆ ಮೈಕ್ ಮೂಲಕ ಎಚ್ಚರಿಕೆ ನೀಡಿ, ರಸ್ತೆ ತಡೆ ಮಾಡಿ ಪ್ರತಿಭಟಿಸುವುದು ಬೇಡ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ, ರಸ್ತೆ ತಡೆ ಕೈ ಬಿಟ್ಟು ಮಂಡಳಿ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ನೀಡುತ್ತೇವೆ ಎಂದು ತಿಳಿ ಹೇಳಿದರು, ಪ್ರತಿಭಟನಾ ನಿರತರು ಜಗ್ಗದ ಕಾರಣ ಲಾಠಿ ಚಾಜ್‌ರ್ ನಡೆಸಿ ರೈತ ಮುಖಂಡ ಶ್ರೀನಿವಾಸ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ವೇಳೆ ಕೆಲ ರೈತರು ಪೊಲೀಸರ ನಡೆಗೆ ಖಂಡನೆ ವ್ಯಕ್ತಪಡಿಸಿದರು ಪ್ರತಿಭಟನೆ ಮಾಡುವುದಿದ್ದರೆ ಅನುಮತಿ ಪಡೆದು ತಂಬಾಕು ಮಂಡಳಿ ಆವರಣದಲ್ಲಿ ಮಾಡಿ ರಸ್ತೆ, ತಡೆಯಲ್ಲ ಎಂದು ಪೊಲೀಸರು ಹೇಳಿದಾಗ ಸುಮ್ಮನಾದರು.
ಪ್ರತಿಭಟನೆ ವಿಷಯ ತಿಳಿದು ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ. ಬಸವರಾಜು, ಮಾಜಿ ಶಾಸಕ ಕೆ. ವೆಂಕಟೇಶ್, ಮುಖಂಡರಾದ ಸೋಮಶೇಖರ್, ತಂಬಾಕು ಮಂಡಳಿ ಸದಸ್ಯ ವಿಕ್ರಂ ರಾಜ… ಮತ್ತಿತರರು ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ಖರೀದಿದಾರ ಕಂಪನಿಗಳು ಮತ್ತು ರೈತ ಮುಖಂಡರ ಸಭೆ ನಡೆಸಿ ಗುರುವಾರದ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ನಿಗದಿಪಡಿಸುವ ಭರವಸೆ ನೀಡಿದರು.
ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ. ಬಸವರಾಜು ಅವರು ಮಾತನಾಡಿ, ಮಂಡಳಿ ಅಧಿಕಾರಿಗಳು ಖರೀದಿದಾರ ಕಂಪನಿಗಳೊಂದಿಗೆ ಈಗಾಗಲೇ ಸಭೆ ನಡೆಸಿ ತಂಬಾಕು ರೈತರಿಗೆ ತೊಂದರೆಯಾಗದಂತೆ ಉತ್ತಮ ಸರಾಸರಿ ದರ ಕಾಯ್ದಿರಿಸಿಕೊಳ್ಳಲು ಸೂಚಿಸಿದ್ದರು, ಬುಧವಾರ ಏಕಾಏಕಿ ಬೆಲೆ ಕುಸಿತವಾಗಿರುವುದು ಖಂಡನೀಯ ಇದರಿಂದಾಗಿ ರೈತರಿಗೆ ತೊಂದರೆಯಾಗುವ ಬಗ್ಗೆ ತಂಬಾಕು ಮಂಡಳಿ ಅಧ್ಯಕ್ಷರು ಹಾಗೂ ಖರೀದಿದಾರ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಸರಾಸರಿ ದರ ದೊರಕಿಸಿಕೊಡುವ ಭರವಸೆ ನೀಡಿದರು.