Asianet Suvarna News Asianet Suvarna News

ಕಲಘಟಗಿ ಬಂದ್ ಯಶಸ್ವಿ- ಸಂತೋಷ ಲಾಡ್ ವಿರುದ್ಧ ರೈತರ ಆಕ್ರೋಶ

ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಲಘಟಗಿ ತಾಲೂಕು ಸೇರಿಸಲು ಆಗ್ರಹಿಸಿ ಬಿಜೆಪಿ ಬುಧವಾರ ಕರೆ ನೀಡಿದ್ದ ಕಲಘಟಗಿ ಬಂದ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

Farmers demand declaration of Kalaghatagi drought-prone taluk rav
Author
First Published Sep 21, 2023, 1:45 PM IST

ಕಲಘಟಗಿ (ಸೆ.21) :  ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕಲಘಟಗಿ ತಾಲೂಕು ಸೇರಿಸಲು ಆಗ್ರಹಿಸಿ ಬಿಜೆಪಿ ಬುಧವಾರ ಕರೆ ನೀಡಿದ್ದ ಕಲಘಟಗಿ ಬಂದ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಪಟ್ಟಣದ ಎಪಿಎಂಸಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಕಾರವಾರ ರಸ್ತೆ, ಬಮ್ಮಿಗಟ್ಟಿ ಕ್ರಾಸ್, ಬಸ್ ನಿಲ್ದಾಣ ಮೂಲಕ ಸಾಗಿ ಆಂಜನೇಯ ವೃತ್ತದಲ್ಲಿ ಸಮಾವೇಶಗೊಂಡಿತು. ತಾಲೂಕಿನ ವಿವಿಧ ಹಳ್ಳಿಗಳಿಂದ ರೈತರು ಟ್ರ್ಯಾಕ್ಟರ್ , ಚಕ್ಕಡಿಗಳಲ್ಲಿ ಬಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಸೀಲ್ದಾರ್ ಕಚೇರಿಯವರಿಗೆ ತೆರಳಿ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಮಾತನಾಡಿ, ಸಚಿವ ಸಂತೋಷ ಲಾಡ(Santosh lad) ಅವರಿಗೆ ತಮ್ಮದೇ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ತಾಲೂಕಿನಲ್ಲಿ ಬರಗಾಲ ಆವರಿಸಿದ್ದರೂ ಸರ್ಕಾರದ ಮಟ್ಟದಲ್ಲಿ ಕಲಘಟಗಿ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೋಷಿಸುವಲ್ಲಿ ವಿಫಲರಾಗಿದ್ದಾರೆ. ಕಲಘಟಗಿ ಕ್ಷೇತ್ರಕ್ಕೆ ಭೇಟಿ ನೀಡದೇ ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸೀಮಿತರಾಗಿದ್ದಾರೆ. ಶಾಸಕ, ಸಚಿವರಾಗಲು ಮಾತ್ರ ನಮ್ಮ ಕ್ಷೇತ್ರದ ಜನರು ಬೇಕಿತ್ತು. ಈಗ ರೈತರು ಸಮಸ್ಯೆಯಲ್ಲಿ ಇರುವಾಗ ಸಚಿವರಿಗೆ ನಾವು ಬೇಡವೆ? ಎಂದು ಪ್ರಶ್ನಿಸಿದರು.

ಭಾರತ ಎಂದು ಹೇಳುವುದರಿಂದ ಬಡವರು ಶ್ರೀಮಂತರಾಗಿ ಬಿಡುತ್ತಾರೆಯೇ?: ಸಚಿವ ಲಾಡ್

ಶಶಿಧರ ನಿಂಬಣ್ಣವರ ಮಾತನಾಡಿ, ಕಲಘಟಗಿ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡುವವರಿಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಮಗೆ ನ್ಯಾಯ ಸಿಗದಿದ್ದರೆ ಸಚಿವರ ನಿವಾಸದ ಎದುರು ಧರಣಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ. ಇದಕ್ಕೂ ಸ್ಪಂದನೆ ಸಿಗದಿದ್ದರೆ ಬೆಂಗಳೂರು ವಿಧಾನಸಭಾ ವರೆಗೂ ಪಾದಯಾತ್ರೆ ನಡೆಸಲೂ ಸಿದ್ಧ ಎಂದು ಗುಡುಗಿದರು.

ಪ್ರತಿಭಟನಾಕಾರರು ಕಾರವಾರ-ಹುಬ್ಬಳ್ಳಿ ರಸ್ತೆ ಬಂದ್ ಮಾಡಿದ್ದರಿಂದ ಸುಮಾರು 2 ಗಂಟೆಗಳು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಟ್ಟಣದ ಹೊರವಲಯದಲ್ಲೇ ವಾಹನಗಳಿಗೆ ತಡೆ ನೀಡಲಾಗಿತ್ತು. ಒಂದೆರೆಡು ಕಿ.ಮೀ. ವರೆಗೂ ಎರಡು ದಿಕ್ಕಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ದೂರದೂರಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು. ಬಸ್‌ಗಳು, ಗೂಡ್ಸ ವಾಹನಗಳು ಸಂಚರಿಸದ ಕಾರಣ ಜನರು ಕಷ್ಟ ಅನುಭವಿಸಬೇಕಾಯಿತು. 

ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್‌ ಲಾಡ್‌

ಬಿಜೆಪಿ ಮುಖಂಡರಾದ ಸಿ.ಎಫ್. ಪಾಟೀಲ, ನಿಂಗಪ್ಪ ಸುತಗಟ್ಟಿ, ಬಸವರಾಜ ಶೆರೆವಾಡ, ಸದಾನಂದ ಚಿಂತಾಮಣಿ, ಐ.ಸಿ. ಗೋಕುಲ, ಚಂದ್ರುಗೌಡ ಪಾಟೀಲ, ಮದನ ಕುಲಕರ್ಣಿ, ಕಲ್ಲಪ್ಪ ಪುಟ್ಟಪ್ಪನವರ, ಗೀತಾ ಮರಲಿಂಗಣ್ಣವರ, ವಿಜಯಲಕ್ಷ್ಮೀ ಆಡಿನವರ, ಶಶಿಧರ ಹುಲಿಕಟ್ಟಿ, ಅಣ್ಣಪ್ಪ ಓಲೇಕಾರ, ಗುರುನಾಥ ದಾನೇನವರ, ಪರಶುರಾಮ ದುಂಡಿ, ಶಿವು ಮಾದಿ, ಸುರೇಶ ಶೀಲವಂತರ, ಅರ್ಜುನ ಲಮಾಣಿ, ಮಂಗಲಪ್ಪ ಲಮಾಣಿ, ಮಹೇಶ ತಿಪ್ಪಣ್ಣವರ, ಗಂಗಪ್ಪ ಗೌಳಿ, ವಜ್ರಕುಮಾರ ಮಾದನಬಾವಿ, ವೀರಭದ್ರ ಮನಗುಂಡಿ, ಪರಶುರಾಮ ಹುಲಿಹೊಂಡ, ಶ್ರೀಧರ ದ್ಯಾವಪ್ಪನವರ, ಸುನೀಲ ಕಮ್ಮಾರ, ಸಹದೇವ ಹರಮಣ್ಣವರ, ಬಸವರಾಜ ಮಾದರ, ಪುಂಡಲೀಕ ಜಾಧವ, ಆನಂದ ಕಡ್ಲಾಸ್ಕರ, ಸಂಜು ಲಮಾಣಿ ಇತರರಿದ್ದರು.

Follow Us:
Download App:
  • android
  • ios