ಭಾರತ ನೌಕಾಪಡೆಯ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಮಲ್ಪೆ ಪೊಲೀಸರು ಗುಜರಾತ್ ಮೂಲದ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ  ಸಿಮ್ ಕಾರ್ಡ್‌ ಒದಗಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. 

ಉಡುಪಿ (ಡಿ.22): ಭಾರತದ ನೌಕಾಪಡೆಗೆ (Indian Navy) ಸಂಬಂಧಿಸಿದ ಅತ್ಯಂತ ರಹಸ್ಯ ಮಾಹಿತಿಗಳನ್ನ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಮಲ್ಪೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ಜಾಲದಲ್ಲಿ ಭಾಗಿಯಾಗಿದ್ದ ಗುಜರಾತ್ ಮೂಲದ ಮತ್ತೊಬ್ಬ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಜರಾತ್ ಮೂಲದ ಆರೋಪಿ ಹಿರೇಂದ್ರ ಬಂಧನ

ಬಂಧಿತ ಆರೋಪಿಯನ್ನು ಗುಜರಾತ್ ರಾಜ್ಯದ ಆನಂದ್ ತಾಲೂಕಿನ ಕೈಲಾಸ್ ನಗರಿಯ ಹಿರೇಂದ್ರ (34) ಎಂದು ಗುರುತಿಸಲಾಗಿದೆ. ಈತ ಹಣದ ಆಮಿಷಕ್ಕೆ ಒಳಗಾಗಿ ಈ ಹಿಂದೆ ಬಂಧಿತರಾಗಿದ್ದ ರೋಹಿತ್ ಮತ್ತು ಸಂತ್ರಿಗೆ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಸಿಮ್ ಕಾರ್ಡ್‌ಗಳ ಮೂಲಕವೇ ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಲಾಗುತ್ತಿತ್ತು.

ಕೊಚ್ಚಿನ್ ಶಿಪ್ ಯಾರ್ಡ್ ಗೆ ಕೆಲಸಕ್ಕೆ ಸೇರಿಕೊಂಡಿದ್ದ ಆರೋಪಿಗಳು:

ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ (Cochin Shipyard) ಸಹಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬ ಇಬ್ಬರನ್ನು ನವೆಂಬರ್ 21ರಂದು ಮಲ್ಪೆ ಪೊಲೀಸರು ಬಂಧಿಸಿದ್ದರು. ಇವರು ಹಡಗುಗಳ ನಂಬರ್ ಮತ್ತು ಅವುಗಳ ಸಂಚಾರದ ಗೌಪ್ಯ ಪಟ್ಟಿಗಳನ್ನು ಶತ್ರು ರಾಷ್ಟ್ರಕ್ಕೆ ತಲುಪಿಸುತ್ತಿದ್ದರು ಎನ್ನಲಾಗಿದೆ.

ಅಧಿಕಾರಿಗಳ ಸಂಶಯದಿಂದ ಬಯಲಾದ ಪ್ರಕರಣ

ಕೊಚ್ಚಿನ್ ಶಿಪ್ ಯಾರ್ಡ್‌ನ ಅಧಿಕಾರಿಗಳಿಗೆ ಈ ಇಬ್ಬರ ನಡವಳಿಕೆಯ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಈ ಇಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರಿಗೆ ಸಿಮ್ ಕಾರ್ಡ್ ಒದಗಿಸುತ್ತಿದ್ದ ಗುಜರಾತ್ ಮೂಲದ ಹಿರೇಂದ್ರನ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸದ್ಯ ಮೊದಲ ಇಬ್ಬರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.