ಚಿಲ್ಲರೆ ವ್ಯಾಪಾರಕ್ಕೆ ವರುಣನ ಕಾಟ 3-4 ದಿನದಿಂದ ನಗರದಲ್ಲಿ ಮಳೆಯಾರ್ಭಟ ಮಾರುಕಟ್ಟೆಯತ್ತ ಮುಖ ಮಾಡದ ಜನ  

ಬೆಂಗಳೂರು (ಅ.18) : ಕಳೆದ ಮೂರ್ನಾಲ್ಕು ದಿನಗಳಿಂದ ಸಂಜೆ ಸುರಿಯುತ್ತಿರುವ ಮಳೆಗೆ ನಗರದ ಚಿಲ್ಲರೆ ಮಾರುಕಟ್ಟೆವ್ಯಾಪಾರ ಕುಸಿದಿದೆ. ಭಾನುವಾರ ಸಂಜೆ ವೇಳೆ ಜೋರು ಮಳೆ ಆಗದಿದ್ದರೂ ದಟ್ಟವಾದ ಮೋಡ, ತುಂತುರು ಮಳೆ ಕಾರಣ ಗ್ರಾಹಕರ ಸಂಖ್ಯೆ ಸಾಮಾನ್ಯದಂತೆ ಇರಲಿಲ್ಲ. ಕೆ.ಆರ್‌.ಮಾರುಕಟ್ಟೆ, ರುಸೆಲ್‌ ಮಾರುಕಟ್ಟೆ, ಚಿಕ್ಕಪೇಟೆಗಳಲ್ಲಿ ಜನಸಂದಣಿ ಕಡಿಮೆ ಇತ್ತು. ಮಳೆ ಬಿಡುವು ನೋಡಿಕೊಂಡು ಗ್ರಾಹಕರು ಸ್ಟ್ರೀಟ್‌ ಶಾಪಿಂಗ್‌ಗೆ ಮುಂದಾಗುತ್ತಿದ್ದು, ತರಕಾರಿ ಸಂತೆ, ಫಾಸ್ಟ್‌ ಫುಡ್‌, ಬಟ್ಟೆ, ಪಾತ್ರೆ ಸೇರಿ ಇತರೆ ಸಣ್ಣಪುಟ್ಟಪರಿಕರಗಳ ಬೀದಿ ವ್ಯಾಪಾರ ಗಣನೀಯವಾಗಿ ಇಳಿದಿದೆ.

Bengaluru Rain: ಸಿಲಿಕಾನ್ ಸಿಟಿಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

ಕೆ.ಆರ್‌.ಮಾರುಕಟ್ಟೆವ್ಯಾಪಾರಿ ಮಣಿ ಮಾತನಾಡಿ ‘ರೈತರು ಬಂದಷ್ಟುಬೆಲೆಗೆ ಹೂವು ವ್ಯಾಪಾರ ಮಾಡಿ ಹೋಗುತ್ತಿದ್ದಾರೆ. ಮಳೆಯಿಂದಾಗಿ ದಾಸ್ತಾನಿರುವ ಹೂವು ಕೊಳೆಯುತ್ತಿದೆ. ತರಕಾರಿಗಳನ್ನು ಇಟ್ಟುಕೊಳ್ಳಲಾಗುತ್ತಿಲ್ಲ. ಕಾರ್ಮಿಕರಿಗೆ ಕೂಲಿ ನೀಡುವುದು ನಮಗೆ ಕಷ್ಟವಾಗಿದೆ. ಹೀಗೆ ಮಳೆ ಮುಂದುವರಿದರೆ ದೀಪಾವಳಿ ವ್ಯಾಪಾರಕ್ಕೆ ಹೊಡೆತ ಬೀಳಲಿದೆ’ ಎಂದು ಆತಂಕ ತೋಡಿಕೊಂಡರು.

‘ನಮಗೆ ವೀಕೆಂಡ್‌ ವ್ಯಾಪಾರವೇ ಮುಖ್ಯ. ಆದರೆ, ಮಳೆ ಕಾರಣದಿಂದ ಎರಡು ದಿನ ಬೀದಿಬದಿ ವ್ಯಾಪಾರ ಎಂದಿನಂತೆ ನಡೆದಿಲ್ಲ. ತುಂತುರು ಮಳೆಯಾಗುತ್ತಿದ್ದರೂ ಜನ ಖರೀದಿಗೆ ಮುಂದಾಗಲ್ಲ. ನಮ್ಮ ಬಳಿಯ ಬಟ್ಟೆಸೇರಿ ವಸ್ತುಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಹೀಗಾಗಿ ನಾವೆ ಮಳಿಗೆ ಮುಚ್ಚುತ್ತಿದ್ದೇವೆ’ ಎಂದು ವ್ಯಾಪಾರಿ ಶೇಖರ್‌ ಬೇಸರ ವ್ಯಕ್ತಪಡಿಸಿದರು.

‘ಕಳೆದ ಶುಕ್ರವಾರದಿಂದ ವ್ಯಾಪಾರ ಕಡಿಮೆಯಾಗಿದೆ. ಎಪಿಎಂಸಿಯಿಂದ ತಂದಿರುವ ತರಕಾರಿಗಳನ್ನು ಬೀದಿಬದಿ ವ್ಯಾಪಾರಿಗಳು ಕೊಂಡೊಯ್ಯುತ್ತಿಲ್ಲ. ತೇವಾಂಶ ಇರುವ ಹೆಚ್ಚಿನ ತರಕಾರಿಗಳೆ ಮಾರುಕಟ್ಟೆಗೆ ಬರುತ್ತಿದ್ದು, ಕೊಳೆವ ಸ್ಥಿತಿಯಲ್ಲಿವೆ. ಮಳೆ ಕಡಿಮೆ ಆಗದಿದ್ದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ತರಕಾರಿ ವ್ಯಾಪಾರಿ ಮಹ್ಮದ್‌ ಇದ್ರಿಸ್‌ ಹೇಳಿದರು.

ಪೌರ ಕಾರ್ಮಿಕರ ಕಾಯಂಗೆ ವಾಕ್ ಟು ವಾರ್ಡ್

ಐಪಿಡಿ ಸಾಲಪ್ಪ ವರದಿಯಂತೆ ಬಿಬಿಎಂಪಿಯ ತ್ಯಾಜ್ಯ ವಿಲೇವಾರಿ ವಿಭಾಗದ ಎಲ್ಲ ಪೌರ ಕಾರ್ಮಿಕರ ಕಾಯಂಗೊಳಿಸಲು ಸರ್ಕಾರವನ್ನು ಒತ್ತಾಯಿಸುವಂತೆ ನಗರದ 29 ಲಕ್ಷ ಗೃಹ ನಿವಾಸಿಗಳಿಗೆ ಮನವಿ ಸಲ್ಲಿಸುವ ‘ವಾಕ್‌ ಟು ವಾರ್ಡ್‌’ ಅಭಿಯಾನ ನಡೆಸಲು ಬಿಬಿಎಂಪಿ ಪೌರಕಾರ್ಮಿಕರ ಟ್ರೇಡ್‌ ಯೂನಿಯನ್‌ಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಸಮಿತಿಯ ಅಧ್ಯಕ್ಷ ಡಾ ಬಾಬು, ಪಾಲಿಕೆಯ 243 ವಾರ್ಡ್‌ಗಳಲ್ಲಿನ ಪೌರ ಕಾರ್ಮಿಕರಿಗೆ ಸೇವಾ ಕಾಯಂ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಬೆಳಗ್ಗೆ ಕಸ ಸಂಗ್ರಹ ವೇಳೆ ಮನವಿ ಕರಪತ್ರವನ್ನು ಜನರಿಗೆ ನೀಡಿ ಸರ್ಕಾರವನ್ನು ಒತ್ತಾಯಿಸುವಂತೆ ಕೋರುತ್ತೇವೆ. ಆ ಮೂಲಕ ಜನತೆಗೆ ಪೌರಕಾರ್ಮಿಕರ ಕಷ್ಟವನ್ನು ತಿಳಿಸುತ್ತೇವೆ ಎಂದರು.

18,500 ಪೌರ ಕಾರ್ಮಿಕರು, 9,292 ಟಿಪ್ಪರ್‌ ಚಾಲಕರು, 593 ಕಾಂಪ್ಯಾಕ್ಟರ್‌ ಚಾಲಕರು, 1779 ಲೋಡರ್‌ ಸೇರಿ 28,329 ಕಾರ್ಮಿಕರಿದ್ದಾರೆ. ಹಿಂದೆ ಪಾಲಿಕೆಯು 11 ಸಾವಿರ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿತ್ತು. ಆದರೆ, ಕಳೆದ ತಿಂಗಳು ಕೇವಲ 3673 ಜನರನ್ನು ಮಾತ್ರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ರೀತಿ ಮಾಡಿದಲ್ಲಿ ಪಾಲಿಕೆಯ 587 ಮಾಸ್ಟರಿಂಗ್‌ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ 55 ವರ್ಷದ ತಲಾ 6 ಜನ ಮಾತ್ರ ಕಾಯಂ ನೌಕರರಾಗುತ್ತಾರೆ. ಸಾವಿರಾರು ಜನರಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.

40 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಚಿಂತನೆ: ಶಿವಣ್ಣ

ಹೀಗಾಗಿ ಐಪಿಡಿ ಸಾಲಪ್ಪ ಕಮಿಟಿಯ ವರದಿಯಂತೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಪೌರ ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನಿಗದಿಪಡಿಸಬೇಕು. ನೇರ ನೇಮಕಾತಿ ಸಕ್ರಮದ ಅಧಿಸೂಚನೆ ಹಿಂಪಡೆಯಬೇಕು. ವಿವಿಧ ಪೌರ ಕಾರ್ಮಿಕ ಸಂಘಟನೆಗಳನ್ನು ಒಂದೇ ವೇದಿಕೆಗೆ ತರಬೇಕು. ನಿರ್ಣಯ ಕೈಗೊಳ್ಳುವಾಗ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.