ವಿಜಯಪುರದ ಎನ್‌ಎಚ್ 52ರ ಹಿಟ್ಟಿನಹಳ್ಳಿ ಬಳಿಯ ಟೋಲ್‌ನಲ್ಲಿ, ಎಂಎಲ್‌ಸಿ ಕೇಶವ ಪ್ರಸಾದ್ ಅವರ ಕಾರನ್ನು ತಡೆದ ಸಿಬ್ಬಂದಿ, ಅವರ ಗುರುತನ್ನು ಪ್ರಶ್ನಿಸಿ ಉದ್ಧಟತನ ತೋರಿದ್ದಾರೆ. ಗುರುತಿನ ಚೀಟಿ ಕಿತ್ತು, ಚಾಲಕನ ಮೊಬೈಲ್ ಕಸಿದುಕೊಂಡ ನಂತರ, ಪೊಲೀಸರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.
ವಿಜಯಪುರ (ಡಿ.22): ವಿಜಯಪುರದ ಹೊರವಲಯದ ಎನ್‌ಎಚ್ 52ರ (NH 52) ಹಿಟ್ಟಿನಹಳ್ಳಿ ಬಳಿ ಭಾನುವಾರ ವಿಚಿತ್ರ ಘಟನೆಯೊಂದು ನಡೆದಿದೆ. ವಿಧಾನ ಪರಿಷತ್ ಸದಸ್ಯರಾದ (MLC) ಬಿಜೆಪಿಯ ಕೇಶವ ಪ್ರಸಾದ್ ಅವರಿದ್ದ ಕಾರನ್ನು ತಡೆದ ರಾಷ್ಟ್ರೀಯ ಹೆದ್ದಾರಿಯ ಟೋಲ್ ನಾಕಾ ಸಿಬ್ಬಂದಿ, 'ನೀವು ನಿಜವಾದ ಎಂಎಲ್‌ಸಿ ಅನ್ನೋದಕ್ಕೆ ಸಾಕ್ಷಿ ಏನು?' ಎಂದು ಪ್ರಶ್ನಿಸುವ ಮೂಲಕ ಉದ್ಧಟತನ ತೋರಿದ್ದಾರೆ. ಈ ಘಟನೆಯಿಂದಾಗಿ ಜನಪ್ರತಿನಿಧಿಯೊಬ್ಬರು ಸುಮಾರು ಒಂದು ತಾಸು ಕಾಲ ರಸ್ತೆಯಲ್ಲೇ ಕಾಯುವಂತಾಯಿತು.
ನೀವು ನಿಜವಾದ ಎಂಎಲ್‌ಸಿ ಅನ್ನೋದಕ್ಕೆ ಸಾಕ್ಷಿ ಏನು?
ಕೇಶವ ಪ್ರಸಾದ್ ಅವರು ತಮ್ಮ ಅಧಿಕೃತ ದಾಖಲೆಗಳನ್ನು ತೋರಿಸಿದರೂ ಸಹ ಟೋಲ್ ಸಿಬ್ಬಂದಿ ಸಮಾಧಾನಗೊಳ್ಳಲಿಲ್ಲ. ಬದಲಿಗೆ ವಾಗ್ವಾದಕ್ಕಿಳಿದ ಸಿಬ್ಬಂದಿ, ಕಾರಿನ ಮೇಲಿದ್ದ ಎಂಎಲ್‌ಸಿ ಗುರುತಿನ ಚೀಟಿಯನ್ನು (Identity Card) ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಗಲಾಟೆ ಮಾಡುವ ವೇಳೆ ಕಾರು ಚಾಲಕನ ಮೊಬೈಲ್ ಫೋನ್ ಅನ್ನು ಕೂಡ ಕಸಿದುಕೊಂಡು ಕಿರುಕುಳ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮಧ್ಯಪ್ರವೇಶದಿಂದ ಸುಗಮ ಸಂಚಾರ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಕೇಶವ ಪ್ರಸಾದ್ ಅವರು ನೇರವಾಗಿ ವಿಜಯಪುರ ಎಸ್‌ಪಿಗೆ (SP) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಮತ್ತು ಡಿವೈಎಸ್‌ಪಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಂತಿಮವಾಗಿ ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದ ನಂತರ ಎಂಎಲ್‌ಸಿ ಅವರ ವಾಹನವನ್ನು ಬಿಟ್ಟು ಕಳಿಸಲಾಯಿತು.


