ಕೊಡಗಿನಲ್ಲಿ 38 ಡಿಗ್ರಿ ತಲುಪಿದ ರಣಭೀಕರ ಬಿಸಿಲು: ಸುಟ್ಟು ಕರಕಲಾದ ಬೆಳೆ, ಕಂಗಾಲಾದ ಅನ್ನದಾತ..!
ಪ್ರತೀ ವರ್ಷ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಆದಾಯ ತಂದು ಕೊಡುತ್ತಿದ್ದವು. ಆದರೀಗ ಅಂತಹ ಬೆಳೆಗಳೇ ಸಂಪೂರ್ಣ ಒಣಗಿ ಹೋಗಿ ನಮ್ಮ ಆದಾಯದ ಮೂಲಗಳೇ ಇಲ್ಲದಂತೆ ಆಗಿದೆ.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಮೇ.02): ಸಾಕಷ್ಟು ಮಳೆ ಸುರಿದು ಅವಘಡಗಳಾಗುತ್ತಿದ್ದ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಈ ವರ್ಷ ಎಂದೂ ಕಂಡು ಕೇಳರಿಯದ ರಣಭೀಕರ ಬರಗಾಲ ಎದುರಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಹತ್ತಾರು ವರ್ಷಗಳಿಂದ ಎದೆ ಎತ್ತರಕ್ಕೆ ಬೆಳೆದಿದ್ದ ಕಾಫಿ ಗಿಡ, ಕರಿಮೆಣಸು ಬಳ್ಳಿಗಳು, ಅಡಿಕೆ ಮರಗಳು ಬೆಂಕಿಗೆ ಸುಟ್ಟು ಕರಕಲಾಗಿವೆ ಎನ್ನುವಷ್ಟರ ಮಟ್ಟಿಗೆ ಒಣಗಿ ಹೋಗಿವೆ. ಹೀಗಾಗಿ ಕೊಡಗಿನ ಸಣ್ಣ, ಅತಿ ಸಣ್ಣ ಕಾಫಿ ಬೆಳೆಗಾರರು ಮತ್ತು ಇತರೆ ರೈತರು ಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಅರೆಮಲೆನಾಡಿನಂತಹ ಪ್ರದೇಶವಾಗಿರುವ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ, ಚಿಕ್ಕಬೆಟಗೇರಿ, ದೊಡ್ಡಬೆಟಗೇರಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಭೀಕರವಾದ ಬರ ಎದುರಾಗಿದೆ.
ಕಳೆದ 25 ಕ್ಕೂ ಹೆಚ್ಚು ವರ್ಷಗಳಿಗೂ ಹಿಂದೆಯೂ ಇಂತಹ ಭೀಕರ ಬರಗಾಲವನ್ನು ಕಂಡಿರಲೇ ಇಲ್ಲ ಎನ್ನುತ್ತಿದ್ದಾರೆ ರೈತರು. ಹತ್ತು ವರ್ಷಗಳ ಹಿಂದೆ ಕಾಫಿ ಗಿಡಗಳನ್ನು ಹಾಕಿ ಅವುಗಳಿಗೆ ಕುಡಿಯುವ ನೀರನ್ನು ಹಾಕಿ ಬೆಳೆದಿದ್ದೆವು. ಖಾಲಿ ಬಾಟಲಿಗಳನ್ನು ಇರಿಸಿ ಅವುಗಳಿಗೆ ನೀರು ತುಂಬಿ ಹನಿ ನೀರಾವರಿ ಎನ್ನುವಂತೆ ಮಾಡಿ ಗಿಡ ಬೆಳೆದಿದ್ದವು. ಇದೀಗ ಅವುಗಳು ಬೆಳೆದು ಆದಾಯದ ಮೂಲಗಳಾಗಿದ್ದವು. ಪ್ರತೀ ವರ್ಷ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಆದಾಯ ತಂದು ಕೊಡುತ್ತಿದ್ದವು. ಆದರೀಗ ಅಂತಹ ಬೆಳೆಗಳೇ ಸಂಪೂರ್ಣ ಒಣಗಿ ಹೋಗಿ ನಮ್ಮ ಆದಾಯದ ಮೂಲಗಳೇ ಇಲ್ಲದಂತೆ ಆಗಿದೆ.
ಬೀಗರೂಟ ಮಾಡಿ ಮದುಮಕ್ಕಳ ಸಹಿತ 500+ ಮಂದಿ ಅಸ್ವಸ್ಥ: ಸಚಿವ ವೆಂಕಟೇಶ್ ಸಹ ಭಾಗಿ!
ಮತ್ತೆ ನಮ್ಮ ಭೂಮಿಗಳಲ್ಲಿ ಆದಾಯ ಕಾಣಬೇಕೆಂದರೆ ಮತ್ತೆ ಗಿಡಗಳನ್ನು ನೆಟ್ಟು ಕನಿಷ್ಠ ಆರೇಳು ವರ್ಷಗಳ ಕಾಲ ಅವುಗಳನ್ನು ಬೆಳೆಸಿ ಮತ್ತೆ ಬೆಳೆಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ಅಲ್ಲಿಯವರೆಗೆ ಒಂದೇ ಒಂದು ರೂಪಾಯಿ ಆದಾಯ ಇರುವುದಿಲ್ಲ ಅಂತಹ ದುಃಸ್ಥಿತಿ ಇದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಫಿ ತೋಟದ ಒಳಗೆ ಪರ್ಯಾಯ ಆದಾಯದ ಮೂಲವಾಗಿದ್ದ 15 ರಿಂದ 20 ವರ್ಷಗಳ ಹಳೆಯದಾದ ಕರಿಮೆಣಸು ಬಳ್ಳಿಗಳು ಪೂರ್ತಿ ಒಣಗಿ ತರಗೆಲೆಗಳಾಗಿವೆ. ಇದಲ್ಲದೆ ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಸಸಿಗಳು ಕೂಡ ಪೂರ್ಣ ಪ್ರಮಾಣದಲ್ಲಿ ಬತ್ತಿ ಹೋಗಿವೆ. ಪ್ರತೀ ವರ್ಷ ಈ ವೇಳೆಗಾಗಲೇ ಒಂದೆರಡು ಬಾರಿಯಾದರೂ ಪೂರ್ಣ ಮುಂಭಾರು ಮಳೆಗಳು ಬರುತ್ತಿದ್ದವು. ಇದರಿಂದ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಮಳೆಯೂ ಇಲ್ಲ, ಮತ್ತೊಂದೆಡೆ ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಏರುತ್ತಲೇ ಇದ್ದು, 36 ರಿಂದ 38 ಡಿಗ್ರಿಯಷ್ಟು ಬಿಸಿಲು ದಾಖಲಾಗುತ್ತಿದೆ.
ಹೀಗಾಗಿ ಕಾಫಿ, ಕರಿಮೆಣಸು ಸೇರಿದಂತೆ ವಿವಿಧ ಬೆಳೆಗಳು ಒಣಗಿ ಹೋಗುತ್ತಿವೆ. ಹೇಗಾದರೂ ಮಾಡಿ ಕಾಫಿ ಗಿಡಗಳನ್ನು ಉಳಿಸಿಕೊಳ್ಳಲೇಬೇಕು ಎನ್ನುವ ಬಯಕೆಯಿಂದ ಯಾರದೋ ಪಂಪ್ ಸೆಟ್ಗಳಿಂದ ಒಂದೊಂದು ಬಾರಿಗೆ 20 ಸಾವಿರ ರೂಪಾಯಿ ಕೊಟ್ಟು ನೀರು ಹಾಯಿಸಿದೆವು. ಆದರೂ ಬೆಳೆ ಉಳಿಸಿಕೊಳ್ಳಲಾಗಲಿಲ್ಲ ಎಂದು ರೈತ ರಶೀದ್ ಅವರು ಕಣ್ಣೀರಿಡುತ್ತಿದ್ದಾರೆ.
ಬೆಳೆ ಉಳಿಸಿಕೊಳ್ಳಬೇಕೆಂದೇ ಲಕ್ಷಾಂತರ ರೂಪಾಯಿ ವ್ಯಯಿಸಿ ಕೊಳವೆ ಬಾವಿ ಕೊರೆಸಿದೆವು. ಆದರೆ ನೀರು ಬರಲಿಲ್ಲ, ಇದೀಗ ಕೈಯಲ್ಲಿದ್ದ ದುಡ್ಡನ್ನು ಖರ್ಚು ಮಾಡಿಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ ಎಂದು ರೈತ ಮಹಿಳೆ ಬೇಬಿ ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲೂ ಭೀಕರ ಬರಗಾಲಕ್ಕೆ ರೈತರು ಬದುಕು ತತ್ತರಿಸಿ ಹೋಗಿದೆ.