Karnataka Floods: ‘ನೋಡೋ ನನ್ನಪ್ಪ ನೋಡೋ, ಎಲ್ಲಾ ಸರ್ವನಾಶ ಆಗೈತಿ!
- ‘ನೋಡೋ ನನ್ನಪ್ಪ ನೋಡೋ, ಎಲ್ಲಾ ಸರ್ವನಾಶ ಆಗೈತಿ...’
- ಹಾವೇರಿಯಲ್ಲಿ ಮಳೆ ಹಾನಿ ಬಗ್ಗೆ ಕೇಂದ್ರದ ಅಧಿಕಾರಿಗಳ ಮುಂದೆ ಜನರ ಕಣ್ಣೀರು
- ಹಾವೇರಿ, ಯಾದಗಿರಿ, ಉಡುಪಿಯಲ್ಲಿ ಪರಿಶೀಲನೆ, ಹಾನಿ ಮಾಹಿತಿ ಸಂಗ್ರಹ
ಬೆಂಗಳೂರು (ಸೆ.10) : ಅತಿವೃಷ್ಟಿಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಭೇಟಿ ನೀಡುತ್ತಿರುವ ಕೇಂದ್ರ ಅಧ್ಯಯನ ತಂಡವು ಹಾವೇರಿ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಿಂದಾದ ಹಾನಿ ಕುರಿತು ಪರಿಶೀಲನೆ ನಡೆಸಿತು. ರೈತರ ಹೊಲಗಳು, ಮನೆ, ಸೇತುವೆ ಕುಸಿದು ಆದ ಹಾನಿ ಕುರಿತು ಪರಿಶೀಲಿಸಿದ ಅಧಿಕಾರಿಗಳು ಸಂತ್ರಸ್ತರ ಅಹವಾಲನ್ನೂ ಆಲಿಸಿದರು. ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿಯಲ್ಲಿ ರೈತ ನಾಗಪ್ಪ ಪೂಜಾರ ಅವರು ಕೇಂದ್ರ ಅತಿವೃಷ್ಟಿಅಧ್ಯಯನ ತಂಡದ ಅಧಿಕಾರಿಗಳ ಎದುರು ಕಣ್ಣೀರಿಡುತ್ತಲೇ ಬೆಳೆ ಹಾನಿ ಪರಿಸ್ಥಿತಿ ವಿವರಿಸಿದರು. ‘ನೋಡೋ ನನ್ನಪ್ಪ ನೋಡೋ, ಎಲ್ಲಾ ಸರ್ವನಾಶ ಆಗೈತಿ...’ ಅಧಿಕಾರಿಗಳ ಮುಂದೆ ಮಳೆಯಿಂದಾದ ಬೆಳೆ ಹಾನಿ ಕುರಿತು ಗೋಳಿಟ್ಟರು. ಈ ವೇಳೆ ಅಧಿಕಾರಿಗಳು ರೈತನಿಗೆ ಧೈರ್ಯ ಹೇಳಿ ಪರಿಹಾರ ನೀಡುವ ಭರವಸೆ ನೀಡಿದರು.
ಹೊಟ್ಟೆಗೆ ಹಿಟ್ಟಿಲ್ಲ, ಮೊಬೈಲಿಗೆ ನೆಟ್ ಇಲ್ಲ: ದಿವಾಳಿಯನ್ನೂ ನಾಚಿಸುತ್ತಿದೆ ಪಾಕಿಸ್ತಾನದ ಪರಿಸ್ಥಿತಿ!
ಜಲಶಕ್ತಿ ಮಂತ್ರಾಲಯದ ಸಿಡಬ್ಲ್ಯುಸಿ ನಿರ್ದೇಶಕ ಅಶೋಕ್ ಕುಮಾರ್ ವಿ,(Ashok Kumar.V) ಕೇಂದ್ರ ಹೆದ್ದಾರಿ ಸಚಿವಾಲಯದ ಸೂಪರಿಂಡೆಂಟ್ ಎಂಜಿನಿಯರ್, ವಿ.ವಿ.ಶಾಸ್ತ್ರಿ(V.V.Shashtri), ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ(Dr.G.S.Shrinivas Reddy) ನೇತೃತ್ವದ ತ್ರಿಸದಸ್ಯ ತಂಡ ಹಾವೇರಿಯಲ್ಲಿ ಪರಿಶೀಲನೆ ನಡೆಸಿತು. ಪ್ರವಾಸದುದ್ದಕ್ಕೂ ಸಂತ್ರಸ್ತರ ಬೇಡಿಕೆಗಳನ್ನು ತಂಡ ನಿಮ್ಮ ಮನವಿಗಳನ್ನು, ನಿಮ್ಮ ನಷ್ಟದ ವಿವರವನ್ನು ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಅಧಿಕಾರಿಗಳಾದ ಆಶಿಷ್ ಕುಮಾರ್, ಡಾ.ಮನೋಜ್ ರಾಜನ್ ಸಚಿವ ವಿ.ಸುನಿಲ್ ಕುಮಾರ್ ಅವರಿದ್ದ ತಂಡ ಪರಿಶೀಲನೆ ನಡೆಸಿದರು. ಸ್ವರ್ಣ ನದಿ ದಡದಲ್ಲಿ ಆಗಿರುವ ಬೆಳೆ ಹಾನಿಕುರಿತು ಅಧಿಕಾರಿಗಳಿಂದ, ರೈತರಿಂದ ವಿವರಣೆ ಪಡೆದರು. ಇನ್ನು ಯಾದಗಿರಿಯಲ್ಲಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ತ್ರಿಸದಸ್ಯ ತಂಡ ಪರಿಶೀಲನೆ ನಡೆಸಿತು.
ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ಇಬ್ಬರು ನೀರುಪಾಲು :
ಕಲಬುರಗಿ, ಉತ್ತರ ಕನ್ನಡ ಜಿಲ್ಲೆ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಕ್ಷೀಣಿಸಿದೆ. ಆದರೂ ಅಲ್ಲಲ್ಲಿ ಮಳೆಯಿಂದಾಗಿ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು ಪ್ರತ್ಯೇಕ ಪ್ರಕರಣದಲ್ಲಿ ಬಾಲಕ ಸೇರಿದಂತೆ ಇಬ್ಬರು ಬಲಿಯಾಗಿದ್ದಾರೆ.ಕಲಬುರಗಿ ಜಿಲ್ಲಾದ್ಯಂತ ಬಿರುಸಿನ ಮಳೆಯಾಗಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕಮಲಾಪುರ ತಾಲೂಕಿನ ಲಾಡಮುಗಳಿ ಬಳಿ ಹಳ್ಳ ದಾಟುವಾಗ ದಾನೇಶ್ವರಿ ಎಂಬ ಯುವತಿಯೊಬ್ಬಳು ಕೊಚ್ಚಿಕೊಂಡು ಹೋಗಿ ಸಾವಿಗೀಡಾಗಿದ್ದಾಳೆ. ಅಫ್ಜಲಪುರ ತಾಲೂಕಿನಲ್ಲಿ ಕೊರವಿ- ಕೋಡ್ಲಿ ನಡುಲಿನ ಸೇತುವೆ ಸಂಪರ್ಕ ಮುಳುಗಿ ಹೋಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿಯ ಜಿಲ್ಲೆಯ ಗೋಕಾಕದಲ್ಲಿ ಸಹ ಧಾರಾಕಾರ ಮಳೆಯಾಗಿದ್ದು ಹಳ್ಳದಾಟುತ್ತಿದ್ದ ಯುವಕನೊಬ್ಬ ನೀರಿನ ರಭಸಕ್ಕೆ ಕೊಚ್ಚಿಹೋದ ಘಟನೆ ನಡೆದಿದೆ. ಕೊಳವಿ ಗ್ರಾಮದ ದುಂಡಪ್ಪ ಮಾಲದಿನ್ನಿ(25) ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಯುವಕ. ಉತ್ತರ ಕನ್ನಡದ ಕರಾವಳಿಯಲ್ಲಿ ಶುಕ್ರವಾರ ಮಳೆ ಆರಂಭವಾಗಿದ್ದು, ಸಾಧಾರಣ ಉತ್ತಮವಾಗಿಯೇ ಸುರಿಯುತ್ತಿದೆ. ಕೊಪ್ಪಳ ತಾಲೂಕಿನ ಮಧ್ಯೆ ಹಿರೇಹಳ್ಳ ಜಲಾಶಯದಿಂದ ನದಿಗೆ ದಿಢೀರನೆ ನೀರು ಬಿಟ್ಟಿದ್ದರಿಂದ ನದಿ ದಂಡೆಯಲ್ಲಿ ಪಂಪ್‌ಸೆಟ್ ದುರಸ್ತಿಗೆಂದು ತೆರಳಿದ್ದ ಐವರನ್ನು ಸಿಲುಕಿದ್ದು, ಅಗ್ನಿಶಾಮಕ ಹಾಗೂ ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ.
Bengaluru Rains: ಬೆಂಗಳೂರಿನಲ್ಲಿ ಮಳೆ ಇಳಿದರೂ ಮುಗಿಯದ ನೆರೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದರೂ ಕಳಸ ತಾಲೂಕಿನ ಹಿರೇಬೈಲ್ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಧರೆ ಕುಸಿತ ಉಂಟಾಗಿದೆ. ಇದರಿಂದಾಗಿ ಕೊಟ್ಟಿಗೆಹಾರದ ರಸ್ತೆ ಸಂಪರ್ಕ ಆಸ್ತವ್ಯಸ್ತವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಸಾರ್ಯ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದು ನಷ್ಟಸಂಭವಿಸಿದ ಘಟನೆ ವರದಿಯಾಗಿದೆ. ಮನೆ ಕುಸಿತದ ಸಂದರ್ಭದಲ್ಲಿ ಮನೆಯಲಿದ್ದ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನುಳಿದಂತೆ ಬಳ್ಳಾರಿ, ಗದಗ, ಯಾದಗಿರಿ, ರಾಯಚೂರು ಸೇರಿದಂತೆ ಬಹುತೇಕ ಎಲ್ಲೆಡೆ ಮಳೆ ತೀವ್ರ ಇಳಿಮುಖವಾಗಿದ್ದು, ಪ್ರವಾಹದ ಅಬ್ಬರವೂ ಕಡಿಮೆಯಾಗಿದೆ.