ಭಾರೀ ಮಳೆಗೆ ವೀಳ್ಯದೆಲೆ ತೋಟವೇ ಸತ್ಯಾನಾಶ: ಕಂಗಾಲಾದ ರೈತರು..!
ನಿರಂತರ ಮಳೆ, ಕೆರೆ ಕೋಡಿ ಬಿದ್ದು ತೋಟಗಳಿಗೆ ನುಗ್ಗಿದ ನೀರು, ವೀಳ್ಯದೆಲೆ ಬಳ್ಳಿಯೇ ಕೊಳೆತು ಬೆಳೆಗಾರರು ಸಂಕಷ್ಟದಲ್ಲಿ, ಸಮೀಕ್ಷೆಗೂ ಬಾರದ ಅಧಿಕಾರಿಗಳ ಬಗ್ಗೆ ಬೆಳೆಗಾರರ ಆಕ್ರೋಶ
ನಾರಾಯಣ ಹೆಗಡೆ
ಹಾವೇರಿ(ಸೆ.11): ಶತ್ರುವಿನಂತೆ ಸುರಿಯುತ್ತಿರುವ ಮಳೆಯಿಂದ ನಮ್ಮ ಬದುಕೆಯೇ ಬೀದಿಪಾಲಾಗಿದೆ. ಹತ್ತಾರು ವರ್ಷ ನಿರಂತರವಾಗಿ ಆದಾಯ ತರುತ್ತಿದ್ದ ವೀಳ್ಯದೆಲೆ ತೋಟವೇ ಕೊಳೆತು ಸತ್ಯಾನಾಶ ಆಗೈತ್ರಿ, ಮಳೆ ನಿಂತ್ರೂ ಕೆರೆ ಕೋಡಿ ಬಿದ್ದು ಬರುವ ನೀರು ಇನ್ನೂ ಕಡಿಮೆಯಾಗಿಲ್ಲ. ಮುಂದೇನು ಎಂಬ ಚಿಂತಿ ಕಾಡಾಕತ್ತೈತ್ರಿ... 6 ಎಕರೆಯಲ್ಲಿ ಕರಿ ಮತ್ತು ಅಂಬಾಡೆ ಎಲೆ ಬೆಳೆಯುತ್ತಿದ್ದ ಸವಣೂರಿನ ಬಾಹುದ್ದೀನ್ ಇನಾಮದಾರ್ ಅವರ ನೋವಿನ ಮಾತಿದು. ಇದು ಕೇವಲ ಅವರೊಬ್ಬರ ಮಾತಲ್ಲ, ವೀಳ್ಯದೆಲೆ ಬೆಳೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ನೂರಾರು ಕುಟಂಬಗಳ ಸಂಕಟವೂ ಹೌದು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವೀಳ್ಯದೆಲೆ ತೋಟಗಳಲ್ಲಿ ನೀರು ನಿಂತು ಸಂಪೂರ್ಣ ತೋಟವೇ ನಾಶವಾಗುತ್ತಿದೆ.
ಅತಿವೃಷ್ಟಿಯ ಅವಾಂತರ ಒಂದಾ ಎರಡಾ? ಕೆಲ ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆ ಹೊತ್ತು ತಂದ ಸಂಕಷ್ಟಗಳು ಮುಂದುವರಿಯುತ್ತಲೇ ಇವೆ. ಸವಣೂರು, ಶಿಗ್ಗಾಂವಿ ತಾಲೂಕಿನ ವೀಳ್ಯದೆಲೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ವಿಳ್ಯದೆಲೆ ಬೆಳೆದ ರೈತರಿಗೆ ದಾರಿಯೇ ತೋಚದಂತಾಗಿದ್ದು, ಭವಿಷ್ಯದ ಕರಾಳತೆಗಳನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ನವಾಬರ ಕಾಲದಿಂದಲೂ ಸವಣೂರು ವೀಳ್ಯದೆಲೆ ಖ್ಯಾತಿ ಪಡೆದಿದೆ. ಇಲ್ಲಿ ಬೆಳೆಯುವ ಕರಿ ಎಲೆ ಮತ್ತು ಅಂಬಾಡೆ ಎಲೆಗಳಿಗೆ ಎಲ್ಲೆಡೆ ಬೇಡಿಕೆಯಿದೆ. ಆದರೆ, ಈಗ ಬೆಳೆಯೇ ಇಲ್ಲದಂತಾಗಿದೆ.
KARNATAKA FLOODS: ‘ನೋಡೋ ನನ್ನಪ್ಪ ನೋಡೋ, ಎಲ್ಲಾ ಸರ್ವನಾಶ ಆಗೈತಿ!
ಸವಣೂರು ತಾಲೂಕಿನ 10ಕ್ಕೂ ಅಧಿಕ ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದ ಎಲೆಬಳ್ಳಿ ಕೊಳೆಯಲಾರಂಭಿಸಿದೆ. ಕಾರಡಗಿ ಗ್ರಾಮ ಒಂದರಲ್ಲಿಯೇ ನೂರಾರು ಎಕರೆ ಎಲೆಬಳ್ಳಿ ತೋಟ ಕೊಳೆತಿದೆ. ಪಕ್ಕದಲ್ಲೇ ಇರುವ ಮಾದಾಪುರ ಕೆರೆಯಿಂದ ನೀರು ಎಲೆಬಳ್ಳಿ ತೋಟಗಳಿಗೆ ನುಗ್ಗಿ, ಐದಾರು ದಿನಗಳ ಕಾಲ ತೋಟದೊಳಗೆ ಇದ್ದ ಪರಿಣಾಮ ನೀರು ನಿಂತು ಬೇರಿನಿಂದಲೇ ಎಲೆಬಳ್ಳಿಗಳು ಕೊಳೆತಿವೆ. ಇನ್ನು ಕೆಲವು ದಿನಗಳಲ್ಲಿ ಇಡಿ ತೋಟಕ್ಕೆ ತೋಟವೇ ಕೊಳೆತು ಹೋಗಲಿದೆ.
ಸವಣೂರು ಪಟ್ಟಣದ ಮೋತಿ ತಲಾಬ್ ಕೆರೆ ಕೋಡಿ ಬಿದ್ದು ಕೆಳಭಾಗದಲ್ಲಿರುವ ತೋಟಗಳೆಲ್ಲ ಜಲಾವೃತಗೊಂಡಿವೆ. ನಿತ್ಯವೂ ಮಳೆಯಾಗುತ್ತಿರುವುದರಿಂದ ಕೆರೆಯಿಂದ ನೀರು ಬರುವುದು ಕಡಿಮೆಯಾಗುತ್ತಿಲ್ಲ. ಎಲೆ ತೋಟದಲ್ಲಿ ಮೊಣಕಾಲು ಮಟ ನೀರು, ರಾಡಿ ಸಂಗ್ರಹವಾಗಿದ್ದು, ಬುಡದಲ್ಲೇ ಎಲೆಬಳ್ಳಿ ಕೊಳೆಯತೊಡಗಿದೆ. ಶಿಗ್ಗಾಂವಿ ತಾಲೂಕಿನ ನಾಗನೂರು ಕೆರೆ ಕೋಡಿ ಬಿದ್ದು ನೂರಾರು ಎಕರೆ ತೋಟಗಳಿಗೆ ನುಗ್ಗಿದೆ. ಇದರಿಂದ ವೀಳ್ಯದೆಲೆ ತೋಟ ಸಂಪೂರ್ಣ ಹಾಳಾಗಿದೆ.
ಆದಾಯವೇ ಬಂದ್:
ಪ್ರತಿ ಎಕರೆಗೆ .3-4 ಲಕ್ಷ ಖರ್ಚು ಮಾಡಿ ರೈತರು ಎಲೆಬಳ್ಳಿ ತೋಟ ಮಾಡಿದ್ದಾರೆ. ಆರಂಭದ 2 ವರ್ಷದ ಬಳಿಕ ವೀಳ್ಯದೆಲೆ ಹೆಚ್ಚು ಸಿಗುವುದಿಲ್ಲ. ಒಂದು ಸಾರಿ ಬಳ್ಳಿ ಹಾಕಿದರೆ ಕನಿಷ್ಠ 10 ವರ್ಷ ಎಲೆ ಬಳ್ಳಿಯಿಂದ ಆದಾಯ ಬರುತ್ತದೆ. ವರ್ಷಕ್ಕೆ ಲಕ್ಷಾಂತರ ರುಪಾಯಿ ಆದಾಯವನ್ನು ಬೆಳೆಗಾರರು ಪಡೆಯುತ್ತಿದ್ದರು. ಆದರೆ, ಈಗ ಎಲೆಬಳ್ಳಿ ಹಾಕಿ 2 ವರ್ಷ ಆಗುವುದರೊಳಗಾಗಿ ನಿರಂತರವಾಗಿ ಸುರಿಯುತ್ತಿರುವ ಮಳೆ ಎಲ್ಲವನ್ನೂ ನುಂಗಿ ಹಾಕಿದೆ. ಇದರಿಂದ ವೀಳ್ಯದೆಲೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ.
ಮನೆಯ ಸದಸ್ಯರು ಸೇರಿ ತೋಟದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೀಗ ವೀಳ್ಯ ಕೊಳೆತಿದ್ದರಿಂದ ಕುಟುಂಬಗಳಿಗೆ ಆದಾಯ ಬಂದ್ ಆಗಿದೆ. ನಿತ್ಯ ದುಡಿದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.
ಕೊಳೆತ ಎಲೆಬಳ್ಳಿಯ ಎಲೆಗಳು ಒಣಗಲಾರಂಭಿಸಿವೆ. ಮತ್ತೆ ಈ ತೋಟಗಳಿಗೆ ಎಲೆಬಳ್ಳಿ ಹಚ್ಚಲು ಎರಡು ವರ್ಷ ಬೇಕು. ಈಗ ಇರುವ ಕೊಳೆತ ಎಲೆಬಳ್ಳಿಗಳನ್ನು ತೇವಾಂಶ ಕಡಿಮೆಯಾದ ಮೇಲೆ ತೆಗೆಯಬೇಕಿದೆ. ಎಲ್ಲ ಸ್ವಚ್ಛ ಮಾಡಿ ಎಲೆಬಳ್ಳಿ ಹಚ್ಚಬೇಕು. ಎಲೆಬಳ್ಳಿ ಹಚ್ಚಿ ಎರಡು ವರ್ಷದ ನಂತರ ವೀಳ್ಯದೆಲೆ ಕೈಗೆ ಬರುತ್ತದೆ. ಇಷ್ಟೆಲ್ಲಾ ಆಗುವಾಗ ರೈತನ ಪರಿಸ್ಥಿತಿ ಮತ್ತಷ್ಟುಹೈರಾಣಾಗಿರುವುದರಲ್ಲಿ ಸಂಶಯವಿಲ್ಲ.
ಸವಣೂರಿನ ವೀಳ್ಯದೆಲೆ ರಾಜ್ಯ, ಅಂತಾರಾಜ್ಯ ಅಷ್ಟೇ ಅಲ್ಲದೇ ವಿದೇಶಗಳಿಗೂ ರಪ್ತಾಗುತ್ತಿದ್ದವು. ಆದರೆ, ಅಕಾಲಿಗೆ ಮಳೆ ಇದೀಗ ಎಲೆಬಳ್ಳಿ ಬೆಳೆಗಾರರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಇಷ್ಟಾದರೂ ಯಾವ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸದಿರುವುದು ಎಲೆಬಳ್ಳಿ ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
Karnataka Floods: ಮಳೆ ಹಾನಿ ಪ್ರದೇಶಗಳಿಗೆ ಸಚಿವ ಬಿ.ಸಿ.ಪಾಟೀಲ್ ಭೇಟಿ
ಯಾವ ಅಧಿಕಾರಿಯೂ ಬಂದಿಲ್ಲ:
ವೀಳ್ಯದೆಲೆ ಉತ್ಪಾದನೆ ಕುಸಿತದಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. 12 ಸಾವಿರ ಎಲೆಗೆ ಗುಣಮಟ್ಟ, ಗಾತ್ರದ ಮೇಲೆ .12ರಿಂದ 18 ಸಾವಿರ ಇದೆ. ಆದರೆ, ಜಿಲ್ಲೆಯಲ್ಲಿ ಎಲೆಯೇ ಸಿಗುತ್ತಿಲ್ಲ. ಇದುವರೆಗೆ ಬೆಳೆ ಹಾನಿ ಸಮೀಕ್ಷೆಗೆ ಯಾರೂ ಬಂದಿಲ್ಲ. ತೋಟದಲ್ಲಿ ರಾಡಿಯಲ್ಲಿ ಅಧಿಕಾರಿಗಳು ಯಾಕೆ ಬಂದು ನಿಲ್ಲುತ್ತಾರೆ? ಅವರಿಗೆ ಅದೆಲ್ಲ ಬೇಕಾಗಿಲ್ಲ. ಮಾಹಿತಿ ನೀಡಿದರೂ ಇದುವರೆಗೆ ಯಾರೂ ಬಂದು ನೋಡಿಲ್ಲ ಎಂಬುದು ರೈತರ ಅಳಲಾಗಿದೆ.
ವೀಳ್ಯದೆಲೆ ತೋಟಕ್ಕೆ ಹೆಚ್ಚು ನೀರು ಬೇಕು. ಆದರೆ, ನೀರು ನಿಲ್ಲಬಾರದು. ಕೆಲ ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆ ಮತ್ತು ಕೆರೆ ಕೋಡಿ ಬಿದ್ದು ತೋಟದಲ್ಲಿ ನೀರು ನಿಂತಿದೆ. ತೇವಾಂಶ ಹೆಚ್ಚಿ ಎಲೆಬಳ್ಳಿ ಕೊಳೆಯುತ್ತಿದೆ. 6 ಎಕರೆ ಕರಿ ಮತ್ತು ಅಂಬಾಡಿ ಬೆಳೆ ಸಂಪೂರ್ಣ ಹಾಳಾಗಿದೆ. ಪ್ರತಿ ತಿಂಗಳ .40ರಿಂದ 50 ಸಾವಿರ ಆದಾಯ ಬರುತ್ತಿತ್ತು. ಈಗ ತೋಟವೇ ಹಾಳಾಗಿದ್ದು, ಮುಂದೇನು ಎಂಬುದು ತೋಚುತ್ತಿಲ್ಲ ಅಂತ ವೀಳ್ಯದೆಲೆ ಬೆಳೆಗಾರ ಬಾಹುದ್ದೀನ್ ಇನಾಮದಾರ್ ತಿಳಿಸಿದ್ದಾರೆ.