ಬಸವರಾಜ ಹಿರೇಮಠ

ಧಾರ​ವಾ​ಡ(ಫೆ.10): ಧಾರವಾಡ ಮತ್ತು ಬೆಳಗಾವಿ ಮಧ್ಯದ ರೈಲು ಅಂತರ ಕಡಿತಗೊಳಿಸಿ ನೇರ ರೈಲು ಸಂಚಾರ ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ಮಂಜೂರಾಗಿರುವ ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಆರಂಭದಲ್ಲಿಯೇ ಆತಂಕವೊಂದು ಎದುರಾಗಿದೆ.

ಈ ನೂತನ ರೈಲು ಮಾರ್ಗ ಕಾರ್ಯರೂಪಕ್ಕೆ ಬರಲು ನೂರಾರು ರೈತರು ತಮ್ಮ ಫಲವತ್ತಾದ ಜಮೀನು ಕಳೆದುಕೊಳ್ಳಬೇಕಾಗಿದ್ದು, ಧಾರವಾಡ ಆನಂತರ ರೈಲು ಸಂಚರಿಸಬೇಕಾದ ಆರಂಭದ ಗ್ರಾಮದ ರೈತರಿಂದ ಇದೀಗ ಈ ರೈಲು ಮಾರ್ಗ ಮಾಡಲು ವಿರೋಧ ವ್ಯಕ್ತವಾಗುತ್ತಿದೆ.

ಧಾರವಾಡದಿಂದ ಬೆಳಗಾವಿಗೆ ಸದ್ಯ ಲೋಂಡಾ ಮೂಲಕ ಇರುವ ಮಾರ್ಗ ಬಹುದೂರ. ರಸ್ತೆ ಮೂಲಕ ಸಾಗಿದರೆ ಒಂದು ಗಂಟೆಯಲ್ಲಿ ಮುಟ್ಟಬಹುದಾದ ಬೆಳಗಾವಿಗೆ ರೈಲಿನಲ್ಲಿ ತೆರ​ಳ​ಲು ಬರೋ​ಬ್ಬರಿ ಮೂರು ಗಂಟೆ​ಗಳು ಬೇಕು. ಈ ಹಿನ್ನೆಲೆಯಲ್ಲಿ ಪ್ರಯಾಣದ ಸುದೀರ್ಘ ಸಮಯವನ್ನು ಕಡಿತಗೊಳಿಸಬೇಕು ಹಾಗೂ ಧಾರವಾಡ-ಬೆಳಗಾವಿ ಮಧ್ಯೆ ನೇರ ರೈಲಿನ ಸೌಲಭ್ಯ ಕಲ್ಪಿಸಿ ಜನರಿಗೆ ಅನುಕೂಲ ಮಾಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಗೆ ದಶಕಗಳ ಹೋರಾಟ ನಡೆ​ದಿದ್ದು, ಇದೀಗ ಹಸಿರು ನಿಶಾನೆ ದೊರ​ಕಿದೆ. ಅದರಲ್ಲಿಯೂ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಮಹತ್ವಾಕಾಂಕ್ಷೆಯ ಯೋಜನೆಯೂ ಇದಾಗಿದೆ.

ಸಚಿವೆ ಜೊಲ್ಲೆ ಒಡೆತನದ ಸೊಸೈಟಿಯಿಂದ ಸಾಲದ ನೋಟಿಸ್‌: ರೈತ ಆತ್ಮಹತ್ಯೆ

ಆದರೆ, ಈ ಯೋಜನೆಗಾಗಿ ಹೊಸದಾಗಿ ರೈಲು ಮಾರ್ಗ ಮಾಡಲೇಬೇಕು. ಅದಕ್ಕೆ ಧಾರವಾಡಕ್ಕೆ ಹೊಂದಿಕೊಂಡಿರುವ ಮೊದಲ ಗ್ರಾಮ ಚಿಕ್ಕಮಲ್ಲಿಗವಾಡ. ಇದೀಗ ಈ ಗ್ರಾಮದ ರೈತರಿಂದ ಯೋಜನೆಗೆ ನಿಧಾನವಾಗಿ ವಿರೋಧ ವ್ಯಕ್ತವಾಗಿದೆ. ನಮಗಂತೂ ಈ ರೈಲು ಮಾರ್ಗ ಬೇಡವೇ ಬೇಡ. ಈಗಾಗಲೇ ಇಂತಹ ಅಭಿವೃದ್ಧಿ ಕೆಲಸಗಳಿಗೆ ಜಮೀನು ಕಳೆದುಕೊಂಡು ಬಡವಾಗಿದ್ದೇವೆ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿದ ಆತಂಕ:

ನೂತನ ರೈಲು ಯೋಜನೆಯಂತೆ ಧಾರವಾಡದಿಂದ ಕ್ಯಾರಕೊಪ್ಪ ಮಾರ್ಗವಾಗಿ ಮುಮ್ಮಿಗಟ್ಟಿ, ತೇಗೂರ, ಕಿತ್ತೂರು, ಎಂ.ಕೆ. ಹುಬ್ಬಳ್ಳಿ, ಬಾಗೇವಾಡಿ ಮೂಲಕ ಬೆಳಗಾವಿ ಸೇರುವುದಾಗಿದೆ. ಆದರೆ, ಮುಮ್ಮಿಗಟ್ಟಿಮತ್ತು ಕ್ಯಾರಕೊಪ್ಪ ಮಧ್ಯೆ ಲಿಂಕ್‌ ಆಗಲು ಧಾರವಾಡ ತಾಲೂಕಿನ ಚಿಕ್ಕಮಲಿಗವಾಡ ಗ್ರಾಮದ ಪಕ್ಕವೇ ರೈಲು ಮಾರ್ಗ ಹೋಗಬೇಕು. ಇದಕ್ಕಾಗಿ ಈಗಾಗಲೇ ರೈಲ್ವೆ ಇಲಾಖೆ ಸಮೀಕ್ಷೆ ಸಹ ಮಾಡಿ, ಅಲ್ಲಲ್ಲಿ ಗುರು​ತಿಗೆ ಕಲ್ಲುಗಳನ್ನು ನೆಟ್ಟಿದೆ. ಆ ಕಲ್ಲುಗಳನ್ನು ಹಾಕಿದ ಬಳಿಕ ಚಿಕ್ಕಮಲ್ಲಿಗವಾಡ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಗ್ರಾಮಸ್ಥರು ಐಐಟಿ, ಕೆಐಎಡಿಬಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 600ಕ್ಕೂ ಹೆಚ್ಚು ಎಕರೆ ಜಮೀನು ಕಳೆದುಕೊಂಡಿದ್ದಾರೆ. ಆ ಜಮೀನು ಹೋದ ಬಳಿಕ ಅಳಿದುಳಿದ ಜಮೀನಿನಲ್ಲಿ ಕೃಷಿ ಮುಂದುವರಿಸಿದ್ದಾರೆ. ಈ ಹಿಂದೆ ಜಮೀನು ಹೋದ ರೈತರ ಉಳಿದ ಜಮೀನಿನ ಮೇಲೆಯೇ ಈಗಿನ ಹೊಸ ಮಾರ್ಗ ಬರುತ್ತಿರುವ ಕಾರಣ ವಿರೋಧ ವ್ಯಕ್ತವಾಗುತ್ತಿದೆ.

ಧಾರವಾಡ-ಬೆಳಗಾವಿ ರೈಲು ಯೋಜನೆ ಉತ್ತರ ಕರ್ನಾಟಕಕ್ಕೆ ಪ್ರಮುಖವಾದುದು. ಆದರೆ, ಕೃಷಿ ಭೂಮಿಯೇ ಹೋಗುತ್ತಿರುವ ಕಾರಣ ರೈತರಿಂದ ವಿರೋಧ ಆಗುತ್ತಿದ್ದು, ಈ ಬಗ್ಗೆ ರೈತರಿಗೆ ರೈಲ್ವೆ ಇಲಾಖೆಯಾಗಲಿ ಅಥವಾ ಸ್ಥಳೀಯ ಜನಪ್ರತಿನಿಧಿಗಳಾಗಲಿ ಯಾವ ರೀತಿ ಸ್ಪಂದನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಡಿಸಿಗೆ ಭೇಟಿ ಆಗಲಿದ್ದೇವೆ

ನಮ್ಮದು ಕೃಷಿಯನ್ನೇ ನಂಬಿರುವ ಕುಟುಂಬ. ಐಐಟಿಗೆ 11 ಎಕರೆ ಜಮೀನು ಹೋಗಿದೆ. ಈಗ ಅಳಿದುಳಿದ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದೇನೆ. ರೈಲ್ವೆ ಯೋಜನೆಗೆ ಮತ್ತೆ 4 ಎಕರೆ ಜಮೀನು ಹೋಗಲಿದೆ ಎಂಬ ಮಾಹಿತಿ ಇದೆ. ಕಳೆದ ವಾರ ರೈಲ್ವೆ ಇಲಾಖೆ ಅಧಿ​ಕಾ​ರಿ​ಗಳು ಸಮೀಕ್ಷೆ ಮಾಡಿ ಹೋಗಿದ್ದಾರೆ. ನಮ್ಮ ಹೊಲದ ಬಳಿಯೇ ಹಳಿಯೂ ಹೋಗುತ್ತಿದ್ದು ಆತಂಕ ಎದುರಾಗಿದೆ. ಭೂಸ್ವಾಧೀನ ಮಾಡಿಕೊಂಡು ಪರಿಹಾರ ಹಣ ನೀಡಲಾಗುತ್ತದೆ. ಆದರೆ, ಹಣ ಎಂದಿಗೂ ಉಳಿಯುವು​ದಿಲ್ಲ. ತುತ್ತು ಅನ್ನ ಹಾಕುವುದು ಭೂಮಿಯೇ. ಇದೇ ರೀತಿಯ ಗ್ರಾಮದ ಅನೇಕ ರೈತರ ಜಮೀನು ರೈಲ್ವೆ ಯೋಜನೆಗೆ ಹೋಗಲಿದ್ದು, ಅವರು ಆತಂಕದಲ್ಲಿದ್ದಾರೆ. ಈ ಬಗ್ಗೆ ಗ್ರಾಪಂ ಸದಸ್ಯರಿಗೆ ದೂರು ಸಲ್ಲಿಸಿದ್ದೇನೆ. ಅವರನ್ನು ಕರೆದುಕೊಂಡು ಹೋಗಿ ಜಿಲ್ಲಾಧಿಕಾರಿ ಭೇಟಿ ಆಗುವ ಮೂಲಕ ನಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತೇವೆ ಎಂದು ಚಿಕ್ಕಮಲ್ಲಿಗವಾಡ ರೈತ ಪರಮೇಶ ಅಂಗಡಿ ತಿಳಿಸಿದ್ದಾರೆ.