Asianet Suvarna News Asianet Suvarna News

ಮಳೆಗಾಲದಲ್ಲೂ ಸುಡು ಸುಡು ಬಿಸಿಲು: ಕೈ ಕೊಟ್ಟ ಮುಂಗಾರು, ಕಂಗಾಲಾದ ರೈತರು!

ಕಲ್ಲೂ ಹೋತು ಕಲ್ಲಿಗೆ ಹತ್ತಿದ ಬೆಲ್ಲಾನೂ ಹೋತು ಅಂತಿದ್ದಾರೆ ಮುಂಡರಗಿ ರೈತರು| ಬಿತ್ತನೆ ಮಾಡಿದ್ದ ಬೀಜವು ಚಿಗುರೊಡೆದಿದ್ದು, ತೇವಾಂಶ ಕೊರತೆಯಿಂದ ಒಣಗಿ ಹಾಳಾಗುತ್ತಿವೆ| ತಾಲೂಕಿನ ಹಲವು ಭಾಗದಲ್ಲಿ ಮಳೆ ಆಗದಿರುವುದರಿಂದ ಮುಂಡರಗಿ ತಾಲೂಕಿನಲ್ಲಿ ಮತ್ತೊಮ್ಮೆ ಬರದ ಛಾಯೆ ಆವರಿಸಿದೆ|

Farmers Faces Probelms due Lack of Rain in Mundaragi in Gadag District
Author
Bengaluru, First Published Jun 27, 2020, 9:12 AM IST

ಶರಣು ಸೊಲಗಿ

ಮುಂಡರಗಿ(ಜೂ. 27):  ನಿಮ್ಮೂರಾಗ ಮಳಿಯಾಗೈತೇನ್ರಿ, ಇಲ್‌ಬಿಡ್ರಿ. ನಿಮ್‌ ಊರಾಗರ ಆಗೈತೇನ್ರಿ? ನಮ್ಮೂರಾಗೂ ಆಗಿಲ್ಲ ಬಿಡ್ರಿ. ಕೆಟ್‌ ಗಾಳಿ ಹಚ್ಚಿ ಹೊಡಿಯಾಕತೈತಿ. ನೆತ್ತಿ ಸುಡುವಾಂಗ ಉರಿ ಬಿಸಲ್‌ ಐತಿ, ಆದ್ರ ಮಳೆ ಮಾತ್ರ ಇಲ್ಲ. ನಾವ್‌ ನೋಡಿದ್ರ ಕೈಯಾಗಿದ್ದ ರೊಕ್ಕಾ ಖರ್ಚು ಮಾಡಿ ಮಣ್ಣಾಗ ಹಾಕಿ ಕುಂತೀವಿ. ಕಲ್ಲೂ ಹೋತು ಕಲ್ಲಿಗೆ ಹತ್ತಿದ ಬೆಲ್ಲಾನೂ ಹೋತು ಅನ್ನುವಂಗಾಗೈತಿ ನಮ್‌ ಬಾಳ್ವೆ..... ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ರೈತರು ಮಾತನಾಡಿಕೊಳ್ಳುತ್ತಿರುವ ರೀತಿ ಇದು.

ಈಗಾಗಲೇ ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ ಐದು ಮಳೆಗಳು ಹೋಗಿದ್ದು, ಇದೀಗ ಆರಿದ್ರಾ ಮಳೆ ಪ್ರಾರಂಭವಾಗಿದೆ. ಮುಂಡರಗಿ ಪಟ್ಟಣ ಸೇರಿ ವೆಂಕಟಾಪುರ, ಹೈತಾಪುರ, ಹಳ್ಳಿಗುಡಿ, ಹಳ್ಳಿಕೇರಿ, ಹಾರೋಗೇರಿ, ಬಸಾಪುರ, ಬಾಗೇವಾಡಿ, ಜಾಲವಾಡಗಿ ಮೊದಲಾದ ಕಡೆಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದೆ. ಹೀಗಾಗಿ ಹೆಸರು, ಶೇಂಗಾ, ಗೋವಿನಜೋಳ ಮೊದಲಾದ ಬೆಳೆ ಬಿತ್ತನೆ ಮಾಡಲಾಗಿದೆ. ಆದರೆ ಬಿತ್ತನೆ ಮಾಡಿದ್ದ ಬೀಜವು ಚಿಗುರೊಡೆದಿದ್ದು, ತೇವಾಂಶ ಕೊರತೆಯಿಂದ ಒಣಗಿ ಹಾಳಾಗುತ್ತಿವೆ. ತಾಲೂಕಿನ ಹಲವು ಭಾಗದಲ್ಲಿ ಮಳೆ ಆಗದಿರುವುದರಿಂದ ಮುಂಡರಗಿ ತಾಲೂಕಿನಲ್ಲಿ ಮತ್ತೊಮ್ಮೆ ಬರದ ಛಾಯೆ ಆವರಿಸಿದಂತಾಗಿದೆ.

 ನರಗುಂದದಲ್ಲಿ ಹೆಚ್ಚುತ್ತಿರುವ ಅಂತರ್ಜಲ: ನಿಲ್ಲದ ಭೂಕುಸಿತ

ಇನ್ನೂ ಬಿತ್ತನೆ ಮಾಡಬೇಕಿದೆ:

ಪ್ರಸ್ತುತ ಸಾಲಿನಲ್ಲಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ 17,900 ಹಾಗೂ ಖುಷ್ಕಿ 41,400 ಹೆಕ್ಟೇರ್‌ ಸೇರಿ ಒಟ್ಟು 59,300 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯ ಅಭಾವದಿಂದಾಗಿ ಈ ಬಾರಿ ನೀರಾವರಿ ಪ್ರದೇಶದಲ್ಲಿ 4545.5 ಹೆಕ್ಟೇರ್‌ ಖುಷ್ಕಿ ಜಮೀನಿನಲ್ಲಿ 6959 ಹೆಕ್ಟೇರ್‌ ಸೇರಿ ಒಟ್ಟು 11704.2 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಬತ್ತ 4400 ಹೆ. ಆಗಬೇಕಾಗಿದ್ದು, 240 ಹೆಕ್ಟೇರ್‌ ಆಗಿದೆ. ಹೈಬ್ರೀಡ್‌ ಜೋಳ 1300 ಹೆ. ಆಗಬೇಕಿತ್ತು, 398 ಹೆಕ್ಟೇರ್‌ ಆಗಿದೆ, ಗೋವಿನಜೋಳ 19000 ಹೆಕ್ಟೇರ್‌ ಆಗಬೇಕಿತ್ತು, 2092 ಹೆಕ್ಟೇರ್‌ ಆಗಿದೆ. ಹೆಸರು 13500 ಆಗಬೇಕಿತ್ತು, 4645 ಹೆಕ್ಟೇರ್‌ ಆಗಿದೆ. ಶೇಂಗಾ 6000 ಹೆಕ್ಟೇರ್‌ ಆಗಬೇಕಿತ್ತು, 1226 ಹೆಕ್ಟೇರ್‌ ಆಗಿದೆ. ಸೂರ್ಯಕಾಂತಿ 9500 ಆಗಬೇಕಿತ್ತು. ಆದರೆ, 883 ಹೆಕ್ಟೇರ್‌ ಆಗಿದೆ. ಹತ್ತಿ 2500 ಆಗಬೇಕಿತ್ತು, ಆದರೆ 689 ಹೆಕ್ಟೇರ್‌ ಆಗಿದೆ. ಕಬ್ಬು 2000 ಆಗಬೇಕಾಗಿದ್ದು ಕೇವಲ 1316.2 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. ಹೀಗೆ ಸುಮಾರು 30ರಿಂದ 40 ಸಾವಿರ ಹೆಕ್ಟೇರ್‌ ಭೂಮಿ ಬಿತ್ತನೆಯಾಗದೇ ಹಾಗೇ ಉಳಿದಿವೆ.

ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗದ ಕಾರಣ ಅಲ್ಲಲ್ಲಿ ನೀರಾವರಿ ಇದ್ದವರು ಮಾತ್ರ ಕೆಲವರು ಬಿತ್ತನೆ ಮಾಡಿದ್ದು, ಒಣಬೇಸಾಯ ಇರುವವರು ಶೇ. 2ರಷ್ಟುರೈತರು ಮಾತ್ರ ಬಿತ್ತನೆ ಮಾಡಿದ್ದಾರೆ. ಈಗಾಗಲೇ ಶೇಂಗಾ, ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದು, ಒಂದೇ ಮಳೆಯಾದರೂ ಎಲ್ಲರೂ ಬಿತ್ತನೆಗೆ ಮುಂದಾಗಲಿದ್ದೇವೆ. ಆದರೆ, ಮಳೆರಾಯ ಮಾತ್ರ ನಮ್ಮ ಮೇಲೆ ಮುನಿಸಿಕೊಂಡಿದ್ದಾನೆ. ಇದು ಹೀಗೆ ಮುಂದುವರಿದರೆ ರೈತರಿಗೆ ಹೆಚ್ಚಿನ ತೊಂದರೆಯಾಗಲಿದೆ ಎಂದು ಪೇಠಾಲೂರು ರೈತರು ಬಸಪ್ಪ ಕಬ್ಬೇರಹಳ್ಳಿ ಅವರು ಹೇಳಿದ್ದಾರೆ.  

ಮಳೆ ಕಡಿಮೆಯಾದರೂ ಧೈರ್ಯ ಮಾಡಿ ಈಗಾಗಲೇ ಹೆಸರು ಮತ್ತು ಸೂರ್ಯಕಾಂತಿ ಬಿತ್ತಿದ್ದು, ಶೇಂಗಾ ಬಿತ್ತನೆಗೆ ಬೀಜ ತಯಾರಿ ಇವೆ. ಆದರೆ, ಮಳೆರಾಯನ ಮುನಿಸಿನಿಂದ ಸುಮ್ಮನೆ ಕೂಡುವಂತಾಗಿದೆ. ಶೀಘ್ರ ಮಳೆಯಾಗದಿದ್ದರೆ ಹುಟ್ಟಿರುವ ಹೆಸರು ಹಾಗೂ ಸೂರ್ಯಕಾಂತಿ ಬೆಳೆಯೂ ಸಂಪೂರ್ಣ ಒಣಗಿ ಹೋಗಿ ರೈತರು ಇನ್ನಷ್ಟು ಹಾನಿ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮಳೆರಾಯ ಶೀಘ್ರವಾಗಿ ನಮ್ಮ ಮೇಲೆ ಕರುಣೆ ತೋರಿಸಬೇಕಿದೆ ಎಂದು ಮುಂಡರಗಿಯ ಕೋಟೆ ಭಾಗ ರೈತ ರುದ್ರಪ್ಪ ಲದ್ದಿ ಅವರು ತಿಳಿಸಿದ್ದಾರೆ.
 

Follow Us:
Download App:
  • android
  • ios