ಕೊಡಗು: ರೈತರ ಖಾಸಗಿ ಜಮೀನುಗಳ ಮರಗಳ ಸರ್ವೇಗೆ ಮುಂದಾದ ಅರಣ್ಯ ಇಲಾಖೆ, ರೈತರ ಆಕ್ರೋಶ
2024 ರ ಮಾರ್ಚ್ ತಿಂಗಳಿನಲ್ಲಿ ಕೊಡಗಿನ ಜಮ್ಮಬಾಣೆ, ಜಮ್ಮಭೂಮಿ ಸೇರಿದಂತೆ ರೈತರ ಖಾಸಗಿ ಭೂಮಿಯಲ್ಲಿ ಇರುವ ಸರ್ಕಾರಿ ಮರಗಳನ್ನು ಸರ್ವೇ ನಡೆಸಿ ಅವುಗಳಿಗೆ ಜಿಯೋ ಟ್ಯಾಗ್ ಹಾಕಿ, ಅವುಗಳನ್ನು ಕಂದಾಯ ಇಲಾಖೆಗೆ ವರ್ಗಾಹಿಸುವಂತೆ ಸರ್ಕಾರ ಅರಣ್ಯ ಇಲಾಖೆಗೆ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಸರ್ಕಾರ ಕೊಡಗಿನ ರೈತರು ಕಂಗಾಲಾಗುವಂತೆ ಮಾಡಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಮೇ.04): ಜಮ್ಮ ಭೂಮಿ, ಜಮ್ಮ ಬಾಣೆ, ದೇವರ ಕಾಡು ಹಾಗೂ ಊರುಡುವೆ ಜಾಗಗಳು ಸೇರಿದಂತೆ ರೈತರ ಖಾಸಗಿ ಭೂಮಿಗಳಲ್ಲಿ ಇರುವ ಮರಗಳನ್ನು ಸರ್ವೇ ಮಾಡಿ ಅವುಗಳಿಗೆ ಟ್ಯಾಗ್ ಹಾಕಲು ಮುಂದಾಗಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಕೊಡಗು ಜಿಲ್ಲಾ ಬಿಜೆಪಿ ಹಾಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2024 ರ ಮಾರ್ಚ್ ತಿಂಗಳಿನಲ್ಲಿ ಕೊಡಗಿನ ಜಮ್ಮಬಾಣೆ, ಜಮ್ಮಭೂಮಿ ಸೇರಿದಂತೆ ರೈತರ ಖಾಸಗಿ ಭೂಮಿಯಲ್ಲಿ ಇರುವ ಸರ್ಕಾರಿ ಮರಗಳನ್ನು ಸರ್ವೇ ನಡೆಸಿ ಅವುಗಳಿಗೆ ಜಿಯೋ ಟ್ಯಾಗ್ ಹಾಕಿ, ಅವುಗಳನ್ನು ಕಂದಾಯ ಇಲಾಖೆಗೆ ವರ್ಗಾಹಿಸುವಂತೆ ಸರ್ಕಾರ ಅರಣ್ಯ ಇಲಾಖೆಗೆ ಆದೇಶ ಹೊರಡಿಸಿದೆ. ಈ ಆದೇಶದಿಂದಾಗಿ ಸರ್ಕಾರ ಕೊಡಗಿನ ರೈತರು ಕಂಗಾಲಾಗುವಂತೆ ಮಾಡಿದೆ.
ಕೊಡಗಿನಲ್ಲಿ 38 ಡಿಗ್ರಿ ತಲುಪಿದ ರಣಭೀಕರ ಬಿಸಿಲು: ಸುಟ್ಟು ಕರಕಲಾದ ಬೆಳೆ, ಕಂಗಾಲಾದ ಅನ್ನದಾತ..!
ಹೌದು ಕೊಡಗಿನಲ್ಲಿ ಇಂದಿಗೂ ಜಮ್ಮಬಾಣೆ, ಜಮ್ಮಭೂಮಿಗಳು ರೈತರಿಗೆ ಇವೆ. ಅವುಗಳಲ್ಲಿ ಕಾಫಿ ತೋಟಗಳಿದ್ದು ಸಹಜವಾಗಿಯೇ ತೋಟಗಳಲ್ಲಿ ಸಾವಿರಾರು ಮರಗಳು ಇವೆ. ಈ ಮರಗಳಿಗೆ ಸರ್ಕಾರ ಈಗ ಇದ್ದಕ್ಕಿದ್ದಂತೆ ಅರಣ್ಯ ಇಲಾಖೆ ಮೂಲಕ ಟ್ಯಾಗ್ ಹಾಕಿಸಲು ಮುಂದಾಗಿದೆ. ರೈತರ ಖಾಸಗಿ ಭೂಮಿಗಳಲ್ಲಿ ಇರುವ ಮರಗಳಿಗೆ ಟ್ಯಾಗ್ ಹಾಕಿದ್ದೇ ಆದಲ್ಲಿ ಆ ಮರಗಳ ಮೇಲಿರುವ ಹಕ್ಕನ್ನು ರೈತರು ಕಳೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ರೈತರ ಭೂಮಿಯಲ್ಲಿರುವ ಮರಗಳು ಕಳವು ಆಗಿದ್ದೇ ಆದಲ್ಲಿ, ಅದರ ಜಬಾವ್ದಾರಿಯನ್ನು ಮರಗಳಿದ್ದ ಭೂಮಿಯ ಮಾಲೀಕನಾದ ರೈತನೇ ಹೊರಬೇಕು. ಇಂತಹ ಕಾನೂನನ್ನು ಸರ್ಕಾರ ಈಗ ಜಾರಿ ಮಾಡಿರುವುದು ರೈತರಿಗೆ ತೀವ್ರ ಆತಂಕ ತಂದೊಡ್ಡಿದೆ. ಈಗಾಗಲೇ ರೈತರ ಭೂಮಿಗಳಲ್ಲಿ ಇರುವ ಕಾಫಿ ತೋಟಗಳಿಗೆ ಹೋಗಿ ಅರಣ್ಯ ಇಲಾಖೆ ಸಿಬ್ಬಂದಿ ಸರ್ವೆ ಮಾಡಿ ಮರಗಳ ಪಟ್ಟಿ ಸಿದ್ಧಗೊಳಿಸುತ್ತಿದ್ದಾರೆ.
ಸರ್ಕಾರದ ಈ ಕೆಲಸ ಗೊತ್ತಾಗುತ್ತಿದ್ದಂತೆ ರೈತರು ಅರಣ್ಯ ಇಲಾಖೆಯ ಸಿಬ್ಬಂದಿಯ ಸರ್ವೆ ಕೆಲಸಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿರುವ ಕೊಡಗು ಜಿಲ್ಲಾ ಬಿಜೆಪಿ ಸರ್ಕಾರದ ಆದೇಶದಿಂದ ಮರ ಕಳ್ಳತನ, ಮರ ಬಿದ್ದುಹೋದಲ್ಲಿ ಜಮೀನು ಮಾಲೀಕನ ವಿರುದ್ಧ ಮುಖದ್ದಮೆ ದಾಖಲಾಗುವ ಸಂಭವ ಅಲ್ಲಗಳಿಯುವಂತಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆಯಬೇಕು. ತಪ್ಪಿದ್ದಲ್ಲಿ ಜಿಲ್ಲೆಯ ಜನರ ಸಹಕಾರದೊಂದಿಗೆ ತೀವ್ರ ಪ್ರತಿಭಟನೆ ನಡೆಸುವುದು ಖಚಿತ ಎಂದು ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಆದೇಶ ಕೊಡಗು ಜಿಲ್ಲೆಗೆ ಮಾರಕವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ತೋಟದ ಒಳಗೆ ಪ್ರವೇಶಿಸಲು ಮಾಲೀಕರು ಅವಕಾಶ ನೀಡಬಾರದು ಎಂದು ರೈತರಿಗೆ ಹೇಳಿದ್ದಾರೆ.
ಮಾಜಿ ಎಂಎಲ್ಸಿ ಸುನೀಲ್ ಸುಬ್ರಮಣಿ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು ಈ ಆದೇಶಕ್ಕೆ ಸರ್ಕಾರದಿಂದ 24 ಗಂಟೆಯೊಳಗೆ ತಡೆ ಕೊಡಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಮೊದಲ ಅತೀ ಎತ್ತರದ ಗಾಜಿನ ಸೇತುವೆ: ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ..!
ಈ ಕುರಿತು ಪ್ರತಿಕ್ರಿಯಿಸಿರುವ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರು, ರೈತರು ಯಾವುದೇ ಕಾರಣಕ್ಕೂ ಆತಂಕಗೊಳ್ಳಬೇಕಾದ ಅಗತ್ಯವಿಲ್ಲ. ಈಗಾಗಲೇ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿ ಯಾವುದೇ ಸರ್ವೆ ಮಾಡದಂತೆ ತಿಳಿಸಲಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆ ಅರಣ್ಯ ಇಲಾಖೆ ಸಚಿವರು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.
ಏನೇ ಆಗಲಿ ಇದ್ದಕ್ಕಿದ್ದಂತೆ ರೈತರ ಭೂಮಿಯಲ್ಲಿದ್ದ ಮರಗಳಿಗೆ ಟ್ಯಾಗ್ ಹಾಕುವ ಮೂಲಕ ರೈತರಿಗೆ ಆತಂಕ ತಂದೊಡ್ಡಿದ್ದ ಸರ್ಕಾರದ ನಿರ್ಧಾರಕ್ಕೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿರುವುದಂತು ಸತ್ಯ.