ಸ್ವಂತ ಖರ್ಚಿನಲ್ಲಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಹೊರೆ: ರೈತರ ಗಾಯದ ಮೇಲೆ ಸರ್ಕಾರದಿಂದ ಬರೆ
ಶೀಘ್ರ ಸಂಪರ್ಕ ವಿದ್ಯುತ್ ಯೋಜನೆಯಡಿ ರೈತರ ಭದ್ರತಾ ಠೇವಣಿಗೆ ವಿದ್ಯುತ್ ಪರಿವರ್ತಕ ಮಾತ್ರ ಸರ್ಕಾರ ಉಚಿತವಾಗಿ ನೀಡಿ, ವಿದ್ಯುತ್ ಕಂಬ, ತಂತಿ ರೈತರೆ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕಿತ್ತು. ಈಗ ಸರ್ಕಾರ ಈ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ವಿಜಯಪುರ(ನ.18): ಭೀಕರ ಬರ ಪರಿಸ್ಥಿತಿಯಿಂದ ಪರಿತಪಿಸುತ್ತಿರುವ ರೈತರಿಗೆ ಈಗ ಅಸರ್ಪಕ ವಿದ್ಯುತ್ ಪೂರೈಕೆ ಸಂಕಷ್ಟ ತಂದಿದೆ. ವಿದ್ಯುತ್ ವ್ಯಾಪಕ ಬೇಡಿಕೆ ಅದರ ಜೊತೆಗೆ ವಿದ್ಯುತ್ ಉತ್ಪಾದನಾ ಕೊರತೆಯಿಂದಾಗಿ ವಿದ್ಯುತ್ ಕ್ಷಾಮ ಎದುರಾಗಿದ್ದು, ರೈತರ ಚಿಂತೆ ಮತ್ತಷ್ಟು ಹೆಚ್ಚಿಸಿದೆ. ಈ ನಡುವೆ ಟಿಸಿ ಅಳವಡಿಕೆ ಸೇರಿದಂತೆ ವಿವಿಧ ಸೌಲಭ್ಯ ಪಡೆದುಕೊಳ್ಳಲು ದುಬಾರಿ ಹಣ ಪಾವತಿಸಬೇಕಾದ ದುಸ್ಥಿತಿ ಬಂದಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರಿಗೆ ವರವಾಗಿದ್ದ ವಿದ್ಯುತ್ ವಿತರಣಾ ಕಂಪನಿಗಳಿಂದ (ಎಸ್ಕಾಂಗಳು) ನಿಯಮಾನುಸಾರ ಯೋಜನೆ ಪರವಾನಗಿ ಪಡೆಯದ ಕೃಷಿ ಕೊಳವೆ ಬಾವಿಗಳ ಅನಧಿಕೃತ ವಿದ್ಯುತ್ ಸಂಪರ್ಕಗಳ ಸಕ್ರಮಕ್ಕಾಗಿ ಸರ್ಕಾರ 10 ವರ್ಷದ ಹಿಂದೆ ಯುಎನ್‌ಐಪಿ (ಅನಧಿಕೃತ ಪಂಪ್ ಸೆಟ್‌ಗಳ ಅಕ್ರಮ ಸಕ್ರಮ) ಯೋಜನೆ ಜಾರಿಗೊಳಿಸಿತು. ಈ ಯೋಜನೆಯಡಿ ಎಸ್ಕಾಂಗಳು ರೈತರಿಂದ ಶುಲ್ಕ ಮಾತ್ರ ಕಟ್ಟಿಸಿಕೊಂಡು ಗರಿಷ್ಟ 500 ಮೀಟರ್ ದೂರದವರೆಗೆ ಉಚಿತ ವಿದ್ಯುತ್ ಮಾರ್ಗ, ಕಂಬ ಹಾಗೂ ಟಿ.ಸಿ ಸವಲತ್ತು ಕಲ್ಪಿಸುತ್ತಿದ್ದವು. ಈ ಯೋಜನೆಯಲ್ಲಿ ವಿದ್ಯುತ್ ಮಾರ್ಗ, ಕಂಬ ಮತ್ತು ಟ್ರಾನ್ಸ್‌ಫಾರ್ಮ್ರನ ಖರ್ಚನ್ನು ಎಸ್ಕಾಂಗಳೇ ಭರಿಸುತ್ತಿದ್ದವು. ಆದರೆ, ಈಗ ಈ ಯೋಜನೆಗಳನ್ನು ರಾಜ್ಯ ಸರ್ಕಾರ ದಿಢೀರ್ ನಿಲ್ಲಿಸಿದ್ದು, ರೈತರಿಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಬಿಜೆಪಿ, ಜೆಡಿಎಸ್‌ನಿಂದ ತೋರಿಕೆಗಾಗಿ ಬರ ವೀಕ್ಷಣೆ: ಸಚಿವ ಎಂ.ಬಿ.ಪಾಟೀಲ
ರೈತರು ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಈ ಹಿಂದೆ ರಾಜ್ಯ ಸರ್ಕಾರದಿಂದ ಅಕ್ರಮ ಸಕ್ರಮ ಮತ್ತು ಶೀಘ್ರ ಸಂಪರ್ಕ ಯೋಜನೆಗಳಡಿ ವಿದ್ಯುತ್ ಪರಿವರ್ತಕ ಸೇರಿ ಮೂಲಸೌಕರ್ಯಗಳನ್ನು ಭಾಗಶಃ ಸರ್ಕಾರವೇ ಉಚಿತ ಒದಗಿಸುತ್ತಿತ್ತು. ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕಾಗಿ ಕೊಳವೆಬಾವಿ ರೈತರು ₹24 ಸಾವಿರ ಭದ್ರತಾ ಶುಲ್ಕ ಪಾವತಿಸಬೇಕಿತ್ತು. ನಂತರ ಸರ್ಕಾರವೇ ವಿದ್ಯುತ್ ಪರಿರ್ತಕ, ಸುಮಾರು 500 ಮೀಟರ್ ವರೆಗೂ ವಿದ್ಯುತ್ ಕಂಬ ಎಳೆದು ಕೊಡುತ್ತಿತ್ತು. ಇನ್ನು ಶೀಘ್ರ ಸಂಪರ್ಕ ವಿದ್ಯುತ್ ಯೋಜನೆಯಡಿ ರೈತರ ಭದ್ರತಾ ಠೇವಣಿಗೆ ವಿದ್ಯುತ್ ಪರಿವರ್ತಕ ಮಾತ್ರ ಸರ್ಕಾರ ಉಚಿತವಾಗಿ ನೀಡಿ, ವಿದ್ಯುತ್ ಕಂಬ, ತಂತಿ ರೈತರೆ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕಿತ್ತು. ಈಗ ಸರ್ಕಾರ ಈ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಸ್ವಂತ ಖರ್ಚಿನ ಹೊರೆ
ಕೃಷಿ ಪಂಪಸೆಟ್‌ಗಳಿಗೆ ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಕಳೆದ ಸೆ.22ರ ನಂತರ ಬಂದ ಅರ್ಜಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಬೇಕಾದ ಮೂಲಸೌಕರ್ಯಗಳು ಸೇರಿ ವಿದ್ಯುತ್ ಪರಿವರ್ತಕ (ಟ್ರಾನ್ಸಫಾರ್ಮರ್) ಸಹಿತ ರೈತರು ಸ್ವಂತ ಖರ್ಚಿನಲ್ಲೇ ಪಡೆಯಬೇಕು. ಅಲ್ಲದೇ ಇದಕ್ಕಾಗಿ ಅಂದಾಜು ಪತ್ರಿಕೆಯ ದರದ 10 % ಎಸ್ಕಾಂಗಳಿಗೆ ಕೈಯಿಂದ ಕಟ್ಟಬೇಕು. ಈಗಿನ ಪರಸ್ಥಿತಿಯಲ್ಲಿ ಒಬ್ಬ ರೈತ ನೀರಾವರಿ ಪಂಪಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಕನಿಷ್ಟ ₹2 ಲಕ್ಷ ಖರ್ಚು ಮಾಡಬೇಕಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ವಿಶೇಷವಾಗಿ ಇಂಡಿ ತಾಲೂಕು ಭಾಗದಲ್ಲಿ ಅತಿ ಹೆಚ್ಚು ಕೃಷಿ ಪಂಪಸೆಟ್ ಬಳಕೆ ಇದೆ. ಜನರಿಗೆ ಒಂದು ಕಡೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಮತ್ತೊಂದು ಕಡೆ ರೈತರಿಗೆ ಸರಿಯಾಗಿ ವಿದ್ಯುತ್ ನೀಡದೇ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ರೈತವಿರೋಧಿ ನಿರ್ಧಾರಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಸಮಸ್ಯೆಗೆ ಸ್ಪಂದಿಸದ ಸರ್ಕಾರಗಳು: ಸಚಿವ ಎಂ.ಬಿ.ಪಾಟೀಲ್ ಮುಂದೆ ರೈತರ ಅಳಲು
ಒಬ್ಬ ರೈತ ಕನಿಷ್ಠ ₹2 ಲಕ್ಷ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಒಂದು ಟಿ.ಸಿಯಿಂದ ವಿದ್ಯುತ್ ಪಡೆದಿರುವ ಎಲ್ಲಾ ಮೋಟರ್ ಸುಡುವ ಸಾಧ್ಯತೆ ಇದೆ. ಒಮ್ಮೆ ಟಿ.ಸಿ ಸುಟ್ಟರೆ ಅದರ ಜೊತೆಗೆ ಮೋಟರು ಸುಡುವುದರಿಂದ ಒಟ್ಟು ₹3-4 ಲಕ್ಷ ಖರ್ಚು ಹಾಗೂ ಸಮಯ ವ್ಯರ್ಥ. ಆದ್ದರಿಂದ ಕೂಡಲೇ ಸರ್ಕಾರ ಹೊಸ ಆದೇಶ ಕೈಬಿಟ್ಟು ರೈತರಿಗೆ ಅನುಕೂಲವಾಗುವ ಯೋಜನೆ ಮಾಡಬೇಕು ಎಂದು ವಿಜಯಪುರ ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತಿಳಿಸಿದ್ದಾರೆ.
ರೈತರಿಗೆ ಹೊರೆಯಾಗದಂತೆ ಹೊಸ ಸಂಪರ್ಕ ಕಲ್ಪಿಸುವ ವಿದ್ಯುತ್ ಯೋಜನೆಗಳನ್ನು ಸರ್ಕಾರ ಏಕಾಏಕಿ ನಿಲ್ಲಿಸಿರುವುದು ಕೆರಳುವಂತೆ ಮಾಡಿದೆ. ಸರ್ಕಾರ ಕೂಡಲೇ ಅವಾಸ್ತವಿಕ ಆದೇಶ ಹಿಂಪಡೆದು ರೈತಪರ ವಿದ್ಯುತ್ ಯೋಜನೆಗಳನ್ನು ಮರುಜಾರಿಗೆ ತರಬೇಕು: ಶಾನೂರ ನಂದರಗಿ ರೈತರು, ಹೊನವಾಡ