ಪ್ರೀತಿಸಿ ಮದುವೆಯಾದ ಮಗಳ ರಕ್ತದಲ್ಲಿ ಕೈ ತೊಳೆದ ತಂದೆ; ಹುಬ್ಬಳ್ಳಿಯಲ್ಲಿ ಮರ್ಯಾದ ಹ*ತ್ಯೆ
ಹುಬ್ಬಳ್ಳಿ ಬಳಿಯ ಇನಾಂಪುರದಲ್ಲಿ ಅಂತರ್ಜಾತಿ ವಿವಾಹವಾದ ಗರ್ಭಿಣಿ ಮಗಳನ್ನು ತಂದೆಯೇ ಕೊಲೆ ಮಾಡಿರುವ ಮರ್ಯಾದಾ ಹತ್ಯೆ ನಡೆದಿದೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಈ ಕೃತ್ಯ ಎಸಗಲಾಗಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮರ್ಯದಾ ಹ*ತ್ಯೆ
ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಮಗಳನ್ನು ತಂದೆಯೇ ಕೊ*ಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂಪುರ ಗ್ರಾಮದಲ್ಲಿ ನಡೆದಿದೆ. ಪೋಷಕರಿಂದ ಮಾರಣಾಂತಿಕ ದಾಳಿಗೊಳಗಾಗಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ.
ಏಳು ತಿಂಗಳ ಹಿಂದೆ ಮದುವೆ
ಏಳು ತಿಂಗಳ ಹಿಂದೆ ಮಾನ್ಯ ಪಾಟೀಲ್ ಮತ್ತು ವಿವೇಕಾನಂದ್ ದೊಡ್ಡಮನಿ ಪ್ರೀತಿಸಿ ಮದುವೆಯಾಗಿದ್ದರು. ವಿವೇಕಾನಂದ ದೊಡ್ಡಮನಿ ದಲಿತ ಸಮುದಾಯಕ್ಕೆ ಸೇರಿದ್ದರಿಂದ ಮಾನ್ಯ ಪಾಟೀಲ್ ಕುಟುಂಬಸ್ಥರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರು ಎರಡು ಕುಟುಂಬಗಳ ನಡುವೆ ರಾಜೀ ಪಂಚಾಯ್ತಿ ಸಹ ನಡೆಸಿದ್ದರು. ರಿಜಿಸ್ಟರ್ ಮದುವೆಯಾದ ಬಳಿಕ ಮಾನ್ಯ ಮತ್ತು ವಿವೇಕಾನಂದ್ ಪ್ರಾಣ ಭಯದಿಂದ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು.
ಯುವತಿ ಕುಟುಂಬಸ್ಥರಿಂದ ದಾಳಿ
ಡಿಸೆಂಬರ್ 8ರಂದು ಮಾನ್ಯ ಮತ್ತು ವಿವೇಕಾನಂದ್ ಗ್ರಾಮಕ್ಕೆ ಹಿಂದಿರುಗಿದ್ದರು. ಏಳು ತಿಂಗಳ ಬಳಿಕವೂ ಮಾನ್ಯಾ ತಂದೆ ಪ್ರಕಾಶ್ ಗೌಡ ಪಾಟೀಲ್, ಮಾವ ವೀರನಗೌಡ ಪಾಟೀಲ್ ಮತ್ತು ಸೋದರ ಅರುಣ್ ಗೌಡ @ ಆಕಾಶ ಗೌಡ ತಲ್ವಾರ್‌ನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಾಟೀಲ್ ಕುಟುಂಬದಿಂದ ಸಂಚು
ಮಾನ್ಯ ಗ್ರಾಮಕ್ಕೆ ಬಂದಿರುವ ವಿಷಯ ತಿಳಿದ ಪಾಟೀಲ್ ಕುಟುಂಬಸ್ಥರು ಕೊ*ಲೆಗೆ ಪ್ಲಾನ್ ಮಾಡಿದ್ದಾರೆ. ಭಾನುವಾರ ಸಂಜೆ ವಿವೇಕಾನಂದ್ ತಂದೆ ಸುಭಾಷ್ ದೊಡ್ಡಮನಿ ಅವರಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ ಹ*ತ್ಯೆಗೆ ಯತ್ನಿಸಿದ್ದಾರೆ. ನಂತರ ತಂದೆಗೆ ಅಪಘಾತವಾಗಿದೆ ಎಂದು ವಿವೇಕಾನಂದ್‌ಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ವಿವೇಕಾನಂದ್ ಮನೆಯಿಂದ ಹೊರಗೆ ಹೋಗಿದ್ದಾನೆ. ಅತ್ತೆ ರೇಣವ್ವಾ ಜೊತೆ ಮಾನ್ಯ ಮನೆಯಲ್ಲಿದ್ದಳು.
ಇದನ್ನೂ ಓದಿ: ಹೆಂಡತಿ ಕಾಟದಿಂದ ಪಾರಾಗಲು ತನ್ನದೇ ಕೊಲೆ ಕತೆ ಹೆಣದವ ಪೊಲೀಸ್ ಬಲೆಗೆ
ಆರೋಪಿ ಪೊಲೀಸರ ವಶಕ್ಕೆ
ಮನೆಯಲ್ಲಿ ಇಬ್ಬರೇ ಇದ್ದಾಗ ದಾಳಿ ಮಾಡಿದ ಪಾಟೀಲ್ ಕುಟುಂಬಸ್ಥರು ಮಾರಕಾಸ್ತ್ರಗಳಿಂದ ಆಟ್ಯಾಕ್ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಾನ್ಯ ಸಾವನ್ನಪ್ಪಿದ್ದು, ಅತ್ತೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಮಾನ್ಯ ಪಾಟೀಲ್ ತಂದೆ ಪ್ರಕಾಶಗೌಡ ಪಾಟೀಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನುಳಿದ ಆರೋಪಿಗಳು ಎಸ್ಕೇಪ್ ಆಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ. ಮಾನ್ಯ ಆರು ತಿಂಗಳ ಗರ್ಭಿಣಿಯಾಗಿದ್ದರು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ 3ನೇ ದಿನಕ್ಕೆ ಪತ್ನಿಯ ಕೊಲೆ: ಪ್ರಿಯಕರನ ಮನೆ ಮುಂದೆ ಯುವತಿ ಶವವಿಟ್ಟು ಪೋಷಕರ ಪ್ರತಿಭಟನೆ

